ಮುಖಪುಟ /ಸುದ್ದಿ ಸಮಾಚಾರ 

ಜಾಮೀನಿಗೆ ಲಂಚ ನ್ಯಾಯಾಧೀಶರ ಅಮಾನತು

ಬೆಂಗಳೂರು, ಜೂ.೧: ಆಂಧ್ರದ ನೆಲದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಹೊತ್ತು ಸಿಬಿಐ ಬಂಧನದಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡಲು ಲಂಚ ಪಡೆದ ಆರೋಪದ ಮೇಲೆ ಹೈದರಾಬಾದ್‌ನಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ. ಪಟ್ಟಾಭಿ ರಾಮರಾವ್ ಅವರನ್ನು ಅಮಾನತುಗೊಳಿಸಿ ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಆದೇಶ ಹೊರಡಿಸಿದ್ದಾರೆ.

ಅಮಾನತು ಆದೇಶವನ್ನು ನಿನ್ನೆ ರಾತ್ರಿ ನ್ಯಾಯಾಧೀಶರಿಗೆ ಜಾರಿ ಮಾಡಲಾಗಿದ್ದು, ಹೈಕೋಟ್‌ನ ಅನುಮತಿ ಇಲ್ಲದೆ ಹೈದರಾಬಾದ್‌ನಿಂದ ಅಥವಾ ದೇಶದಿಂದ ಹೊರಹೋಗಬಾರದು ಎಂದು ಸೂಚಿಸಲಾಗಿದೆ.

ಹೈದ್ರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಟ್ಟಾಭಿ ರಾಮರಾವ್ ಅವರು ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡಲು 10 ಕೋಟಿ ರೂಪಾಯಿ ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿದೆ. ಜಾಮೀನು ನೀಡುವ ಮೊದಲು 3 ಕೋಟಿ ರೂಪಾಯಿ ಕೊಡಬೇಕು, ನಂತರ 7 ಕೋಟಿ ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದ ಆರೋಪ ಅವರ ಮೇಲಿದೆ. ನ್ಯಾಯಾಧೀಶರ ಪುತ್ರ ಹಾಗೂ ನಿವೃತ್ತ ನ್ಯಾಯಮೂರ್ತಿಯೊಬ್ಬರು ಈ ಪ್ರಕ್ರಿಯೆಯಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ರೆಡ್ಡಿ ಅವರಿಗೆ ಮಂಜೂರಾಗಿದ್ದ ಜಾಮೀನನ್ನು ಆಂಧ್ರ ಪ್ರದೇಶ ಹೈಕೋರ್ಟ್ ರದ್ದುಪಡಿಸಿದೆ.

ಮೂರು ಹಂತದಲ್ಲಿ ಬಳ್ಳಾರಿಯಿಂದ ಬ್ಯಾಗ್ ಗಳಲ್ಲಿ ತುಂಬಿಕೊಂಡು ಹಣವನ್ನು ತೆಗೆದುಕೊಂಡು ಹೋಗಲಾಗಿತ್ತು ಎಂದು ಹೇಳಲಾಗಿದ್ದು, ಈಗ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರ ಆಪ್ತರ ಮೇಲೂ ಕಣ್ಣಿಟ್ಟಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ಮೂರು ಹೆಚ್ಚುವರಿ ನ್ಯಾಯಾಲಯಗಳನ್ನು ಆರಂಭಿಸಿದಾಗ ರಾವ್ ಅವರನ್ನು ಪ್ರಥಮ ದರ್ಜೆ ವಿಶೇಷ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು.

ಮುಖಪುಟ /ಸುದ್ದಿ ಸಮಾಚಾರ