ಮುಖಪುಟ /ಸುದ್ದಿ ಸಮಾಚಾರ   
 

 ಜಗತ್ತಿಗೇ ಮೌಲ್ಯಪಾಠ ಹೇಳಿದ ರಾಷ್ಟ್ರ ಭಾರತ - ಕಣ್ಣನ್
ಟಿ.ಎಲ್.ಎನ್.ಗೆ ಅಳಸಿಂಗ ಪೆರುಮಾಳ್ ಗೌರವ

ತುರುವೇಕೆರೆಯಲ್ಲಿ ಅಳಸಿಂಗ ವೇದಿಕೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಹಿರೇಮಗಳೂರು ಕಣ್ಣನ್ ಅವರು ನಿವೃತ್ತ ಪ್ರಾಂಶುಪಾಲ ಟಿ.ಎಲ್. ನಾಗರಾಜ್‌ರವರಿಗೆ ಗೌರವ ಸಮರ್ಪಣೆ ಸಲ್ಲಿಸಿದರು. ಪತ್ರಕರ್ತ ತುರುವೇಕೆರೆ ಪ್ರಸಾದ್, ಲೇಖಕಿ ರೇಖಾ ಕುಂದಾರು, ಹಾಸ್ಯ ಬರಹಗಾರ ಮಂಜೇಶ್ ಗುಪ್ತಾತುರುವೇಕೆರೆ, ಜುಲೈ ೧೬: ಸನಾತನ ಪರಂಪರೆಯ ಮಹತ್ವವನ್ನು ವಿಶ್ವಕ್ಕೆ ಸಾರಿದ ವಿವೇಕಾನಂದರು ಹುಟ್ಟಿದ ಈ ದೇಶದಲ್ಲಿ ನಮ್ಮದೇ ಮೌಲ್ಯಗಳನ್ನು ಪರಕೀಯರಿಂದ ಕಲಿಯಬೇಕಾದ ದುಸ್ಥಿತಿ ಒದಗಿಬಂದಿದೆ ಎಂದು ಕನ್ನಡದ ಪೂಜಾರಿ ಎಂದೇ ಖ್ಯಾತರಾದ ಹಿರೇಮಗಳೂರು ಕಣ್ಣನ್ ವಿಷಾದಿಸಿದರು.

ತುರುವೇಕೆರೆಯ ಪ್ರಸಿದ್ಧ  ಬೇಟೆರಾಯಸ್ವಾಮಿ ದೇವಾಲಯದಲ್ಲಿ ಹಿರೇಮಗಳೂರಿನ ಅಳಸಿಂಗ ಪೆರುಮಾಳ್ ವೇದಿಕೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಯುಕ್ತ ಆಶ್ರಯದಲ್ಲಿ  ನಡೆದ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಟಿ.ಎಲ್.ನಾಗರಾಜ್ ಅವರಿಗೆ  ಪ್ರತಿಷ್ಠಿತ ಅಳಸಿಂಗ ಪೆರುಮಾಳ್ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

 ನಮ್ಮದು ವಿಶ್ವ ಮಾವನ ಧರ್ಮ. ಜಗತ್ತಿಗೆ ಮೌಲ್ಯಗಳನ್ನು ಸಾರಿ ಹೇಳಿದವರು ನಾವು. ಆಧ್ಯಾತ್ಮದ ಬೆಳಕಿನಲ್ಲಿ ಜೀವನಾದರ್ಶಗಳನ್ನು ವಿಶ್ವದ ಮುಂದೆ ಅನಾವರಣ ಮಾಡಿದ ಹಿರಿಮೆ ನಮ್ಮದು. ಇಂತಹ ನಾವು ನಮ್ಮ ಪರಂಪರೆ, ಸಂಸ್ಕೃತಿಧರ್ಮ ಎಲ್ಲದರಿಂದ ವಿಮುಖರಾಗುತ್ತಿದ್ದೇವೆ. ಪಾಶ್ಚಾತ್ಯರ ಅಂಧಾನಕರಣೆಯಿಂದ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಸಾಂಸ್ಕೃತಿಕ ದಿವಾಳಿತನ ಮತ್ತು ಅಭಿಮಾನ್ಯ ಶೂನ್ಯತೆ ನಮ್ಮನ್ನು ಆವರಿಸಿಕೊಂಡಿದೆ. ಇಂತಹ ಪರ್ವ ಕಾಲದಲ್ಲಿ ಸ್ವಾಮಿ ವಿವೇಕಾನಂದರ ತತ್ವ ಮತ್ತು ಆದರ್ಶಗಳು ಯುವಜನತೆಯನ್ನು ಮಾರ್ಗದರ್ಶನ ಮಾಡಿ ಮುನ್ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಮಣ್ಣಲ್ಲಿ ಹುಟ್ಟಿ ವಿವೇಕಾನಂದರ ಶ್ರೇಷ್ಠ ಶಿಷ್ಯನ ಸ್ಥಾನ ಪಡೆದ ಅಳಸಿಂಗ ಪೆರುಮಾಳ್ ನಮಗೆ ಆದರ್ಶದ ಮಾದರಿಯಾಗಬೇಕಿದೆ ಎಂದ ಅವರು ಸ್ವಾಮಿ ವಿವೇಕಾನಂದ ಮತ್ತು ಅಳಸಿಂಗ ಪೆರುಮಾಳರ ಗುರು-ಶಿಷ್ಯ ಸಂಬಂಧವನ್ನು ಹೃದಯಂಗಮವಾಗಿ ವಿವರಿಸಿದರು.

ಸಮಾರಂಭದಲ್ಲಿ  ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಇಲ್ಲಿನ ನಿವೃತ್ತ ಪ್ರಾಂಶುಪಾಲ ಮತ್ತು ಸುರಭಿ ಶಿಕ್ಷಣ ವಿಭಾಗದ ಮುಖ್ಯಸ್ಥ ಟಿ.ಎಲ್.ನಾಗರಾಜ್ ಅವರಿಗೆ ಹಿರೇಮಗಳೂರು ಕಣ್ಣನ್   ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಗೌರವ ಸಮರ್ಪಣೆ ಮಾಡಿದರು.

ಗೌರವ ಸ್ವೀಕರಿಸಿ ಮಾತನಾಡಿದ ಟಿ.ಎಲ್. ನಾಗರಾಜ್ ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಶೈಕ್ಷಣಿಕ ಪ್ರಕ್ರಿಯೆಗಳು ವ್ಯವಹಾರಿಕವಾಗುತ್ತಿವೆ.  ಸಾಂಸ್ಕೃತಿಕವಾಗಿ ತಲ್ಲಣ

ಉಂಟುಮಾಡುವ ಜಾಗತಿಕ ಹೊರಚಾಚುಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಮಹತ್ವ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವೆನಿಸುತ್ತಿದೆ ಎಂದ ಅವರು ಹಿರೇಮಗಳೂರು ಕಣ್ಣನ್ ಸಾರಥ್ಯದ ಅಳಸಿಂಗ ಪೆರುಮಾಳ್ ವೇದಿಕೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಪುನರುತ್ಥಾನಕ್ಕೆ ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಸ್ಯ ಬರಹಗಾರ ಕೆ.ಮಂಜೇಶ್ ಗುಪ್ತಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಸ್ವಾಗತಿಸಿದರು. ಶಿವು ವಂದಿಸಿದರು. ಕಾರ್ಯವಾಹ ಎನ್.ಸಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

 ಮುಖಪುಟ /ಸುದ್ದಿ ಸಮಾಚಾರ