ಮುಖಪುಟ /ಸುದ್ದಿ ಸಮಾಚಾರ   

75ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಥತೆ

Kannada Sahitya Parishad Lanchanaಚಿತ್ರದುರ್ಗದಲ್ಲಿ ಜನವರಿ 29ರಿಂದ ಆರಂಭವಾಗಲಿರುವ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ಸಾಗಿವೆ. ಬರದನಾಡೆಂದೇ ಕುಖ್ಯಾತವಾದ ಚಿತ್ರದುರ್ಗಕ್ಕೆ ಅಮೃತ ಮಹೋತ್ಸವ ಕನ್ನಡ ಸಾಹಿತ್ಯ ಸಮ್ಮೇಳನ ಭಾಗ್ಯ ಒದಗಿಬಂದಿದೆ.

ಚಿತ್ರದುರ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಘೋಷಣೆ ಹೊರಬಿದ್ದಿದ್ದು 2007ರ ನವೆಂಬರ್ 5ರಂದು. ಸಾಹಿತ್ಯ ಪರಿಷತ್ತಿಗೆ ಆಗಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಡಾ. ನಲ್ಲೂರು ಪ್ರಸಾದ್ ಈ ಘೋಷಣೆ ಮಾಡಿದರು.

50 ದಿನಗಳಲ್ಲಿ ಅಮೃತ ಮಹೋತ್ಸವ ಸಮ್ಮೇಳನ ನಡೆಸಲು ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಸರ್ಕಾರ ಈಗಾಗಲೇ ಸಮ್ಮೇಳನಕ್ಕೆ 1 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಸಂದಾಯವಾಗಿರುವ ಈ ವರ್ಷ ನಡೆಯುತ್ತಿರುವ ಸಮ್ಮೇಳನವೂ ಹಲವು ವಿಶೇಷತೆಗಳಿಂದ ಕೂಡಿದೆ. ಸಮ್ಮೇಳನದ ಹೆಸರಲ್ಲಿ ಐತಿಹಾಸಿಕ ನಗರಿಯಲ್ಲಿ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ.

ಸಮ್ಮೇಳನ ಸ್ವಾಗತ ಸಮಿತಿಯ ಮಹಾ ಪೋಷಕರಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗೌರವಾಧ್ಯಕ್ಷರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಅಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಜಿ. ಕರುಣಾಕರರೆಡ್ಡಿ, ಕೋಶಾಧ್ಯಕ್ಷರಾದ ಜಿಲ್ಲಾಧಿಕಾರಿ ಎ.ಎ.ಬಿಶ್ವಾಸ್, ಸಚಿವರುಗಳಾದ ಗೂಳಿಹಟ್ಟಿ ಶೇಖರ್ ಮತ್ತು ಡಿ.ಸುಧಾಕರ್ 75ನೇ ಸಮ್ಮೇಳನದ ಯಶಸ್ಸಿಗೆ ದುಡಿಯುತ್ತಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ