ಮುಖಪುಟ /ಸುದ್ದಿ ಸಮಾಚಾರ   

 ವಿವೇಕಾನಂದರ ಆದರ್ಶ ಪಾಲಿಸಲು - ಯುವಕರಿಗೆ ಕರೆ 

Swami vivekananda Jayanthi, M.L.A. College, Malleswaramಬೆಂಗಳೂರು, ಜ.21 : ಅನ್ಯ ಧರ್ಮವನ್ನು ಅವಹೇಳನೆ ಮಾಡದೆ, ಭಾರತದ ಸನಾತನ ಧರ್ಮವನ್ನು ಎತ್ತಿಹಿಡಿದ ಮಹಾನ್ ಮನವತಾವಾದಿ, ಸ್ವಾಮಿ ವಿವೇಕಾನಂದರ ಆದರ್ಶವನ್ನು ಯುವಜನರು ಪಾಲಿಸಿದರೆ ದೇಶದ ಅಭಿವೃದ್ಧಿ ಖಂಡಿತಾ ಸಾಧ್ಯ ಎಂದು ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದ ಗೌರವಾಧ್ಯಕ್ಷ ಪ್ರೊ. ಸುಂದರರಾಜ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಎಂ.ಎಲ್.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಏರ್ಪಡಿಸಲಾಗಿದ್ದ ಯುವಜನೋತ್ಸವ ಹಾಗೂ ಸ್ವಾಮಿ ವಿವೇಕಾನಂದರ ೧೪೮ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರಭೋಸ್ ಹಾಗೂ ಕುವೆಂಪು ಅವರಿಗೂ ಸ್ವಾಮಿ ವಿವೇಕಾನಂದರೇ ಆದರ್ಶರಾಗಿದ್ದರೆಂದರು.

ಪತ್ರಕರ್ತ ಟಿ.ಎಂ. ಸತೀಶ್ ಮಾತನಾಡಿ, ಯುವಜನರಿಗೆ ಎದುರಾಗುವ ಎಲ್ಲ ಸಮಸ್ಯೆಗಳಿಗೂ ವಿವೇಕಾನಂದರ ವಿದ್ವತ್ ವಾಣಿಯಲ್ಲಿ ಪರಿಹಾರವಿದೆ. ಅವರ ಜೀವನ ಚರಿತ್ರೆ ಓದಿದರೆ ಯುವಜನರು ತಮ್ಮ ಬದುಕಿನ ಶಿಲ್ಪಿಗಳು ತಾವೇ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದರು.

ಸ್ವಾಮಿ ವಿವೇಕಾನಂದರ ಭಾಷಣಗಳು, ವೈಚಾರಿಕ ಕ್ರಾಂತಿಗೆ ಭದ್ರ ಬುನಾದಿಯಾಗಿದ್ದು, ಯುವಜನರು ವಿವೇಕಾನಂದರ ಆದರ್ಶ ಪಾಲಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಮ್ಮ ಅವರು, ಸ್ವಾಮಿ ವಿವೇಕಾನಂದರು ಮಹಿಳೆಯರ ಶಿಕ್ಷಣದ ಬಗ್ಗೆ ಒತ್ತು ನೀಡಿದ ಮಹಾನ್ ಚೇತನ. ಎಲ್ಲ ಮಹಿಳೆಯರೂ ವಿವೇಕಾನಂದರಿಗೆ ಋಣಿಯಾಗಿರಬೇಕೆಂದರು.

ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಉಮಾ ಶ್ರೀನಿವಾಸ್ ಹಾಗೂ ಚಿತ್ರಾ ಭಾಷ್ಯಂ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಕನ್ನಡ ಉಪನ್ಯಾಸಕ ಪ್ರೊ. ಉಮೇಶ್ ಪರಿಚಯ ಭಾಷಣ ಮಾಡಿದರು, ಪ್ರೊ. ನಾಗಲಕ್ಷ್ಮೀ ಆಭಾರ ಮನ್ನಣೆ ಅರ್ಪಿಸಿದರು. ಕಾಲೇಜು ವಿದ್ಯಾರ್ಥಿನಿಯರಿಂದ ಗೀತಗಾಯನ ಹಾಗೂ ಐಕ್ಯಮಂತ್ರ ಮನಸೆಳೆಯಿತು. 

 ಮುಖಪುಟ /ಸುದ್ದಿ ಸಮಾಚಾರ