ಮುಖಪುಟ /ಸುದ್ದಿ ಸಮಾಚಾರ   
      

ಬಳ್ಳಾರಿ ಫಲಿತಾಂಶ ಸರ್ಕಾರಕ್ಕೆ ಎಚ್ಚರಿಕೆ ಗಂಟೆ - ಪರಮೇಶ್ವರ್

Parameswaraಬೆಂಗಳೂರು, ಜ. ೪ - ಮೂವರು ಪ್ರಭಾವಿ ಸಚಿವರುಗಳಿರುವ ಬಳ್ಳಾರಿ ಜಿಲ್ಲೆಯಲ್ಲಿನ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆ ಫಲಿತಾಂಶದ ಬಗ್ಗೆ ನಗರದಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ಕೋಳಿ, ಹಣ, ಹೆಂಡ ಹಂಚಿಯೂ ಬಿಜೆಪಿ ತನ್ನ ಪ್ರಭಾವಿ ಸಚಿವತ್ರಯರ ತವರಿನಲ್ಲಿ ಹಿನ್ನೆಡೆ ಅನುಭವಿಸಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲ ಜಿಲ್ಲೆಗಳಲ್ಲೂ ಮರುಕಳಿಸಲಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರಿ ಯಂತ್ರ, ಅಧಿಕಾರ ದುರ್ಬಳಕೆ ಮಾಡಿಕೊಂಡು, ಹಣದ ಹೊಳೆಯನ್ನೇ ಹರಿಸಿದರೂ ರಾಜ್ಯಾದ್ಯಂತ ನಿರೀಕ್ಷಿತ ಫಲಿತಾಂಶ ಪಡೆದಿಲ್ಲ. ೨೨ -೨೫ ಜಿಲ್ಲೆಗಳಲ್ಲಿ ಗೆಲ್ಲುವುದಾಗಿ ಹೇಳುತ್ತಿದ್ದ ಬಿಜೆಪಿ ಜಯ ಸಾಧಿಸಿರುವುದು ಕೇವಲ ೧೨ರಲ್ಲಿ ಮಾತ್ರ, ತಾಲೂಕು ಪಂಚಾಯ್ತಿಯಲ್ಲಿ ಕೂಡ ಅದು ೬೮ ತಾಲೂಕುಗಳಲ್ಲಿ ಮಾತ್ರವೇ ಗೆಲುವು ಕಂಡಿದೆ. ಕಾಂಗ್ರೆಸ್ ೩೧ ತಾಲೂಕಿನಲ್ಲಿ ನಿಚ್ಚಳ ಬಹುಮತ ಪಡೆದಿದ್ದು ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಮುಖ್ಯಮಂತ್ರಿಗೆ ಇದು ಖಂಡಿತವಾಗಿಯೂ ಸಿಕ್ಕ ಜನಾದೇಶವಲ್ಲ. ಇದು ಹಣದಿಂದ ಸಿಕ್ಕ ಗೆಲುವು ಮಾತ್ರ ಎಂದು ಪುನರುಚ್ಚರಿಸಿದರು.

ಸದನದಲ್ಲಿ ಹೋರಾಟ

ನಾಡಿದ್ದಿನಿಂದ ಆರಂಭವಾಗಲಿರುವ ವಿಧಾನ ಮಂಡಳದ ಅಧಿವೇಶನದಲ್ಲಿ ಬಿಜೆಪಿ ಹಗರಣಗಳ ಕುರಿತಂತೆ ಹೋರಾಟ ಮಾಡಲು ಯಾವ ರೀತಿಯ ನಿಲುವು ತಳೆಯಬೇಕು ಎಂಬ ಬಗ್ಗೆ ಸದನದ ನಾಯಕರೊಂದಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮಾತಕತೆ ನಡೆಸಿ ರೂಪುರೇಶೆ ಸಿದ್ಧಪಡಿಸಲಿದ್ದಾರೆ ಎಂದು ಹೇಳಿದರು.

ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಖಜಾನೆ ಖಾಲಿಯಾಗಿದೆ. ಸರ್ಕಾರ ತನ್ನ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಮುಖ್ಯಮಂತ್ರಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿಯೇ ಕಾಲಹರಣ ಮಾಡುತ್ತಿದ್ದು, ರಾಜ್ಯದ ಹಿತ ಮರೆತಿದ್ದಾರೆ. ಸರ್ಕಾರದ ಈ ಎಲ್ಲ ವೈಫಲ್ಯಗಳ ಬಗ್ಗೆ ಸದನದಲ್ಲಿ ಹೋರಾಟ ಮಾಡುತ್ತದೆ ಎಂದು ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ