ಮುಖಪುಟ /ಸುದ್ದಿ ಸಮಾಚಾರ 

 

ಬರ ನಿರ್ವಹಣೆಗೆ ಕೇಂದ್ರ ಸೂಕ್ತ ನೆರವು ನೀಡಿಲ್ಲ - ಸದಾನಂದಗೌಡ

Sadanandagowdaಬೆಂಗಳೂರು,ಜೂನ್,೧-ತೀವ್ರ ಬರಪರಿಸ್ಧಿತಿಗೆ ಸಿಲುಕಿರುವ ರಾಜ್ಯಕ್ಕೆ ಸಮರ್ಪಕವಾಗಿ ಹಣ ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದ್ದು, ಇದನ್ನು ಪ್ರತಿಭಟಿಸಿ ಪ್ರಧಾನಿ ಡಾ: ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಇಂದಿಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇವಲ ೨೮೩ ಕೋಟಿ ರೂ ಬಿಡುಗಡೆ ಮಾಡಿದ್ದು ಇದರಿಂದ ಹೆಚ್ಚಿನ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಆವರಿಸಿದ ಬರಗಾಲದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ಐದು ಸಾವಿರ ಕೋಟಿ ರೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆವು.

ರಾಜ್ಯದ ೧೨೫ ತಾಲ್ಲೂಕುಗಳಲ್ಲಿ ಬರಗಾಲ ಆವರಿಸಿದೆ ಎಂಬುದು ಕೇಂದ್ರಕ್ಕೆ ಗೊತ್ತಿದೆ.ಸಾಲದೆಂಬಂತೆ ಖುದ್ದು ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ಅವರೇ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಇಷ್ಟಾದ ಮೇಲೂ ಇನ್ನೂರಾ ಎಂಭತ್ಮೂರು ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ ಎಂದರೆ ಇದನ್ನು ಮಲತಾಯಿ ಧೋರಣೆ ಎನ್ನದೇ ಇನ್ನೇನು ಹೇಳಬೇಕು?ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ಮನ್‌ಮೋಹನ್‌ಸಿಂಗ್ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ವಿರೋಧವನ್ನು ವ್ಯಕ್ತಪಡಿಸುವುದಾಗಿ ಅವರು ನುಡಿದರು.

ಹೀಗೆ ಪತ್ರ ಬರೆಯುವುದಲ್ಲದೇ ಸಧ್ಯದಲ್ಲೇ ದೆಹಲಿಗೆ ಹೋಗಿ ಪ್ರಧಾನಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸುವುದಾಗಿ ವಿವರಿಸಿದ ಅವರು,ಕೇಂದ್ರ ಸರ್ಕಾರ ಈ ರೀತಿ ಮಲತಾಯಿ ಧೋರಣೆ  ತೋರುವುದರ ಬದಲಾಗಿ ರಾಜ್ಯಗಳಿಗೆ ಅಗತ್ಯದ ನೆರವು ನೀಡಬೇಕು ಎಂದು ಪ್ರತಿಪಾದಿಸಿದರು.

ರಾಜ್ಯ ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾಗಬಹುದು.ಈಗಲೋ ಇನ್ನಾರು ತಿಂಗಳಿಗೋ ವಿಧಾನಸಭೆ ಚುನಾವಣೆ ಎದುರಾಗುವುದರಿಂದ ಅದಕ್ಕೆ ತಯಾರಾಗುವಂತೆ ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ಹೇಳಿಕೆಗೆ ಅವರು ಸಹಮತ ವ್ಯಕ್ತಪಡಿಸಲಿಲ್ಲ.

ವಿಧಾನಸಭೆಗೆ ಈಗಲೋ ಇನ್ನಾರು ತಿಂಗಳಿಗೋ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ.ಅಂತಹ ಸಾಧ್ಯತೆಗಳೂ ಕಾಣುತ್ತಿಲ್ಲ.ಆರು ತಿಂಗಳ ಮುಂಚೆಯೇ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಬಹುದಾದರೂ ಅವಧಿಗೂ ಮುನ್ನವೇ ಯಾಕೆ ಚುನಾವಣೆ ನಡೆಸಬೇಕು ಎಂಬುದಕ್ಕೆ ಅದು ಕಾರಣಗಳನ್ನು ಕೊಡಬೇಕಾಗುತ್ತದೆ ಎಂದರು.

ಈಗಿನ ಸ್ಥಿತಿಯಲ್ಲಿ ನಮ್ಮ ಸರ್ಕಾರಕ್ಕೆ ಮುಂದಿನ ಏಪ್ರಿಲ್, ಮೇ ತಿಂಗಳವರೆಗೆ ಮುಂದುವರಿಯಲು ಕಾಲಾವಕಾಶವಿದೆ.ಹೀಗಾಗಿ ಅಲ್ಲಿಯವರೆಗೂ ಬಿಜೆಪಿ ಸರ್ಕಾರ ಮುಂದುವರಿಯಲಿದೆ ಎಂದು ನುಡಿದರು.

ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಮಾಜೀ ಉಪಪ್ರಧಾನಿ,  ಬಿಜೆಪಿಯ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಇದೆಲ್ಲ ಸಹಜ ಎಂದರು.

ಆದರೆ ಈ ಕುರಿತು ಸಧ್ಯಕ್ಕೆ ಎದ್ದಿರುವ ಎಲ್ಲ ವಿವಾದಗಳು ಬಗೆ ಹರಿಯಲಿದ್ದು ಪಕ್ಷದ ನಾಯಕರು ಅದನ್ನು ಸರಿಪಡಿಸಲಿದ್ದಾರೆ.ಇದರಲ್ಲಿ ಯಾವುದೇ ಅನುಮಾನ ಬೇಕಿಲ್ಲ ಎಂದು ವಿಶ್ವಾಸ      ವ್ಯಕ್ತ ಪಡಿಸಿದರು.

ಮುಖಪುಟ /ಸುದ್ದಿ ಸಮಾಚಾರ