ಮುಖಪುಟ /ಸುದ್ದಿ ಸಮಾಚಾರ   
      

ಇಂದು ಹಾಲಿ, ಮಾಜಿ ಸಿಎಂ ಧರ್ಮಸ್ಥಳಕ್ಕೆ

ಎಲ್ಲರ ಚಿತ್ತ ಶ್ರೀಕ್ಷೇತ್ರದತ್ತ...

*ಟಿ.ಎಂ.ಸತೀಶ್

Yadiyurappa, H.D. Kumaraswamyಬೆಂಗಳೂರು, ಜೂ. ೨೬- ಹಾಲಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ - ಕುಮಾರಸ್ವಾಮಿ ಅವರ ನಡುವೆ ನಾಳೆ ನಡೆಯಬೇಕಿದ್ದ ಆಣೆ ಪ್ರಮಾಣ ಪ್ರಕರಣ ಹಲವು ಸ್ವಾಮಿಗಳ ಮಧ್ಯಪ್ರವೇಶ ಹಾಗೂ ಬಿಜೆಪಿ ವರಿಷ್ಠರ ಸೂಚನೆಯಿಂದ ತಣ್ಣಗಾಗಿದ್ದರೂ ರಾಜಕೀಯ ಪ್ರಹಸನದ ಕುತೂಹಲ ಮಾತ್ರ ಇನ್ನೂ ಜೀವಂತವಾಗಿದೆ.

ಮಠಾಧಿಪತಿಗಳ, ಸ್ವಾಮೀಜಿಗಳ ಮಾತಿಗೆ ಗೌರವ ನೀಡಿ ಹಾಗೂ ಪಕ್ಷದ ವರಿಷ್ಠರ ಆದೇಶದಂತೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಪ್ರಕಟಿಸಿದ್ದರೂ ಆಣೆ ಮಾಡಲು ಬನ್ನಿ ಎಂದು ಸವಾಲು ಎಸೆದು ಜಾಹೀರಾತನ್ನೇ ನೀಡಿದ್ದ ಮುಖ್ಯಮಂತ್ರಿ, ಆಣೆ ಮಾಡದ ತಪ್ಪಿಗೆ ತಪ್ಪೊಪ್ಪಿಗೆ ಕಾಣಿಕೆ ಅರ್ಪಿಸಲು ನಾಳೆ ಶ್ರೀಕ್ಷೇತ್ರಕ್ಕೆ ಹೋಗುತ್ತಿದ್ದಾರೆ.

ಇಂದೇ ತಮ್ಮ ಕೆಲವು ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿರುವ ಮುಖ್ಯಮಂತ್ರಿ ಪುತ್ತೂರಿನಲ್ಲಿ ಇಳಿದು ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆದು ನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಆಣೆ ಮಾಡುವುದು ಖಚಿತ- ಎಚ್ಡಿಕೆ 

ಈ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಧರ್ಮಸ್ಥಳಕ್ಕೆ ಬನ್ನಿ ಎಂದು ನಾನು ಕರೆದಿರಲಿಲ್ಲ. ನಾನು ಸುಳ್ಳು ಹೇಳಿದ್ದೇನೆ ಎಂದು ಧರ್ಮಸ್ಥಳಕ್ಕೆ ಕರೆದವರೇ ಅವರು, ನಾನು ಧರ್ಮಸ್ಥಳಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಉಂಟು ಮಾಡಿದವರೂ ಅವರೇ, ಈಗ ಅವರು ಬರಲಿ ಬಿಡಲಿ ನಾನಂತೂ ಧರ್ಮಸ್ಥಳಕ್ಕೆ ಹೋಗೇ ಹೋಗುತ್ತೇನೆ. ಧರ್ಮಸ್ಥಳ ಶ್ರೀ ಮಂಜುನಾಥನ ಮುಂದೆ ಪ್ರಮಾಣ ಮಾಡುತ್ತೇನೆ. ನನ್ನ ಆತ್ಮ ಸಾಕ್ಷಿಯಂತೆ ನಡೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಇಂದು ರಾಮನಗರದ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದು, ನಾಳೆ ದೇವರ ದರ್ಶನ ಪಡೆಯುವುದಾಗಿ ಹಾಗೂ ಶ್ರೀಕ್ಷೇತ್ರದಲ್ಲಿ ಜನತೆಯ ಎದುರು ಇನ್ನಷ್ಟು ಸತ್ಯ ಹೇಳುವುದಾಗಿ ಪ್ರಕಟಿಸಿದ್ದು. ಈ ಹೇಳಿಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿದ್ದೆ ಗೆಡಿಸಿದೆ.

ತಾವು ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡುವುದಾಗಿ, ಇನ್ನಷ್ಟು ಹೇಳಿಕೆ ನೀಡುವುದಾಗಿ ಕುಮಾರಸ್ವಾಮಿ ಪ್ರಕಟಿಸುತ್ತಿದ್ದಂತೆ ಗಲಿಬಿಲಿಗೊಂಡ ಯಡಿಯೂರಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ತಮ್ಮ ಸಚಿವ ಸಂಪುಟದ ಕೆಲವು ಸಹೋದ್ಯೋಗಿಗಳಾದ ಬಿ.ಎನ್. ಬಚ್ಚೇಗೌಡ, ಶೋಭಾಕರಂದ್ಲಾಜೆ, ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ ಮೊದಲಾದವರೊಂದಿಗೆ ತಮ್ಮ ಖಾಸಗಿ ಗೃಹ ಧವಳಗಿರಿಯಲ್ಲಿ ಸಮಾಲೋಚನೆ ನಡೆಸಿ ಕುಮಾರಸ್ವಾಮಿ ಹೋರಾಟಕ್ಕೆ ಪ್ರತಿತಂತ್ರ ರೂಪಿಸಲು ಕಸರತ್ತು ನಡೆಸಿದರು.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಜೆಟ್‌ನಲ್ಲಿ ಹಣಕಾಸು ಮಂಜೂರಾಗಿರುವ ಕೆಲವು ಇಲಾಖೆಗಳಲ್ಲಿ ಆಗಬೇಕಾಗಿರುವ ಕಾರ್ಯಗಳು, ಹಿಂದಿನ ವರ್ಷದಲ್ಲಿ ಆಗಿಸುವ ಸಾಧನೆ ಕುರಿತಂತೆ ಮಾತುಕತೆ ನಡೆಸಲಾಗಿದೆ. ಸಂಜೆಯವರೆಗೂ ಸಭೆ ನಡೆಯಲಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.

ಧರ್ಮಸ್ಥಳದಲ್ಲಿ ಬಿಗಿ ಭದ್ರತೆ

ಈ ಎಲ್ಲ ಘಟನಾವಳಿಗಳ ನಡುವೆ ಧರ್ಮಸ್ಥಳಕ್ಕೆ ಆಣೆ ಮಾಡಲು ಕರೆದವರು, ಆಣೆ ಮಾಡಲು ಒಪ್ಪಿದವರಿಬ್ಬರೂ ಆಣೆ ಮಾಡದಿದ್ದರೂ ದರ್ಶನಕ್ಕಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇಡೀ ಕ್ಷೇತ್ರದಲ್ಲಿ ಎಲ್ಲೆಡೆ ಪೊಲೀಸರೇ ಕಂಡು ಬರುತ್ತಿದ್ದಾರೆ.

ನಾಳೆ ಇಬ್ಬರು ನಾಯಕರು ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸುಮಾರು ೮೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕುಮಾಸ್ವಾಮಿ ಹಾಗೂ ಯಡಿಯೂರಪ್ಪ ಅವರಿಬ್ಬರಿಗೂ ಇಳಿದುಕೊಳ್ಳಲು ಶಾಂತಿವನ ಹಾಗೂ ಸನ್ನಿಧಿ ವಸತಿಗೃಹಗಳಲ್ಲಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಬ್ಬರು ನಾಯಕರಿಗೂ ಪ್ರತ್ಯೇಕ ಸಮಯದಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಾಧ್ಯಮಗಳು ನಾಳಿನ ರಾಜಕೀಯ ಪ್ರಹಸನವನ್ನು ಚಿತ್ರೀಕರಿಸಿಕೊಳ್ಳಲು ಹಾಗೂ ಬಿತ್ತರಿಸಲು ಧರ್ಮಸ್ಥಳಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಎಲ್ಲ ವಸತಿಗೃಹಗಳೂ ಭರ್ತಿಯಾಗಿವೆ. ಸೋಮವಾರವಾದ್ದರಿಂದ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಮುಖ್ಯಮಂತ್ರಿ ಹಾಗೂ ಕುಮಾರಸ್ವಾಮಿ ಬರುತ್ತಿದ್ದಾರೆ ಪ್ರಮಾಣ ಮಾಡಿದರೂ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರೂ ಆಗಮಿಸುತ್ತಿದ್ದು ಭದ್ರತೆಯ ವಿಚಾರ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೇ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದು ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಆಣೆ ಸ್ಥಿತಿ ಏಕೆ ಬಂತು?

ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಮಕ್ಕಳು ಮತ್ತು ಸರ್ಕಾರದ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತಾವು ದೆಹಲಿಯಲ್ಲಿ ಸರ್ಕಾರದ ಹಲವು ಹಗರಣಗಳ ಬಗ್ಗೆ ಮತ್ತಷ್ಟು ದಾಖಲೆ ಬಹಿರಂಗ ಮಾಡುವುದಾಗಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ತಮ್ಮೊಂದಿಗೆ ಮುಖ್ಯಮಂತ್ರಿ ಸಂಧಾನ ನಡೆಸಲು ಯತ್ನಿಸಿದ್ದರು, ಹಣದ ಆಮಿಷ ನೀಡಿದ್ದರು ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸರ್ಕಾರದ ಖರ್ಚಿನಲ್ಲಿ ರಾಜ್ಯದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಿ, ಕುಮಾರಸ್ವಾಮಿ ಮಾಡಿರುವ ಆರೋಪ ಸುಳ್ಳು, ಅವರು ತಮ್ಮ ಹೇಳಿಕೆ ನಿಜ ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು.

ಈ ಸವಾಲು ಸ್ವೀಕರಿಸಿದ್ದ ಕುಮಾರಸ್ವಾಮಿ ನಾಳೆಯೇ ತಾವು ಧರ್ಮಸ್ಥಳಕ್ಕೆ ಬರಲು ಸಿದ್ಧ ಎಂದು ಪ್ರತಿ ಸವಾಲು ರಾಗಿದ್ದರು. ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಪರವಾಗಿ ಹೇಳಿಕೆ ನೀಡಿದ ಗೃಹ ಸಚಿವ ಆರ್. ಅಶೋಕ ಜೂನ್ ೨೭ರಂದು ಆಣೆ ಪ್ರಮಾಣಕ್ಕೆ ಮುಹೂರ್ತ ನಿಗದಿ ಮಾಡಿದರು.

ಈ ಮಧ್ಯೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ, ಸುತ್ತೂರು ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಆಣೆ ಪ್ರಮಾಣ ಕೈಬಿಡುವಂತೆ ಇಬ್ಬರೂ ನಾಯಕರಿಗೆ ಮನವಿ ಮಾಡಿದ್ದರು. ರಾಜಕೀಯಕ್ಕೆ ದೇವರನ್ನು ತರಬೇಡಿ ಎಂದು ಹೇಳಿದ್ದರು. ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕೂಡ ಆಣೆ ಕೈಬಿಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ತಮ್ಮ ಹಿಂದಿನ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಆದರೂ ಇಬ್ಬರೂ ನಾಯಕರು ಧರ್ಮಸ್ಥಳಕ್ಕೆ ಬರುತ್ತಿರುವ ಕಾರಣ ಕದನ ಕುತೂಹಲ ಜೀವಂತವಾಗಿದೆ. 

ಮುಖಪುಟ /ಸುದ್ದಿ ಸಮಾಚಾರ