ಮುಖಪುಟ /ಸುದ್ದಿ ಸಮಾಚಾರ 

ನಡೆದಾಡುವ ದೇವರು ಲಿಂಗೈಕ್ಯ
ಶೋಕ ಸಾಗರದಲ್ಲಿ ಭಕ್ತ ಸಾಗರ

ಬೆಂಗಳೂರು, ಜ.21(ಕನ್ನಡರತ್ನ ವರದಿ): ನಡೆದಾಡುವ ದೇವರು, ಕಾಯಕಯೋಗಿ, ಶತಾಯುಷಿ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಅವರು ಪರಶಿವನಿಗೆ ಪವಿತ್ರವಾದ ಸೋಮವಾರ ಬೆಳಗ್ಗೆ 11.45ರ ಸುಮಾರಿನಲ್ಲಿ ಲಿಂಗೈಕ್ಯರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಸ್ವಾಮೀಜಿ ಅವರ ಅಗಲಿಕೆಯ ಸುದ್ದಿಯನ್ನು ಕೇಳಿ ಇಡೀ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ.

ತುಮಕೂರು ಬಳಿಯ ಪುಣ್ಯ ಕ್ಷೇತ್ರ ಸಿದ್ಧಗಂಗಾಮಠದ ಹಿರಿಯ ಶ್ರೀಗಳಾಗಿ 88 ವರ್ಷಗಳ ಕಾಲ ಈ ಕ್ಷೇತ್ರವನ್ನು ಅನ್ನ, ಅಕ್ಷರ ಹಾಗೂ ಜ್ಞಾನ ದಾಸೋಹಗಳಿಂದ ಕೂಡಿದ ತ್ರಿವಿಧ ದಾಸೋಹ ಕ್ಷೇತ್ರವಾಗಿ ವಿಶ್ವವಿಖ್ಯಾತಿ ಪಡೆಯುವಂತೆ ಮಾಡಿದ ಪರಮಪೂಜ್ಯರೂ 111 ವರ್ಷಗಳ ಶತಾಯುಷಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಡಾ. ಶಿವಕುಮಾರ ಸ್ವಾಮಿಗಳು ಕೆಲ ಕಾಲದಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಇತ್ತೀಚೆಗೆ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನೂ ನೆರವೇರಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕವೂ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲ ದಿನಗಳ ಚಿಕಿತ್ಸೆಯ ಬಳಿಕ  ಕಳೆದ ವಾರ ಸ್ವಾಮೀಜಿ ಅವರನ್ನು ಸಿದ್ದಗಂಗೆಯ ಹಳೆಯ ಮಠಕ್ಕೆ ಕರೆತಂದು ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾಣದೆ ಅವರು ಶಿವೈಕ್ಯರಾದರು ಎಂದು ಮಠದ ಆಪ್ತ ವೈದ್ಯ ಡಾ. ಪರಮೇಶ್ವರ್ ತಿಳಿಸಿದ್ದಾರೆ.

ಬಡವ ಬಲ್ಲಿದ ಎಂಬ ಭೇದವಿಲ್ಲದೆ, ಜಾತಿ ಮತ ಧರ್ಮದ ಎಲ್ಲೆ ಇಲ್ಲದೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು, ಎಲ್ಲರೂ ಜ್ಞಾನವಂತರಾಗಬೇಕು ಎನ್ನುತ್ತಿದ್ದ ಶ್ರೀಗಳ ರಾಷ್ಟ್ರೀಯ ಚಿಂತನೆ - ವಿದ್ವತ್ತು ಸಿದ್ಧಗಂಗೆಗೆ ರಾಷ್ಟ್ರೀಯ - ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟಿದೆ.

1930ರ ಮಾರ್ಚ್ 3ರಂದು ಶ್ರೀಉದ್ಧಾನ ಶಿವಯೋಗಿಗಳವರ ಉತ್ತರಾಧಿಕಾರಿಗಳಾಗಿ ಮಠದ ಅಧಿಕಾರವಹಿಸಿಕೊಂಡ ಕರ್ಮಯೋಗಿ ಶ್ರೀ ಶಿವಕುಮಾರ ಸ್ವಾಮಿಗಳು ಭಾರತೀಯ ಸಂತ ಪರಂಪರೆಯ ಅಪೂರ್ವ ಚೇತನರಾಗಿಗಾಂಧೀಜಿಯವರು ತೋರಿಸಿಕೊಟ್ಟ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನೂ ಸಾಕಾರಗೊಳಿಸಿದ್ದರು.

ಧಾರ್ಮಿಕ ಕೇಂದ್ರವಾಗಿದ್ದ ನೆಲೆವೀಡನ್ನು ನಡೆದಾಡುವ ದೇವರು ಶಿಕ್ಷಣಾರ್ಥಿಗಳ ಗುರುಕುಲವಾಗಿ ಮಾರ್ಪಡಿಸಿದ್ದರು. ನಿಶ್ಶಕ್ತರಿಗೆ ಆಶ್ರಯ ತಾಣವಾಗಿಸಿ, ಜಾತಿ ಮತ, ಧರ್ಮಗಳ ಬೇಧವಿಲ್ಲದ ರೀತಿಯಲ್ಲಿ ಇಡೀ ಮನುಕುಲಕ್ಕೇ  ಮಾದರಿಯಾಗುವಂಥ  ಗುರುಕುಲ ಕಟ್ಟಿ ಬೆಳೆಸಿದ್ದರು.

ಜ್ಞಾನ ದೇಗುಲ : ಸಿದ್ಧಗಂಗಾ ಕ್ಷೇತ್ರದ ಬೆಟ್ಟ ಪ್ರದೇಶದಲ್ಲಿರುವ ಗುಹೆಗಳಲ್ಲಿ ಹಲವು ಸಿದ್ಧರು ತಪವನ್ನಾಚರಿಸಿರುವ ಫಲವಾಗಿ ಪವಿತ್ರಭೂಮಿಯಾಗಿರುವ ಈ ತಾಣ ಶಾರದೆಯ ನೆಲೆವೀಡೂ ಆಗಿದೆ. ವಿದ್ಯಾ ವಿಹೀನ ಪಶುಃ ಅಂದರೆ, ವಿದ್ಯೆ ಇಲ್ಲದ ಮನುಷ್ಯ ಪಶುವಿಗೆ ಸಮಾನ ಎಂಬುದನ್ನು ಸಾರಿದ ಈ ಮಠದ ಎಲ್ಲ ಗುರುಗಳೂ ಸರ್ವರಿಗೂ ಸಮಾನ ಶಿಕ್ಷಣದ ಕೈಂಕರ್ಯವನ್ನೇ ಕೈಗೊಂಡು ವಿದ್ಯಾದಾನದ ಹಾಗೂ ವಿದ್ಯೆಯ ಮಹತ್ವವನ್ನು ಸಾರಿದ್ದಾರೆ. ಇದರ ಫಲವಾಗಿ ಇಂದು ಸಿದ್ಧಗಂಗೆ ಒಂದು ಜ್ಞಾನ ದೇಗುಲವಾಗಿದೆ. ವಿದ್ಯಾಸಂಸ್ಥೆಗಳ ಆಗರವಾಗಿದೆ. ಸಿದ್ಧಗಂಗೆಯ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನಲಂಕರಿಸಿದ್ದಾರೆ. ಶ್ರೀಮಠಕ್ಕೆ ಈ ಖ್ಯಾತಿ, ಕೀರ್ತಿ ಬರಲು, ಶ್ರೀಮಠ ವಿದ್ಯಾಧಿದೇವತೆ ಶಾರದೆಯ ನೆಲೆವೀಡಾಗಲು ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಸಂಕಲ್ಪ, ಶ್ರಮವೇ ಕಾರಣ.

ಉಚಿತ ಊಟ -ವಸತಿ : ಶ್ರೀಶಿವಕುಮಾರ ಸ್ವಾಮಿಗಳು ತಮ್ಮ ಪೂರ್ವಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ, ಅನ್ನದಾಸೋಹ - ಜ್ಞಾನದಾಸೋಹವನ್ನು ಅವಿರತವಾಗಿ ನಡೆಸಿಕೊಂಡು ಬಂದಿದ್ದರು. ಇಲ್ಲಿ ಶಿಕ್ಷಣಾರ್ಥಿಗಳಿಗೆ  ಉಚಿತ ಊಟ, ವಸತಿಯ ವ್ಯವಸ್ಥೆ ಇದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ಇಲ್ಲಿ ಸಂಸ್ಕೃತ ಮತ್ತು ಸಂಸ್ಕೃತಿ ಕಲಿಸಿಕೊಡಲಾಗುತ್ತಿದೆ. 20ನೇ ಶತಮಾನದ 20ರ ದಶಕದಲ್ಲಿ ಕೇವಲ 40 ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಉಚಿತ ಊಟವಸತಿ ಕಲ್ಪಿಸಿದ್ದ ಕ್ಷೇತ್ರದ ವಿದ್ಯಾರ್ಥಿ ನಿಲಯದಲ್ಲಿ ಈ ಹೊತ್ತು 18ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ.

 ಸರ್ವಧರ್ಮ ಸಮನ್ವಯ ಕೇಂದ್ರ : ಜಾತ್ಯತೀತವಾದ ಸರ್ವಧರ್ಮ ಸಮನ್ವಯಕ್ಕೆ ಹೆಸರಾದ ಈ ತಾಣದಲ್ಲಿ ಕೇವಲ ವೀರಶೈವ ಧರ್ಮದವರಷ್ಟೇ ಅಲ್ಲದೆ ವಿವಿಧ 64 ಜನಾಂಗದ ವಿದ್ಯಾರ್ಥಿಗಳಿಗೂ ವಿದ್ಯಾದಾನ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಹಿಂದೂಪುರದಲ್ಲಿ ಕೂಡ ನೂರೈವತ್ತರಿಂದ ಇನ್ನೂರು ಬಡ ವಿದ್ಯಾರ್ಥಿಗಳಿಗೆ ಉಚಿತ ಊಟವಸತಿಯನ್ನು ಕಲ್ಪಿಸಲಾಗಿದೆ. ಭಕ್ತಾದಿಗಳು ನೀಡುವ ಕಾಣಿಕೆಯಿಂದಲೇ ಈ ಸತ್ಕಾರ್ಯ ನಡೆಯುತ್ತಾ ಬಂದಿದೆ. ಶಿಕ್ಷಣ ಸೇವೆಯನ್ನೇ ಪ್ರಧಾನವಾಗಿಟ್ಟುಕೊಂಡ ಭಾರತದ ಏಕೈಕ ಮಠ ಸಿದ್ಧಗಂಗೆ ಎಂದರೂ ತಪ್ಪಲ್ಲ.

ಆರದ ಒಲೆ : ನೂರು ವರ್ಷಗಳ ಹಿಂದೆ ಇಲ್ಲಿನ ಪಾಕಶಾಲೆಯಲ್ಲಿ ಅನ್ನದಾಸೋಹಕ್ಕಾಗಿ ಹಚ್ಚಿದ ಒಲೆ ಇಂದಿಗೂ ಆರಿಲ್ಲ ಎಂದರೆ,ಇಲ್ಲಿನ ಅನ್ನದಾಸೋಹದ ಪರಿ ಅರ್ಥವಾದೀತು. ಇಂದು ಇಲ್ಲಿ ಏಕ ಕಾಲದಲ್ಲಿ 3೦೦೦ ಜನರು ಕುಳಿತು ಊಟ ಮಾಡಬಹುದಾದಷ್ಟು ದೊಡ್ಡ ಸುಸಜ್ಜಿತ ಪ್ರಸಾದ ನಿಲಯವಿದೆ. ಅಂದಿನ ರಾಷ್ಟ್ರಪತಿ ಶಂಕರದಯಾಳ ಶರ್ಮರು ಉದ್ಘಾಟಿಸಿದ ಬೃಹತ್‌ ಭವ್ಯ ವಿದ್ಯಾರ್ಥಿ ನಿಲಯ ಇದಾಗಿದೆ. ಈ ವಿದ್ಯಾರ್ಥಿ ನಿಲಯದಲ್ಲಿ ಇನ್ನೂರು ಕೊಠಡಿಗಳಿವೆ. ಈ ಕೊಠಡಿಗಳಲ್ಲಿ 3000 ವಿದ್ಯಾರ್ಥಿಗಳಿದ್ದುಇವರಿಗೆ ಉಚಿತಊಟವಸತಿ ಹಾಗೂ ಶಿಕ್ಷಣ ಕಲ್ಪಿಸಲಾಗುತ್ತಿದೆ.

ಹಬ್ಬ ಹರಿದಿನಗಳಲ್ಲಿ ಬರುವ ಭಕ್ತರಿಗೂ ಇಲ್ಲಿ ಉಚಿತ ಊಟ- ವಸತಿ ಒದಗಿಸಲಾಗುತ್ತದೆ. ಶಿವರಾತ್ರಿಯ ಜಾತ್ರೆಯ ಕಾಲದಲ್ಲಿ ಹಾಗೂ ಏ.1.ರಂದು ಗುರುವಂದನೆಗಾಗಿ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಸ್ವಾಮಿಗಳ ದರ್ಶನ ಮಾಡಿ, ಸಿದ್ಧಗಂಗೆ ದೇವಾಲಯದ ದರ್ಶನ ಮಾಡಿ ಪುನೀತರಾಗುತ್ತಾರೆ.

ಸಾಧನೆ : 1917ರಲ್ಲಿ ಆರಂಭಗೊಂಡ ವಿದ್ಯಾಶಾಲೆ 1973ರ ಹೊತ್ತಿಗೆ ಕಾಲೇಜು ಹಂತಕ್ಕೆ ಏರಿತು. ಸಾವಿರಾರು ಗ್ರಾಮಾಂತರ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಣ ನೀಡಿದ ಕೀರ್ತಿ ಈ ಕ್ಷೇತ್ರಕ್ಕೆ ಸಲ್ಲುತ್ತದೆ. ಈ ಎಲ್ಲ ಸಾಧನೆಗಳ ರೂವಾರಿ ಡಾ. ಶಿವಕುಮಾರ ಸ್ವಾಮಿಗಳೆ. ಇವರ ಈ ಸಾಧನೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದರೆ, ಕರ್ನಾಟಕ ಸರ್ಕಾರ ಪರಮೋಚ್ಛ ನಾಗರಿಕ ಗೌರವ ಕರ್ನಾಟಕರತ್ನ ನೀಡಿದೆ. ಭಾರತ ಸರ್ಕಾರ  ಶ್ರೀಗಳಿಗೆ 2015ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.

ತಾಂತ್ರಿಕ ಶಿಕ್ಷಣ : ರಾಷ್ಟ್ರದ ಪ್ರಗತಿಗೆ ವೃತ್ತಿ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಅನಿವಾರ್ಯ ಎಂಬುದನ್ನು ಸಾರಿದ ಸರ್.ಎಂ. ವಿಶ್ವೇಶ್ವರಯ್ಯನವರ ಸಲಹೆಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೀಗಳು ಕೇವಲ ಸಾಂಪ್ರದಾಯಿಕ ಶಿಕ್ಷಣದ ಜತೆ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣವನ್ನೂ ನೀಡಲು ಮುಂದಾದರು. ಇದರ ಫಲವಾಗಿ 1963ರಲ್ಲೇ ಇಲ್ಲಿ ತಾಂತ್ರಿಕ ಕಾಲೇಜು ಆರಂಭವಾಯಿತು. ಇಂದು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೂ ಸೇರಿದಂತೆದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಸಂಸ್ಥೆಯ ವತಿಯಲ್ಲಿ ಔಷಧ ವಿಜ್ಞಾನನರ್ಸಿಂಗ್ ಕಾಲೇಜುಶಿಕ್ಷಕರ ತರಬೇತಿ ಕಾಲೇಜುಅಂಧ ಮಕ್ಕಳ ಶಾಲೆ, ಕಲೆ -ವಾಣಿಜ್ಯ -ವಿಜ್ಞಾನ ಶಿಕ್ಷಣ ಕಾಲೇಜುಸಂಗೀತ ಶಾಲೆಗಳೂ ನಡೆಯುತ್ತಿವೆ.

ಶಿವರಾತ್ರಿ ಜಾತ್ರೆ : ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ನಡೆಯುವ ಜಾನುವಾರು ಜಾತ್ರೆಗೆ  ಕರ್ನಾಟಕಆಂಧ್ರ,ತಮಿಳುನಾಡುಕೇರಳ ಹಾಗೂ ಮಹಾರಾಷ್ಟ್ರದಿಂದಲೂ ಜಾನುವಾರುಗಳು ಆಗಮಿಸುತ್ತವೆ. ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೇರುವ ದನಕರುಗಳನ್ನು ಇಲ್ಲಿ ಜನ ಕೊಳ್ಳುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನವನ್ನೂ ನೀಡುವ ಮೂಲಕ ಬಸವನ ಪ್ರತಿರೂಪವಾದ ದನ ಕರುಗಳನ್ನು ಅಕ್ಕರೆಯಿಂದ ಸಾಕುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ಕೃಷಿ ಕೈಗಾರಿಕೆ ಮಾಹಿತಿ: ಔಪಚಾರಿಕ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ತರುತ್ತಿರುವ ಕ್ಷೇತ್ರ ಜಾತ್ರೆಯ ಸಂದರ್ಭದಲ್ಲಿ ರೈತರಿಗೆ ಕೃಷಿ -ಕೈಗಾರಿಕೆ ಮಾಹಿತಿಯನ್ನೂ ನೀಡುತ್ತದೆ. ಇದಕ್ಕಾಗೇ ಸುಸಜ್ಜಿತ ವಸ್ತುಪ್ರದರ್ಶನಪ್ರಾತ್ಯಕ್ಷಿಕೆಗಳನ್ನೂ ಏರ್ಪಡಿಸುತ್ತದೆ. ರಾಜ್ಯದ ಗ್ರಾಮೀಣ ಜನರಿಗೆ ವೈಜ್ಞಾನಿಕ ಮಾಹಿತಿ ಒದಗಿಸುವ ಸಲುವಾಗಿ 16 ದಿನಗಳ ಕಾಲ ನಡೆವ ಈ ಕೃಷಿ - ಕೈಗಾರಿಕೆ ವಸ್ತು ಪ್ರದರ್ಶನ ನಾಡಿನಾದ್ಯಂತ ಮನೆಮಾತಾಗಿದೆ. ಈ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯದ ಎಲ್ಲ ಅಭಿವೃದ್ಧಿ ಇಲಾಖೆಗಳೂ ಪಾಲ್ಗೊಳ್ಳುತ್ತವೆ.

ಜಾತ್ರೆಯ ಅಂಗವಾಗಿ ನಡೆಯುವ ರಥೋತ್ಸವ ನೋಡಲು,  ತಮಿಳುನಾಡು ಆಂಧ್ರಪ್ರದೇಶ,  ಉತ್ತರ ಕರ್ನಾಟಕ, ತುಮಕೂರು,  ಚಿತ್ರದುರ್ಗ ಹಾಸನ,  ಚಿಕ್ಕಮಗಳೂರು ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಎಂದರೆ ಶ್ರೀಮಠದ ಕೀರ್ತಿಯ ಪರಿಚಯವಾಗುತ್ತದೆ. ಈ ಎಲ್ಲ ಭಕ್ತರಿಗೂ ಜಾತ್ರೆಯ ಸಂದರ್ಭದಲ್ಲಿ (10 ದಿನಗಳ ಕಾಲ) ಉಚಿತ ಊಟ ಮತ್ತು ವಸತಿಯನ್ನು ಶ್ರೀಮಠ ಕಲ್ಪಿಸುತ್ತದೆ. ಸಿದ್ಧಗಂಗೆಯ ಊಟ ಚೆನ್ನ ಶಿವಗಂಗೆಯ ನೋಟ ಚೆನ್ನ ಎಂಬ ಜನಜನಿತ ಮಾತೂ ಇಲ್ಲಿ ಜನಜನಿತವಾಗಿದೆ.

ಪ್ರಕಾಶನ: ಶ್ರೀಮಠವು ಕಳೆದ 4 ದಶಕಗಳಿಂದ ‘ಸಿದ್ಧಗಂಗಾ’ ಎಂಬ ಮಾಸಪತ್ರಿಕೆಯನ್ನೂ ಹೊರತರುತ್ತಿದ್ದುಕಲೆಸಾಹಿತ್ಯ,ಸಂಸ್ಕೃತಿವಿಜ್ಞಾಆಧ್ಯಾತ್ಮಿಕ ಮಾಹಿತಿಗಳನ್ನೂ ನೀಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ನೈತಿಕ - ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಇದು ಸಮರ್ಥವಾಗಿ ಮಾಡುತ್ತಿದೆ.

ಪೂರ್ವಾಶ್ರಮ: ಡಾ. ಶಿವಕುಮಾರಸ್ವಾಮೀಜಿ ಅವರು 1908ರ ಏಪ್ರಿಲ್ 1ರಂದು ಮಾಗಡಿ ತಾಲೂಕಿನ ವೀರಾಪುರದ ಶ್ರೀ ಹೊನ್ನಪ್ಪ ಮತ್ತು ಗಂಗಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಶಿವಣ್ಣ. ಕೂಲಿ ಮಠದಲ್ಲಿ  ಆರಂಭಿಕ ಶಿಕ್ಷಣ ಕಲಿತ ಶ್ರೀಗಳು ಪಾಲಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ತುಮಕೂರು ಬಳಿಯ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. 1926ರಲ್ಲಿ ಮೆಟ್ರಿಕ್ಯುಲೇಷನ್ ತೇರ್ಗಡೆಯಾದರು. ಬಳಿಕ ಬೆಂಗಳೂರಿನ ಗುಬ್ಬಿ ತೋಟದಪ್ಪ ಧರ್ಮಛತ್ರದಲ್ಲಿದ್ದುಕೊಂಡು ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. 1930ರಲ್ಲಿ ಉದ್ಧಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಅಕಾಲಿಕವಾಗಿ ಶಿವೈಕ್ಯರಾದಾಗ ಉದ್ಧಾನ ಶ್ರೀಗಳು ಶಿವಣ್ಣನವರನ್ನು ಮಠದ ಉತ್ತರಾಧಿಕಾರಿಯಾಗಿ ಘೋಷಿಸುತ್ತಾರೆ. ಶಿವಣ್ಣನವರು ಡಾ. ಶಿವಕುಮಾರಸ್ವಾಮಿಗಳಾಗಿದ್ದರು.

ಇಂದು ಶ್ರೀಗಳವರ ಅಗಲಿಕೆಯಿಂದ ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದೆ.

 ಮುಖಪುಟ /ಸುದ್ದಿ ಸಮಾಚಾರ