ಮುಖಪುಟ /ಸುದ್ದಿ ಸಮಾಚಾರ   
 

ಲಕ್ಕುಂಡಿ ಉತ್ಸವ:  ಪ್ರೇಕ್ಷಣೀಯ ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ

ಗದಗ, ಜ. ೩೧ (ಕ.ವಾರ್ತೆ) - ಗದಗ ಜಿಲ್ಲೆಯ ಸಾಂಸ್ಕೃತಿಕ ಲಕ್ಕುಂಡಿ ಉತ್ಸವದ ಸಂದರ್ಭದಲ್ಲಿ  ಸಾರ್ವಜನಿಕರಿಗೆ ಜಿಲ್ಲೆಯ ವಿವಿಧ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಗದಗ  ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಎರಡು ವಿಶೇಷ ಪ್ರವಾಸಗಳನ್ನು ರಿಯಾಯ್ತಿ ದರದಲ್ಲಿ ಫೆಬ್ರುವರಿ ೬ ರಿಂದ ೯ ರವರೆಗೆ ಏರ್ಪಡಿಸಿದೆ.  ಸಾರ್ವಜನಿಕರು ಈ ಪ್ರೇಕ್ಷಣೀಯ ಸ್ಥಳ ವೀಕ್ಷಣಾ  ಪ್ರವಾಸದ ಸೌಲಭ್ಯ ಪಡೆದುಕೊಳ್ಳಲು  ವಾಯವ್ಯ .ಕ.ರಾ.ಸಾ.ಸಂಸ್ಥೆ  ವಿಭಾಗೀಯ  ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸ ೧ :-  ಲಕ್ಕುಂಡಿಯಿಂದ ಪ್ರವಾಸ ಪ್ರಾರಂಭವಾಗಿ ಗದುಗಿನ ತ್ರಿಕೂಟೇಶ್ವರ , ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಟಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ, ನವಲಗುಂದ ನಾಗಲಿಂಗಮಠ, ಇಟಗಿಯ ಭೀಮಾಂಬಿಕಾ ದೇವಸ್ಥಾನ, ಸೂಡಿ ಹಾಗೂ  ಕಾಲಕಾಲೇಶ್ವರ ದೇವಸ್ಥಾನ ಮತ್ತು ಕುಕನೂರ ಬಳಿಯ ಇಟಗಿ ಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ  ಸುಮಾರು ಐದೂವರೆ ಗಂಟೆಗಳ ಕಾಲ ಪ್ರವಾಸವನ್ನು ಬೆ.೮ ರಿಂದ ಪ್ರಾರಂಭಿಸಲಾಗುವುದು. ಒಟ್ಟು  ೧೮೫ ಕಿ.ಮೀಟರ್‌ಗಳ ಈ ಪ್ರವಾಸಕ್ಕೆ ಹೋಗಿ ಬರಲು ರಿಯಾಯ್ತಿ ದರದ ೧೦೦ ರೂ.ಗಳ ಬಸ್ ದರವನ್ನು ಆಕರಿಸಲಾಗುವುದು. 

ಪ್ರವಾಸ ೨:-  ಲಕ್ಕುಂಡಿಯಿಂದ ಪ್ರವಾಸ ಪ್ರಾರಂಭವಾಗಿ ಗದುಗಿನ ತ್ರಿಕೂಟೇಶ್ವರ , ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಟಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ , ಮುಳಗುಂದ ದಾವುಲಮಲಿಕ ದರ್ಗಾ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಜೈನ್ ಬಸದಿ, ಮಾಗಡಿ ಪಕ್ಷಿಧಾಮ, ಶಿರಹಟ್ಟಿ ಫಕೀರೇಶ್ವರ ಮಠ, ವೆಂಕಟಾಪುರದ ವೆಂಕಟೇಶ ದೇವಸ್ಥಾನ ಹಾಗೂ ಡಂಬಳದ ದೊಡ್ಡ ಬಸಪ್ಪ ದೇವಸ್ಥಾನಕ್ಕೆ   ಆರೂವರೆ ಗಂಟೆಗಳ ಕಾಲ ಪ್ರವಾಸವನ್ನು ಬೆ. ೮ ರಿಂದ ಪ್ರಾರಂಭಿಸಲಾಗುವುದು.  ೧೪೫ ಕಿ.ಮೀ ಈ ಪ್ರವಾಸಕ್ಕೆ ಹೋಗಿ ಬರಲು ೭೫ ರೂ.ಗಳ ರಿಯಾಯತಿ  ಬಸ್ ದರವನ್ನು ಆಕರಿಸಲಾಗುವುದು.

ಪ್ರತಿ  ಪ್ರವಾಸಕ್ಕೆ ಆಯಾ ದಿನಗಳಂದು ಒಟ್ಟು ೩೫ ಪ್ರಯಾಣಿಕರು ಮುಂಗಡ  ಸ್ಥಳವನ್ನು ಕಾಯ್ದಿರಿಸಿದಲ್ಲಿ ಮಾತ್ರ ಈ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿರುತ್ತಾರೆ. ಮುಂಗಡ ಆಸನ ಕಾಯ್ದಿರಿಸುವಿಕೆಗಾಗಿ ಗದಗ ಹೊಸ ಬಸ್ ನಿಲ್ದಾಣ ಹಾಗೂ ಲಕ್ಕುಂಡಿಯಲ್ಲಿ ನಿರ್ಮಿಸಲಾಗುವ ತಾತ್ಕಾಲಿಕ ಉತ್ಸವದ ಬಸ್ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿದೆಯೆಂದು ಅವರು ತಿಳಿಸಿದ್ದಾರೆ. 

 ಮುಖಪುಟ /ಸುದ್ದಿ ಸಮಾಚಾರ