ಮುಖಪುಟ /ಸುದ್ದಿ ಸಮಾಚಾರ   
      

ಮೈತ್ರಿ ಅನಿವಾರ್ಯ..

kumaraswamyಬೆಂಗಳೂರು, ಜ. ೪ - ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಮೈತ್ರಿ ಅನಿವಾರ್ಯ ಎಂಬುದನ್ನು ಇಂದು ಹೊರಬಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಫಲಿತಾಂಶ ಮತ್ತೊಮ್ಮೆ ಬಹಿರಂಗ ಮಾಡಿದೆ.

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಿಜೆಪಿ ಸರ್ಕಾರ ರಚಿಸಿದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಈವರೆಗೆ ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ನಡೆದಿರುವ ಎಲ್ಲ ಚುನಾವಣೆಗಳಲ್ಲೂ ಆಡಳಿತ ಪಕ್ಷ ಜಯ ಸಾಧಿಸಿದ್ದು ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ.

ಆದರೆ, ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಂದ ಕುಗ್ಗಿರುವ ಕಾಂಗ್ರೆಸ್ ಈ ಚುನಾವಣೆಯಲ್ಲೂ ಚೇತರಿಸಿಕೊಳ್ಳಲಾರದ ಸ್ಥಿತಿ ತಲುಪಿದೆ. ೨೦೦೫ರ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆಗಳಿಗೆ ಬಿಜೆಪಿ ಹಲವೆಡೆ ಲಗ್ಗೆ ಹಾಕಿದ್ದು, ಆಡಳಿತ ಪಕ್ಷಕ್ಕೆ ಸಹಜವಾಗೇ ದೊರಕುವ ಲಾಭವನ್ನು ಯಶಸ್ವಿಯಾಗಿ ಬಳಸಿಕೊಂಡಿದೆ.

ಈ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಜನತೆ ಅಭಿವೃದ್ಧಿಗೆ ನೀಡಿದ ಬೆಂಬಲ ಇದೆಂದು ಹೇಳಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರ ಅಧಿಕಾರ, ಆಡಳಿತಯಂತ್ರ ದುರುಪಯೋಗ ಪಡಿಸಿಕೊಂಡು, ಅಪಾರ ಪ್ರಮಾಣದ ಹಣ ಹಂಚಿ ಗೆಲುವು ಸಾಧಿಸಿದೆ ಎಂದು ಹೇಳಿದೆ.

ಜೆಡಿಎಸ್ ತನ್ನ ಪ್ರಾಬಲ್ಯವಿರುವ ತುಮಕೂರು, ಹಾಸನ, ಮೈಸೂರು, ಮಂಡ್ಯ ಭಾಗದಲ್ಲಿ ನಿರೀಕ್ಷಿತ ಫಲಿತಾಂಶ ಪಡೆದಿದ್ದರೂ, ಚಾಮರಾಜನಗರದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಜೆಡಿಎಸ್ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದೆ.

ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೇಳಿಬಂದ ಭೂ ಹಗರಣ, ಆರೋಪ, ಪ್ರತ್ಯಾರೋಪಗಳು ಪಂಚಾಯ್ತಿ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಫಲಿತಾಂಶದಿಂದ ಗೋಚರವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜೆಡಿಎಸ್ ಅನ್ನು ಬೇರು ಸಹಿತ ಕಿತ್ತು ಹಾಕುತ್ತೇವೆ ಎಂದು ಹೇಳಿದ್ದರಾದರೂ ಕೂಡ ಜೆಡಿಎಸ್ ರಾಜ್ಯಾದ್ಯಂತ ಬೇರು ಮಟ್ಟದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಜೊತೆಗೆ ಕಾಂಗ್ರೆಸ್‌ಗೆ ಸರಿಸಮನಾಗಿ ಕೆಲವೆಡೆ ತುಸು ಹೆಚ್ಚಾಗಿಯೇ ಸಾಮರ್ಥ್ಯ ತೋರಿರುವುದು ರಾಜಕೀಯ ರಂಗದಲ್ಲಿ ಮುಂದಿನ ದಿನಗಳಲ್ಲಿ ಹಲವು ಕ್ರಾಂತಿಗೆ ಅವಕಾಶ ನೀಡಲಿದೆ ಎಂಬುದನ್ನು ಸಾಬೀತು ಪಡಿಸಿದೆ. ಮೈಸೂರು ಸುತ್ತಮುತ್ತಲ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ.

ಈ ಮಧ್ಯೆ ೩೦ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿಗಳ ಪೈಕಿ ೧೨ ಜಿಲ್ಲೆಗಳಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ೪ ಜಿಲ್ಲೆಗಳಲ್ಲಿ ಮಾತ್ರ ತನ್ನ ಉಳಿವು ಕಾಪಾಡಿಕೊಂಡಿವೆ. ಇನ್ನು ೧೦ ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿ ಇದ್ದು, ಈ ೧೦ರಲ್ಲಿ ಎರಡು ಜಿಲ್ಲೆಗಳಲ್ಲಿ ಸಮಬಲವಿದ್ದರೂ ಐದು ಜಿಲ್ಲೆಗಳಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಜಿಲ್ಲಾ ಪಂಚಾಯ್ತಿಯ ಅಧಿಕಾರ ಹಿಡಿಯುವಾಗ ಬಿಜೆಪಿ ಕೈ ಹಿಡಿಯಲು ಕೆಲವೆಡೆ ಪಕ್ಷೇತರರು ಮುಂದೆ ಬರುತ್ತಾರಾದರೂ, ಬಹುತೇಕ ಕಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಿಂದ ಅಧಿಕಾರ ಹಿಡಿಯುವ ಸಾಧ್ಯತೆಗಳೇ ಹೆಚ್ಚು.

ಈ ನಿಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಬಿಜೆಪಿಯ ಗೆಲುವಿನ ಓಟ ತಡೆಯಲು ಚುನಾವಣಾ ಪೂರ್ವ ಮೈತ್ರಿ ಅನಿವಾರ್ಯ ಎಂಬುದನ್ನು ಈ ಚುನಾವಣೆ ಫಲಿತಾಂಶ ಸೂಚ್ಯವಾಗಿ ತಿಳಿಸಿದೆ. ಆಡಳಿತ ಪಕ್ಷಕ್ಕೂ ಕೂಡ ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಬಿಜೆಪಿಗೆ ಕೂಡ ನಾಡಿನ ಜನತೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ.

 ಮುಖಪುಟ /ಸುದ್ದಿ ಸಮಾಚಾರ