ಮುಖಪುಟ /ಸುದ್ದಿ ಸಮಾಚಾರ   
      

ಅಭಿವೃದ್ಧಿಗೆ ಸಂದ ಜಯ - ಯಡಿಯೂರಪ್ಪ

Yadiyurappaಬೆಂಗಳೂರು, ಜ.೪ - ರಾಜ್ಯದ ಜನತೆ ಅಭಿವೃದ್ಧಿಗೆ ಮತ ನೀಡಿದ್ದಾರೆ. ಮತ್ತೊಮ್ಮೆ ಬಿಜೆಪಿಗೆ ಅವರು ಆಶೀರ್ವಾದ ಮಾಡಿದ್ದು, ಬಿಜೆಪಿ ಹಾಗೂ ಸರ್ಕಾರ ಮತದಾರರಿಗೆ ಆಭಾರಿಯಾಗಿರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣಾ ಫಲಿತಾಂಶದಿಂದ ಪ್ರಸನ್ನರಾಗಿದ್ದ ಅವರು, ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಇದು ಸರ್ಕಾರದ ಜವಾಬ್ದಾರಿ ಹೆಚ್ಚಿಸಿದ್ದು, ನಾವು ಇನ್ನೂ ಹೆಚ್ಚಿನ ಕೆಲಸ ಮಾಡಲು ಸ್ಪೂರ್ತಿಯಾಗಿದೆ. ಅಧಿಕಾರ ವಿಕೇಂದ್ರೀಕರಣದಿಂದ ಹಾಗೂ ಪಂಚಾಯ್ತಿ ಮಟ್ಟದಲ್ಲೂ ಪಕ್ಷ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವುದಾಗಿ ಹೇಳಿದರು.

ಬಿಜೆಪಿ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾದ ಪಕ್ಷ ಎಂಬ ಕಳಂಕದಿಂದ ಹೊರಬಂದಿದ್ದು, ಗ್ರಾಮೀಣ ಮಟ್ಟದಲ್ಲೂ ತನ್ನ ಅಸ್ತಿತ್ವ ಸಾಬೀತು ಮಾಡಿದೆ. ಇದು ಪಕ್ಷದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಆಗಿದೆ ಎಂದು ಹೇಳಿದರು.

೩೦ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿಯಲ್ಲಿ ಪಕ್ಷ ೧೨ರಲ್ಲಿ ನಿಚ್ಚಳ ಬಹುಮತ ಪಡೆದಿದೆ. ೨ ಜಿಲ್ಲೆಗಳಲ್ಲಿ ಸಮಬಲ ಕಾಪಾಡಿಕೊಂಡಿದೆ. ಇನ್ನುಳಿದ ೫ ಜಿಲ್ಲೆಗಳಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದ ಮುಖ್ಯಮಂತ್ರಿ ೧೭೧ ತಾಲೂಕುಗಳ ಪೈಕಿ ೬೭ರಲ್ಲಿ ಪಕ್ಷ ನಿಚ್ಚಳ ಬಹುಮತ ಪಡೆದಿದೆ. ಇದು ಪ್ರತಿಪಕ್ಷಗಳಿಗೆ ಜನತೆ ನೀಡಿದ ಉತ್ತವಾಗಿದ್ದು, ಇನ್ನು ಮುಂದಾದರೂ ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಅರಿತು ಸರ್ಕಾರದೊಂದಿಗೆ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಕಿವಿ ಮಾತು ಹೇಳಿದರು.

ಇನ್ನು ಮುಂದೆ ನಾವು ಟೀಕೆಗಾಗಿ ಟೀಕೆ ಮಾಡುವ ಪ್ರತಿಪಕ್ಷಗಳ ನಕಾರಾತ್ಮಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿ, ಪ್ರತಿಪಕ್ಷಗಳು ಮಾಡಿದ ಯಾವುದೇ ಅಪಪ್ರಚಾರ ಈ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದರು.

ಈಗ ತಮ್ಮ ಗುರಿ ರಾಜ್ಯವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುವುದು, ತನ್ಮೂಲಕ ರಾಜ್ಯದ ಜನತೆಗೆ ಅಭಿಮಾನ ಸಂಪಾದಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ೧೫೦ ಸ್ಥಾನ ಗೆಲ್ಲುವುದೇ ಆಗಿದೆ ಎಂದು ಹೇಳಿದರು.

ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಫಲಿತಾಂಶದಿಂದ ಬಿಜೆಪಿಗೆ ಮತ್ತು ಸರ್ಕಾರಕ್ಕೆ ಆನೆ ಬಲ ಬಂದಿದ್ದು, ತಮಗೆ ಈ ಚೈತನ್ಯ ನೀಡಿದ  ಮತದಾರರಿಗೆ, ಕಾರ್ಯಕರ್ತರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಎಲ್ಲಕ್ಕಿಂತ ಮಿಗಿಲಾಗಿ ಸುಗಮವಾಗಿ ಚುನಾವಣೆ ನಡೆಸಿದ ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. 

 ಮುಖಪುಟ /ಸುದ್ದಿ ಸಮಾಚಾರ