ಮುಖಪುಟ /ಸುದ್ದಿ ಸಮಾಚಾರ   
      

ಬಿಜೆಪಿಗೆ ಒಲಿದ ಮತದಾರ ೧೦ ಜಿಲ್ಲೆಯಲ್ಲಿ ಅತಂತ್ರಸ್ಥಿತಿ

bjp logoಬೆಂಗಳೂರು, ಜ.೪ - ರಾಜ್ಯದ ೩೦ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಮತ್ತು ೧೭೧ ತಾಲೂಕುಗಳ ತಾಲೂಕು ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ನಿರೀಕ್ಷೆಯಂತೆ ಮತದಾರ ಒಲಿದಿದ್ದಾನೆ.

೩೦ ಜಿಲ್ಲೆಗಳ ಪೈಕಿ ೧೨ ಜಿಲ್ಲೆಗಳಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆದಿದ್ದು ಇದೇ ಮೊದಲ ಬಾರಿಗೆ ಅಧಿಕಾರ ಹಿಡಿಯಲು ಮುಂದಾಗಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಕೇವಲ ತಲಾ ೪ ಜಿಲ್ಲೆಗಳಲ್ಲಿ ಮಾತ್ರ ತಮ್ಮ ಪ್ರಾಬಲ್ಯ ಮೆರೆದಿವೆ. ೧೦ ಜಿಲ್ಲೆಗಳಲ್ಲಿ ಅತಂತ್ರಸ್ಥಿತಿ ಉಂಟಾಗಿದೆ.

೧೭೧ ತಾಲೂಕುಗಳ ಪೈಕಿ ೬೮ ತಾಲೂಕುಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ೩೧ ಹಾಗೂ ಜೆಡಿಎಸ್ ೨೯ರಲ್ಲಿ ಹಿಡಿತ ಸಾಧಿಸಿವೆ. ೪೧ಕ್ಕೂ ಹೆಚ್ಚು ತಾಲೂಕುಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ೨೦೦೫ರ ಪಂಚಾಯ್ತಿ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರವೇ ಜಯ ಸಾಧಿಸಿದ್ದ ಬಿಜೆಪಿ ಈ ಬಾರಿ ಆ ಜಿಲ್ಲೆಯಲ್ಲಿಯೇ ಹಿನ್ನಡೆ ಅನುಭವಿಸಿದ್ದರೂ ೧೨ ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವ ಸಾಬೀತು ಮಾಡಿದೆ.

ಆಡಳಿತ ವಿರೋಧಿ ಅಲೆ, ಭೂಹಗರಣಗಳ ಹೊರತಾಗಿಯೂ ಬಿಜೆಪಿ ಈ ಸಾಧನೆ ರಾಜಕೀಯ ಪಂಡಿತರ ಲೆಕ್ಕಾಚಾರವನ್ನೂ ತಲೆಕೆಳಗು ಮಾಡಿದೆ.

೨೦೦೮ರ ವಿಧಾನಸಭೆ ಚುನಾವಣೆ, ೨೦೦೯ರ ಲೋಕಸಭಾ ಚುನಾವಣೆ, ನಂತರ ನಡೆದ ಉಪ ಚುನಾವಣೆ, ಬಿಬಿಎಂಪಿ ಚುನಾವಣೆ, ಹಾಲು ಒಕ್ಕೂಟದ ಚುನಾವಣೆ, ಸಹಕಾರ ಸಂಘಗಳ ಚುನಾವಣೆ ಹೀಗೆ ಎಲ್ಲ ಚುನಾವಣೆಗಳಲ್ಲೂ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ತನ್ನ ನಾಯಕತ್ವ ಬದಲಾವಣೆ, ಬಳ್ಳಾರಿ ವರೆಗಿನ ಪಾದಯಾತ್ರೆಯ ನಡುವೆಯೂ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದ್ದು, ರಾಜ್ಯದಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಂಡಿರುವುದು ಈ ಫಲಿತಾಂಶದಿಂದ ವೇದ್ಯವಾಗಿದೆ.

ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಅತಂತ್ರಸ್ಥಿತಿ ನಿರ್ಮಾಣವಾಗಿರುವ ಜಿಲ್ಲೆಗಳಲ್ಲಿ ಜೆಡಿಎಸ್ ನಿರ್ಣಾಯಕವಾಗಲಿದ್ದು, ಬಹುತೇಕ ಕಾಂಗ್ರೆಸ್ ಜೊತೆಗೂಡಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳೇ ಹೆಚ್ಚಾಗಿದೆ.

ಅತಂತ್ರ ಸ್ಥಿತಿ

ಕೋಲಾರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಂಗಳೂರು ನಗರ, ಬಿಜಾಪುರ, ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ ಅತಂತ್ರವಾಗಿದೆ. ಜನಾರ್ದನ ರೆಡ್ಡಿ, ಶ್ರೀರಾಮುಲು ಹಾಗೂ ಕರುಣಾಕರ ರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಹೊತ್ತಿರುವ ಜಿಲ್ಲೆಗಳಲ್ಲಿಯೇ ಬಿಜೆಪಿ ನಿಚ್ಚಳ ಬಹುಮತ ಪಡೆಯದಿರುವುದು ಮುಂದಿನ ರಾಜಕೀಯ ವಿದ್ಯಮಾನಗಳಿಗೆ ನಾಂದಿ ಹಾಡಲಿದೆ ಎಂದೇ ನಿರೀಕ್ಷಿಸಲಾಗುತ್ತಿದೆ.

ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಗದಗ, ಹಾವೇರಿ, ಧಾರವಾಡ, ಬೀದರ್ಬಾಗಲಕೋಟೆ ಹಾಗೂ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಜಯ ಸಾಧಿಸಿದ್ದರೆ, ಚಾಮರಾಜನಗರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಮಂಡ್ಯ, ತುಮಕೂರು, ಹಾಸನ ಹಾಗೂ ರಾಮನಗರ ಜಿಲ್ಲೆಗಳನ್ನು ಜೆಡಿಎಸ್ ತನ್ನ ಮಡಿಲಿಗೆ ಹಾಕಿಕೊಂಡಿದೆ.

ಫಲ ನೀಡದ ಬಂಗಾರಪ್ಪ ವರ್ಚಸ್ಸು

ಇತ್ತೀಚೆಗೆ ಜೆಡಿಎಸ್ ಪಕ್ಷ ಸೇರಿದ ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮ ಮೋಡಿ ಮಾಡುವಲ್ಲಿ ವಿಫಲರಾಗಿದ್ದಾರೆ. ಅವರ ತವರು ಕ್ಷೇತ್ರ ಸೊರಬದಲ್ಲೇ ಜೆಡಿಎಸ್‌ಗೆ ಲಾಭವಾಗಿಲ್ಲ. ಆದರೆ, ಕುಮಾರಸ್ವಾಮಿ ಅವರ ವೈಯಕ್ತಿಕ ವರ್ಚಸ್ಸು ಮತ್ತು ಬಿಜೆಪಿ ಅನರ್ಹ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಪ್ರಭಾವ ಇರುವ ಕಡೆ ಜೆಡಿಎಸ್ ತನ್ನ ಶಕ್ತಿ ಹೆಚ್ಚಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

 ಮುಖಪುಟ /ಸುದ್ದಿ ಸಮಾಚಾರ