ಮುಖಪುಟ /ಸುದ್ದಿ ಸಮಾಚಾರ 

ಲಂಚ ಪ್ರಕರಣ - ಶಾಸಕ ಸಂಪಂಗಿಗೆ ಜೈಲು

ಬೆಂಗಳೂರು, ಜೂ.೨- ಶಾಸಕರ ಭವನದಲ್ಲಿ ಲಂಚ ಸ್ವೀಕರಿಸಿದ್ದ ಕೆಜಿಎಫ್ ಕ್ಷೇತ್ರದ ಬಿಜೆಪಿ ಶಾಸಕ ವೈ.ಸಂಪಂಗಿ ತಪ್ಪಿತಸ್ಧ ಎಂದು ಲೋಕಾಯುಕ್ತ ನ್ಯಾಯಾಲಯ ಘೋಷಿಸಿದ್ದು, ಅವರಿಗೆ 3.5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ೧ ಲಕ್ಷ ರೂಗಳ ದಂಡ ವಿಧಿಸಿದೆ.

ಈ ಮೂಲಕ ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಸೆರೆವಾಸ ಶಿಕ್ಷೆಗೆ ಗುರಿಯಾದ ಅಪಕೀರ್ತಿಗೂ ಸಂಪಂಗಿ ಪಾತ್ರರಾಗಿದ್ದಾರೆ.

ಸಂಪಂಗಿ ವಿರುದ್ಧದ ಲಂಚ ಆರೋಪ ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್, ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಶಾಸಕ ಸಂಪಂಗಿ ಅಪರಾಧಿ ಎಂದು ಘೋಷಿಸಿದ್ದು, ಎರಡನೇ ಆರೋಪಿ ಮುಷ್ತಾಕ್‌ಪಾಷಾ ಅವರನ್ನು ಆರೋಪಮುಕ್ತಗೊಳಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ ೭ ರಡಿ ಒಂದು ವರ್ಷ ಕಠಿಣ ಶಿಕ್ಷೆ ೩೦ ಸಾವಿರ ರೂ ದಂಡ, ಸೆಕ್ಷನ್ ೮ ರಡಿ ಒಂದು ವರ್ಷ ಶಿಕ್ಷೆ ೩೦ ಸಾವಿರ ರೂ ದಂಡ ಹಾಗೂ ೧೩/೧{ಡಿ}ರಡಿ ಮೂರೂವರೆ ವರ್ಷ ಶಿಕ್ಷೆ ಹಾಗೂ ೪೦ ಸಾವಿರ ರೂಗಳ ದಂಡ ವಿಧಿಸಿದೆ. ಒಂದು ವೇಳೆ ಅಪರಾಧಿ ದಂಡ ಪಾವತಿಸಲು ವಿಫಲವಾದರೆ ಒಂದೂವರೆ ವರ್ಷಗಳ ಕಾಲ ಹೆಚ್ಚುವರಿ ಕಠಿಣ ಕಾರಾಗೃಹ ಶಿಕ್ಷೆಗೊಳಪಡುವಂತೆ ಆದೇಶಿಸಿದರು.

೨೦೦೯ ರ ಜನವರಿ ೨೧ ರಂದು ಕೆಜಿಎಫ್ ಕ್ಷೇತ್ರದ ಬಿಜೆಪಿ ಶಾಸಕ ವೈ.ಸಂಪಂಗಿ, ಶಾಸಕರ ಭವನದಲ್ಲಿ ಕೆಜಿಎಫ್‌ನ ಹುಸೇನ್ ಮೊಯಿನ್ ಫಾರೂಕ್ ಅವರಿಂದ ಭೂವಿವಾದ ಬಗೆಹರಿಸುವ ಸಲುವಾಗಿ ಐದು ಲಕ್ಷ ರೂಗಳ ಲಂಚ ಕೇಳಿದ್ದರು.

ಈ ಸಂಬಂಧ ಫಾರೂಕ್ ಲೋಕಾಯುಕ್ತರಿಗೆ ದೂರು ನೀಡಿದ್ದರಿಂದ ಅಂದಿನ ಲೋಕಾಯುಕ್ತ ಎಸ್ಪಿ ಮಧುಕರಶೆಟ್ಟಿ ನೇತೃತ್ವದ ತಂಡ ಶಾಸಕರ ಭವನದ ಮೇಲೆ ದಾಳಿ ನಡೆಸಿ ಶಾಸಕ ಸಂಪಂಗಿಯನ್ನು ೫೦ ಸಾವಿರ ರೂಗಳೊಂದಿಗೆ ಲಂಚದ ಹಣದೊಂದಿಗೆ ಬಂಧಿಸಿದ್ದರು.

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಇದೊಂದು ಕಪ್ಪುಚುಕ್ಕೆಯಾಗಿ ಮಾರ್ಪಟ್ಟಿತ್ತು. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಶಾಸಕ ಸಂಪಂಗಿ ಲಂಚ ಪ್ರಕರಣ ಬಿಜೆಪಿ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿತ್ತು.

ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ಕೈಗೆತ್ತಿಕೊಂಡ ಸಂದರ್ಭದಲ್ಲಿ ರೇಣುಕಾಚಾರ್ಯ ಸೇರಿದಂತೆ ಕೆಲವು ಬಿಜೆಪಿ ನಾಯಕರು ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್‌ಹೆಗಡೆ ವಿರುದ್ದವೇ ಪ್ರತಿಭಟನೆ ನಡೆಸಿದ್ದರು.

ಇದಾದ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಸಂಪಂಗಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು.

ಬಳಿಕ ಹೈಕೋರ್ಟ್‌ನಲ್ಲಿ ಸಂಪಂಗಿಗೆ ಜಾಮೀನು ದೊರೆತ ಪರಿಣಾಮ ಬಿಡುಗಡೆಯಾಗಿತ್ತು. ನಂತರ ಸಂಪಂಗಿ ವಿರುದ್ದ ವಿಚಾರಣೆಯನ್ನು ತೀವ್ರಗೊಳಿಸಿದ ಲೋಕಾಯುಕ್ತ ಪೊಲೀಸರು ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ತನಿಖೆಯ ವಿಚಾರಣೆ ಪೂರ್ಣಗೊಳಿಸಿದ ಲೋಕಾಯುಕ್ತ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಬೆಳಿಗ್ಗೆ ಆಶಾಭಾವದಿಂದಲೇ ನ್ಯಾಯಾಲಯಕ್ಕೆ ಆಗಮಿಸಿದ ಶಾಸಕ ಸಂಪಂಗಿಗೆ ಶಾಕ್ ಕಾದಿತ್ತು.

ಸಂಪಂಗಿ ವಿರುದ್ದ ಆರೋಪ ಸಾಬೀತಾಗಿದ್ದು ಅಪರಾಧಿ ಎಂದು ನ್ಯಾಯಾಲಯ ಘೋಷಿಸುತ್ತಿದ್ದಂತೆ ಶಾಸಕ ಸಂಪಂಗಿ ನ್ಯಾಯಾಲಯದಲ್ಲೇ ಕಣ್ಣೀರಿಟ್ಟರು. ಕೂಡಲೇ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಶಿಕ್ಷೆಯ ಪ್ರಮಾಣ ಪ್ರಕಟಿಸುತ್ತಿದ್ದಂತೆ ಸಂಪಂಗಿ ಮತ್ತಷ್ಟು ಜರ್ಜರಿತರಾಗಿ ಹೋದರು.

ಸಂಪಂಗಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ದರು. ಈ ಮಧ್ಯೆ ಲೋಕಾಯುಕ್ತ ನ್ಯಾಯಾಲಯದ ತೀರ್ಪಿನ ವಿರುದ್ದ ಹೈಕೋರ್ಟ್ ಮೊರೆ ಹೋಗುವುದಾಗಿ ಸಂಪಂಗಿ ಪರ ವಕೀಲರು ತಿಳಿಸಿದ್ದಾರೆ.

ಶಿಕ್ಷೆಯ ಪ್ರಮಾಣ ಮೂರು ವರ್ಷಕ್ಕೆ ನಿಗದಿಯಾಗಿದ್ದರೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ ಶಿಕ್ಷೆಯ ಮೂರುವರೆ ವರ್ಷ ನೀಡಿರುವುದರಿಂದ ಹೈಕೋರ್ಟ್‌ನಲ್ಲೇ ಜಾಮೀನು ಅರ್ಜಿ ಸಲ್ಲಿಸಬೇಕಾಗಿದೆ ಎಂದು ವಕೀಲರು ತಿಳಿಸಿದ್ದಾರೆ.

ಶಾಸಕ ಸ್ಧಾನಕ್ಕೆ ಕುತ್ತು: ಲಂಚ ಪ್ರಕರಣದಲ್ಲಿ ಸಂಪಂಗಿ ತಪ್ಪಿತಸ್ಧರೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಧಾನವನ್ನು ಅಮಾನತ್ತಿನಲ್ಲಿಡಲು ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ನಿರ್ಧರಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಲಂಚ ಪ್ರಕರಣದಲ್ಲಿ ತಪ್ಪಿತಸ್ಧರೆಂದು ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸುವ ಪರಿಸ್ಧಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಲೋಕಸಭೆಯ ಕಾರ್ಯದರ್ಶಿ ಅವರನ್ನು ಕೋರಲಿದ್ದಾರೆ. ಅವರಿಂದ ನಿರ್ದಿಷ್ಟ ಸೂಚನೆ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಮುಖಪುಟ /ಸುದ್ದಿ ಸಮಾಚಾರ