ಮುಖಪುಟ /ಸುದ್ದಿ ಸಮಾಚಾರ   
 

 ಬಸ್ ಪ್ರಯಾಣ ದರ ಇಳಿಕೆ: ಫೆ. 5ರಿಂದ ಜಾರಿ

ಬೆಂಗಳೂರು ಜ. ೩೧ (ಕ.ವಾರ್ತೆ)-  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಡೀಸೆಲ್ ದರ ಇಳಿಕೆ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಿದ್ದು ಫೆಬ್ರವರಿ ೫ ರಿಂದ ಜಾರಿಗೆ ಬರುವಂತೆ ಶೇ.೩.೧ ರಷ್ಟು ಸರಾಸರಿ ಕಡಿಮೆ ಮಾಡಲು ನಿರ್ಧರಿಸಿದೆ.

ಗ್ರಾಮೀಣ ಭಾಗದ ಸಾರಿಗೆ ದರದಲ್ಲಿ ಹೆಚ್ಚಿನ ಕಡಿತ ಮಾಡಿ, ಶೇ ೬.೭ರಷ್ಟು ಇಳಿತ, ವೇಗದೂತ ದರದಲ್ಲಿ ಶೇ ೨.೭ ಇಳಿಕೆ ಮಾಡಲಾಗಿದೆಯೆಂದು ಸಾರಿಗೆ ಸಚಿವ ಆರ್ ಅಶೋಕ್  ಇಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ನಗರ ಮತ್ತು ನಗರ ಹೊರ ವಲಯ ಸಾರಿಗೆ ದರಗಳನ್ನು ನವೆಂಬರ್ ೨೦೦೮ ರಲ್ಲಿ ಇಳಿಸಲಾಗಿದ್ದು, ಪ್ರಸ್ತುತ ಜಾರಿಯಲ್ಲಿರುವ ದರಗಳನ್ನೇ ಮುಂದುವರೆಸಲಾಗುತ್ತದೆ. ಇತರೆ ಸಾರಿಗೆಗಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯಿಲ್ಲ, ಈ ಪರಿಷ್ಕರಣೆಯಿಂದ ನಿಗಮಕ್ಕೆ ಒಟ್ಟಾರೆ ರೂ. ೮೦ ಕೋಟಿ ವಾರ್ಷಿಕ ವೆಚ್ಚವಾಗಲಿದೆಯೆಂದು ಮಾನ್ಯ ಸಚಿವರು ತಿಳಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಬಸ್ ಪ್ರಯಾಣದರವನ್ನು ಸಹಾ ಪುನರ್‌ವಿಮರ್ಶಿಸಿದ್ದು ಸುವರ್ಣ ಸೇವೆ ದರ ಶೇ. ೨೦ ರಷ್ಟು ಕಡಿತಗೊಳಿಸಿ ಪುಷ್ಪಕ್ ದರಗಳಿಗೆ ಸಮನಾಗಿ ನಿಗದಿಪಡಿಸಿದೆ.  ವಜ್ರಸೇವೆಯ ದರಗಳಲ್ಲಿ ಶೇ. ೧೭ ರಷ್ಟು ದರ ಕಡಿತಗೊಳಿಸಲಾಗಿದೆ.  ಪುಷ್ಪಕ್ ದರಗಳನ್ನು ಕೆಲವು ಹಂತಗಳಲ್ಲಿ ಸರಾಸರಿ ಶೇ. ೮ ರಷ್ಟು ಕಡಿತಗೊಳಿಸಲಾಗಿದೆ.  ನಗರ ಹೊರ ವಲಯದ ಸೇವೆಗಳಲ್ಲಿಯೂ ಸಹ ಶೇ. ೮ ರಷ್ಟು ಕಡಿತಗೊಳಿಸಲಾಗಿದೆ.  ಆದರೆ ದಿನದ ಪಾಸುಗಳ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.  ಆದರೆ ಸುವರ್ಣ ಸೇವೆಯಲ್ಲೂ ಸಹ ಇವು ಮಾನ್ಯವಾಗಲಿವೆ.  ಪ್ರೀಮಿಯಂ ಸೇವೆಗಳ ಒಟ್ಟಾರೆ ದರವನ್ನು ಶೇ. ೧೮ ರಷ್ಟು ಇಳಿಸಿದ್ದು ಎಲ್ಲಾ ವರ್ಗಗಳ ಸೇವೆಯ ದರವನ್ನು ಶೇ. ೩.೫ ರಷ್ಟು ಇಳಿಸಲಾಗಿದೆ.   ಹೊಸ ದರಗಳು ೧-೨-೨೦೦೯ ರಿಂದ ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಶ್ರೀ ಆರ್. ಅಶೋಕ್ ಅವರು ತಿಳಿಸಿದರು. 

ಇದೇ ಸಂದರ್ಭದಲ್ಲಿ ಅವರು ಮಾತನಾಡುತ್ತಾ ನಗರದಲ್ಲಿ ಸಂಚರಿಸುವ ಎಲ್ಲಾ ಆಟೋಗಳಲ್ಲಿ ಜಿ.ಪಿ.ಎಸ್. ಅಳವಡಿಕೆ ಹಾಗೂ ಎಲೆಕ್ಟ್ರಾನಿಕ್ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಂದ ಅನಧಿಕೃತವಾಗಿ ಹಣ ವಸೂಲಾತಿಗೆ ಕಡಿವಾಣ ಹಾಕುವುದಲ್ಲದೆ ನಗರದಲ್ಲಿ ಆಗಾಗ ಕೇಳಿ ಬರುತ್ತಿರುವ ಕಾನೂನೂ ಬಾಹಿರ ಚಟುವಟಿಕೆಗಳಿಗೆ ನಿಯಂತ್ರಣ ಹಾಕುವುದು ಮತ್ತು ನಿಗಾ ವಹಿಸಲು ಸಾಧ್ಯವಾಗುತ್ತದೆ ಎಂದರು.   ಜಿ.ಪಿ.ಎಸ್. ಅಳವಡಿಕೆ ಸಂಬಂಧವಾಗಿ ಸರ್ಕಾರದಿಂದ ೧,೦೦೦ ರೂ. ನೀಡುತ್ತಿದ್ದು ಆಟೋ ಮಾಲೀಕರು ೨,೦೦೦ ರೂ. ನೀಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ