ಮುಖಪುಟ /ಸುದ್ದಿ ಸಮಾಚಾರ   
 

ಗಾಯನಗಂಗೆ ಗಂಗೂಬಾಯಿ ಹಾನಗಲ್ ವಿಧಿವಶ

Gangubai Hanagal, ಗಂಗೂಬಾಯಿ ಹಾನಗಲ್, ಕನ್ನಡರತ್ನ.ಕಾಂ, kannadaratna.comಹುಬ್ಬಳ್ಳಿ, ಜುಲೈ 21 : ಹಿಂದೂಸ್ಥಾನಿ ಸಂಗೀತ ಲೋಕದ ಶ್ರೇಷ್ಠ ಗಾಯಕಿ, ವಿದುಷಿ ಗಂಗೂಬಾಯಿ ಹಾನಗಲ್ ಅವರು ಇಂದು ಬೆಳಗ್ಗೆ 7-10ರ ಸುಮಾರಿನಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಅವರ ದೇಹಸ್ಥಿತಿ ತೀವ್ರ ವಿಷಮಿಸಿತ್ತು. ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಅವರಿಗೆ ಕೃತಕ ಉಸಿರಾಟದ ಸಾಧನ ಅಳವಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ವಿಧಿವಶರಾದರು.

ಮಾರ್ಚ್ 5, 1913ರಲ್ಲಿ ಜನಿಸಿದ ಗಂಗೂಬಾಯಿ ಅವರು, ಚಿಕ್ಕವಯಸ್ಸಿನಲ್ಲೇ ಸಂಗೀತದ ಆಸಕ್ತಿ ಬೆಳೆಸಿಕೊಂಡವರು. ತಮ್ಮ 11ನೇ ವಯಸ್ಸಿನಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀ ಅವರ ಎದುರು ಸ್ವಾಗತಗೀತೆಯನ್ನು ಹಾಡಿ ಜನ ಮೆಚ್ಚುಗೆ ಪಡೆದರು.

ಕುಂದಗೋಳದ ಕಿರಾನಾ ಘರಣೆಯ ಖ್ಯಾತ ಗಾಯಕ ರಾಮ ಭಾವು ಕುಂದಗೋಳಕರರ ಕೃಪೆಗೆ ಪಾತ್ರರಾದ ಗಂಗೂಬಾಯಿ ನಿತ್ಯ ಹುಬ್ಬಳ್ಳಿಯಿಂದ ಕುಂದಗೋಳಕ್ಕೆ ಹೋಗಿ ಸಂಗೀತಾಭ್ಯಾಸ ಮಾಡಿದರು.

ಶ್ರದ್ಧೆಯಿಂದ ಸಂಗೀತ ಕಲಿತ ಗಂಗೂಬಾಯಿ ಅವರು, ತಮ್ಮ ಬದುಕನ್ನೇ ಸಂಗೀತಲೋಕಕ್ಕೆ ಮುಡಿಪಾಗಿಟ್ಟರು. ಗಂಗೂಬಾಯಿ ಅವರ ಸಂಗೀತ ಕೇಳಿದವರು ತನ್ಮಯರಾಗುವಂತೆ ಹಾಡುತ್ತಿದ್ದರು. ಅಮೆರಿಕ, ಕೆನಡ, ನೇಪಾಳ, ಜರ್ಮನಿ ಮೊದಲಾದ ರಾಷ್ಟ್ರಗಳಲ್ಲಿ  ಸಂಗೀತ ಕಚೇರಿ ನಡೆಸಿದ್ದರು.

ಇವರ ಸಂಗೀತ ಸೇವೆಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಗಂಗವ್ವ, ಗಂಗಜ್ಜಿ ಎಂದು ಆತ್ಮೀಯವಾಗಿ ಕರೆಸಿಕೊಳ್ಳುತ್ತಿದ್ದ ಗಂಗೂಬಾಯಿ ಅವರು ಎಳೆಯರೊಂದಿಗೆ ಎಳೆಯರಾಗಿ, ಹಿರಿಯರೊಂದಿಗೆ ಹಿರಿಯರಾಗಿ ಬೆರೆಯುತ್ತಿದ್ದ ಸ್ನೇಹಜೀವಿ.

ಇಂದು ಗಂಗಜ್ಜಿ ನಮ್ಮೊಂದಿಗಿಲ್ಲ. ಆದರೆ ಅವರ ಸಂಗೀತ, ನೆನಪು ಸದಾ ಚಿರಸ್ಥಾಯಿ.

ಸಂತಾಪ: ಗಂಗೂಬಾಯಿ ಹಾನಗಲ್ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯ್ಲಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ