ಮುಖಪುಟ /ಸುದ್ದಿ ಸಮಾಚಾರ 

ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಆಯ್ಕೆ ಅಸಿಂಧು - ಹೈಕೋರ್ಟ್

Nandish Reddyಬೆಂಗಳೂರು, ಜೂ ೧:- ೨೦೦೮ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ಕೆ.ಆರ್. ಪುರಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದ ಶಾಸಕ ನಂದೀಶ್ ರೆಡ್ಡಿ ಅವರ ಆಯ್ಕೆ ಅಸಿಂಧು ಎಂದು ರಾಜ್ಯ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.

೨೦೦೮ರಲ್ಲಿ ನಡೆದಿದ್ದ ಚುನಾವಣೆಯ ಸಂದರ್ಭದಲ್ಲಿ ನಂದೀಶ್ ರೆಡ್ಡಿ ಅವರಿಗೆ ಅನುಕೂಲ ಮಾಡಿಕೊಡಲು ಚುನಾವಣಾಧಿಕಾರಿಗಳು ಉದ್ದೇಶಪೂರ್ವಕವಾಗಿ ತಮ್ಮ ನಾಮಪತ್ರವನ್ನು ವಿನಾ ಕಾರಣ ತಿರಸ್ಕರಿಸಿದ್ದರು ಎಂದು ಆರೋಪಿಸಿ ಎಡಪಕ್ಷದ ಅಭ್ಯರ್ಥಿ ಕವಿತಾ ಮಹೇಶ್ ಎಂಬುವವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸಿದ್ದು, ನಂದೀಶ್ ರೆಡ್ಡಿ ಅವರ ಶಾಸಕತ್ವವನ್ನು ಅಸಿಂಧು ಎಂದು ಹೇಳಿದೆ. ಜೊತೆಗೆ ಈ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸುವಂತೆಯೂ ಆದೇಶ ನೀಡಿದೆ.

ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಅವರನ್ನೊಳಗೊಂಡ ಹೈಕೋರ್ಟ್ ಪೀಠ ಕವಿತಾ ಮಹೇಶ್ ಅವರ ನಾಮಪತ್ರವನ್ನು ಸಕಾರಣವಿಲ್ಲದೆಯೂ ವಜಾ ಮಾಡಿದ ಚುನಾವಣಾಧಿಕಾರಿಯ ವಿರುದ್ಧವೂ ಕಿಡಿ ಕಾರಿದೆ. ನಂದೀಶ್ ರೆಡ್ಡಿ ಅವರಿಗೆ ಅನುಕೂಲ ಮಾಡಿಕೊಡಲು ತಮ್ಮ ನಾಮಪತ್ರ ತಿರಸ್ಕರಿಸಲಾಗಿತ್ತು ಎಂದು ಆರೋಪಿಸಿದ್ದ ಅರ್ಜಿದಾರರ ವಾದವನ್ನು ಪುರಸ್ಕರಿಸಿದೆ.

ಈಗಾಗಲೇ ಬಿಜೆಪಿ ಸರ್ಕಾರ ೪ ವರ್ಷ ಅವಧಿ ಪೂರ್ಣಗೊಳಿಸಿದ್ದು, ನಂದೀಶ್ ರೆಡ್ಡಿ ಅವರು ಕೂಡ ಕಳೆದ ನಾಲ್ಕ ವರ್ಷಗಳಿಂದ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ಇನ್ನೊಂದು ವರ್ಷ ಮಾತ್ರವೇ ಬಾಕಿ ಉಳಿದಿದ್ದು, ಈಗ ಇನ್ನಾರು ತಿಂಗಳೊಳಗೆ ಚುನಾವಣಾ ಆಯೋಗ ಮರು ಚುನಾವಣೆ ನಡೆಸಬೇಕಾದ ಸ್ಥಿತಿ ಎದುರಾಗಿದೆ.

ಈ ಮಧ್ಯೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಂದೀಶ್ ರೆಡ್ಡಿ ಅವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ. 

ಮುಖಪುಟ /ಸುದ್ದಿ ಸಮಾಚಾರ