ಮುಖಪುಟ /ಸುದ್ದಿ ಸಮಾಚಾರ   

 ಹಿರಿಯ ನಟ ರಾಜೇಶ್‌ಗೆ ನೇತಾಜಿರತ್ನ ಪ್ರಶಸ್ತಿ

Netajiಬೆಂಗಳೂರು, ಜ.೨೩: ಕನ್ನಡ ಚಿತ್ರರಂಗದ ಹೆಸರಾಂತ ನಾಯಕನಟ ರಾಜೇಶ್ ಅವರಿಗೆ ಕೆಂಗೇರಿಯ ನೇತಾಜಿ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ, ಸುಭಾಷ್ ಚಂದ್ರಬೋಸ್ ಅವರ ೧೧೩ನೇ ಜನ್ಮದಿನವಾದ ಶನಿವಾರ ನೇತಾಜಿ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜೇಶ್, ನಿಶ್ಚಲ ದೃಷ್ಟಿ, ನಿರ್ದಿಷ್ಟ ಧೈಯದಿಂದ ಪ್ರತಿಕೂಲ ವಾತಾವರಣದಲ್ಲೂ ನಾಯಕರಾಗಿ ಬೆಳೆದ ಕ್ರಾಂತಿಕಾರಿ ನೇತಾಜಿ ಎಂದರು. ತಾವು ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, ಬ್ರಿಟಿಷರ ಊಳಿಗ ಬೇಡವೆಂದು, ದೇಶಪ್ರೇಮಿಯಾಗಿ, ದೇಶದ ಸಂಪೂರ್ಮ ಸ್ವರಾಜ್ಯಕ್ಕಾಗಿ ಬಂದೂಕು ಹಿಡಿದು ಹೋರಾಡಿದ ಮಹಾಮಹಿಮ ಎಂದು ಬಣ್ಣಿಸಿದರು.

ತಮ್ಮ ೫೦ ದಶಕಗಳ ರಂಗಭೂಮಿ ಹಾಗೂ ಚಿತ್ರರಂಗದ ಅನುಭವಗಳನ್ನು ಅನಾವರಣ ಮಾಡಿದ ಅವರು, ತಮ್ಮನ್ನು ಆದರಿಸಿ, ತಮ್ಮ ಕಲೆಯನ್ನು ಪ್ರೋತ್ಸಾಹಿಸಿದ ಸಮಸ್ತ ಕನ್ನಡ ಚಿತ್ರರಸಿಕರಿಗೂ ಕೃತಜ್ಞತೆ ಅರ್ಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಿತ್ರನಟ ಹಾಗೂ ಪ್ರಾಧ್ಯಾಪಕ ಡಾ. ಚಿಕ್ಕ ಹೆಜ್ಜಾಜಿ ಮಹಾದೇವ್, ನೇತಾಜಿ ಅವರ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೆ, ಸ್ವಾತಂತ್ರ್ತ್ಯಾ ನಂತರ ನೇತಾಜಿ ಬದುಕಿದ್ದಿದ್ದರೆ ಭಾರತದ ಸ್ವರೂಪವೇ ಬದಲಾಗುತ್ತಿತ್ತು ಎಂದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಇಂದಿನ ಮಕ್ಕಳಿಗೆ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾಮಹಿಮರ ಬಗ್ಗೆ ತಿಳಿಯ ಹೇಳುವುದು ಅಗತ್ಯವಾಗಿದ್ದು, ಅವರ ಜೀವನ ಚರಿತ್ರೆಯನ್ನು ತಿಳಿಸಿಕೊಡುವುದರಿಂದ ಅವರನ್ನೂ ದೇಶಪ್ರೇಮಿಗಳನ್ನಾಗಿ ಪರಿವರ್ತಿಸಬಹುದೆಂದರು.

ನೇತಾಜಿ ಜನ್ಮ ದಿನ ಹಾಗೂ ವೇದಿಕೆಯ ೮ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯಶಾಲಿಗಳಾದ ಚಿಣ್ಣರಿಗೆ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಡಾವಣೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಬೆಳಗ್ಗೆ ವಿವಿಧ ಶಾಲಾ ಮಕ್ಕಳು ಬಡಾವಣೆಯಲ್ಲಿ ಪಥ ಸಂಚಲನ ನಡೆಸಿ ಗಮನ ಸೆಳೆದರು, ಸಮಾಜ ಸೇವಕ ಹಾಗೂ ಚಿತ್ರನಟ, ನಿರ್ಮಾಪಕ ಮಹೇಂದ್ರ ಮನೋಟ್ ಗೌರವ ರಕ್ಷೆ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ವಸತಿ ಮಹಾಮಂಡಲದ ಅಧ್ಯಕ್ಷ ಎಸ್.ಟಿ. ಸೋಮಶೇಖರ್, ವೇದಿಕೆಯ ಪದಾಧಿಕಾರಿಗಳಾದ ಎಸ್.ಎಂ. ದೇವೇಂದ್ರಪ್ಪ, ಮಂಜುಳಾ ಮಹದೇವ್, ಡೊಮೆನಿಕ್ ಛೇವಿಯರ್, ರಾಧಾ ನಂಜಪ್ಪ, ಬಿ.ಆರ್. ಚಂದ್ರೇಗೌಡ, ರವೀಂದ್ರಗುಪ್ತ, ಕೆ.ಜೆ. ಚಂದ್ರಶೇಖರ್, ಎ.ಎನ್. ಶಿವಸ್ವಾಮಿ, ಭಾರತಿ ಶಿವಾಜಿಗಣೇಶನ್, ಲಿಸ್ಸಿ ಜಾಯ್, ಶ್ರೀಕರ, ಪಿ.ಪ್ರಕಾಶ್ ಶೆಣೈ, ಚಂದ್ರಕಾಂತ ಎಸ್. ಶಿರವಾಳ, ಪಿ.ಆರ್. ತಿವಾರಿ, ಚಿನ್ನಸ್ವಾಮಿ, ರಮೇಶ್ ದೊಡ್ಡಮನಿ ಮತ್ತಿತರರು ಪಾಲ್ಗೊಂಡಿದ್ದರು.

ಕೆಂಗೇರಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಮನಸೆಳೆಯಿತು. 

 ಮುಖಪುಟ /ಸುದ್ದಿ ಸಮಾಚಾರ