ಮುಖಪುಟ /ಸುದ್ದಿ ಸಮಾಚಾರ   
      

ಇಚ್ಛಾಶಕ್ತಿ ಪ್ರದರ್ಶಿಸದಿದ್ದರೆ ಭಾಷೆಗೆ ಉಳಿವಿಲ್ಲ : ನಲ್ಲೂರು ಪ್ರಸಾದ್

Dr. Nallur Prasadಬೆಂಗಳೂರು, ಫೆ.೧ : ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದು ನೆಲೆಸುವವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕು, ಈ ನೆಲದಲ್ಲಿ ಇರುವ ತನಕ ತಮ್ಮ ಮಾತೃಭಾಷೆ ಕನ್ನಡ ಎಂದು ತಿಳಿಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಹೇಳಿದ್ದಾರೆ.

ನಗರದಲ್ಲಿಂದು ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅಡುಗೆಶಾಲೆ ಉದ್ಘಾಟನಾ ಸಮಾರಂಭದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇಂದು ಬೆಂಗಳೂರಿನಂಥ ಮಹಾನಗರದಲ್ಲಿ ಕನ್ನಡ ಉಳಿಯಬೇಕಾದರೆ ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸುವ ಅಗತ್ಯವಿದೆ. ಇಲ್ಲವಾದರೆ ಕನ್ನಡಕ್ಕೆ ಉಳಿವಿಲ್ಲ ಎಂದು ಎಚ್ಚರಿಕೆ ನೀಡಿದರು. 

ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದು ನೆಲೆಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವರೆಲ್ಲರೂ ಕನ್ನಡ ಕಲಿಯದಿದ್ದರೆ ನಾವು ಬೆಂಗಳೂರಿನಲ್ಲಿ ಕನ್ನಡಿಗರನ್ನು ಹುಡುಕುವ ಸ್ಥಿತಿ ಬರುತ್ತದೆ ಎಂದು ಹೇಳಿದರು. ಸರ್ಕಾರ ಕನ್ನಡದ ಉಳಿವಿಗಾಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಕಲಿಕೆ ಆರಂಭಿಸಿತು. ಆದರೆ, ಇಲ್ಲಿ ಕನ್ನಡಕ್ಕೆ ಪರೀಕ್ಷೆ ಇಲ್ಲ ಎಂದು ಆದೇಶ ಮಾಡಿದ ಕಾರಣ ಕನ್ನಡ ಉಪನ್ಯಾಸಕರು ತಮಾಷೆಯ ವಸ್ತುವಾದರು, ಕನ್ನಡವನ್ನು ವಿದ್ಯಾರ್ಥಿಗಳು ಒಂದು ವಿಷಯವಾಗಿ ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ವಿಷಾದಿಸಿದರು.

ಆಧುನಿಕ ಕನ್ನಡ, ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಕನ್ನಡದ ಪದಗಳನ್ನು ಸೇರಿಸಿ ಸಮಗ್ರ ಪದಕೋಶವೊಂದನ್ನು ತಮ್ಮ ಅವಧಿಯಲ್ಲೇ ಮಾಡುವ ಮಹದಾಸೆ ತಮಗಿದ್ದು, ಇದಕ್ಕೆ ದೊಡ್ಡ ಮೊತ್ತವೇ ಬೇಕಾಗುತ್ತದೆ. ಸರ್ಕಾರ ಬೆಂಬಲ ನೀಡಿದರೆ ಖಂಡಿತವಾಗಿಯೂ ಇದನ್ನು ಮಾಡುವುದಾಗಿ ಹೇಳಿದರು. ಪ್ರತಿ ಜಿಲ್ಲೆಯ ಘಟಕಗಳು ಇಬ್ಬರು ಸಾಧಕರ ಹೆಸರನ್ನು ಸೂಚಿಸಿದ್ದು, ಸಮ್ಮೇಳನದಲ್ಲಿ ೧೫೦ಕ್ಕೂ ಹೆಚ್ಚು ಜನರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

೪೦ ವರ್ಷಗಳ ನಂತರ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಜನಸಾಗರವೇ ಹರಿದು ಬರಲಿದೆ. ಸಮ್ಮೇಳನ ಸಂಪೂರ್ಣ ಯಶಸ್ವಿಯಾಗುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ನಿಖರ ಲೆಕ್ಕಪತ್ರ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗುವ ಸಂಪೂರ್ಣ ಖರ್ಚು ವೆಚ್ಚವನ್ನು ನಿಖರವಾಗಿ ದಾಖಲಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಣಕಾಸು ಸಮಿತಿಯ ಅಧ್ಯಕ್ಷರಾಗಿದ್ದು, ಜಿಲ್ಲಾಧಿಕಾರಿಗಳು ಕೋಶಾಧ್ಯಕ್ಷರಾಗಿರುತ್ತಾರೆ. ಅಪವ್ಯಯ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಪ್ರತಿಯೊಂದು ಸಮ್ಮೇಳನದಲ್ಲಿ ಉಳಿದ ಹಣವನ್ನು ಠೇವಣಿ ಇಡಲಾಗಿದ್ದು, ಸಾಹಿತ್ಯ ಭವನ ನಿರ್ಮಾಣಕ್ಕೆ ಬಳಸಲಾಗುವುದು. ಸಮ್ಮೇಳನದ ಸಂಪೂರ್ಣ ಖರ್ಚು ವೆಚ್ಚದ ವಿವರವನ್ನು ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮ್ಮೇಳನ ವಿಶ್ವಕನ್ನಡ ಸಮ್ಮೇಳನಕ್ಕೆ ಮುನ್ನುಡಿ ಆಗಲಿದೆ ಎಂದು ಹೇಳಿದರು. 

 ಮುಖಪುಟ /ಸುದ್ದಿ ಸಮಾಚಾರ