ಮುಖಪುಟ /ಸುದ್ದಿ ಸಮಾಚಾರ   
 

ಅಪರಾಧ ತಡೆಗೆ ನೂತನ ಉಪಕ್ರಮ ಜಯ್‌ಕುಮಾರ್ ಸಿಂಗ್

ಬೆಂಗಳೂರು ಜ. ೩೧ (ಕ. ವಾರ್ತೆ)-  ನೊಂದವರಿಗೆ ನೆರವು  ಎನ್ನುವುದೇ ನಮ್ಮ ಧ್ಯೇಯವಾಕ್ಯ.  ನಮ್ಮ ಎಲ್ಲಾ ವೃತ್ತಿಪರ ಚಟುವಟಿಕೆಗಳಿಗೆ ಇದೇ ಮಾನದಂಡ.  ಯಾರು ಕಾನೂನು ಭಂಗವುಂಟುಮಾಡುತ್ತಾರೋ, ಅಪರಾಧವೆಸಗುತ್ತಾರೋ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಪ್ರಭಾವನ್ನು ಬಳಸಿಕೊಂಡು ಅಪರಾಧಿಗಳು ಕಾನೂನಿನ ಹಿಡಿತದಿಂದ ಪಾರಾಗಲು ಸಾಧ್ಯವಾಗಬಾರದು.  ಮತ್ತೊಂದೆಡೆ ಸಮಾಜಘಾತುಕ ಚಟುವಟಿಕೆಗಳಿಗೆ ಬಲಿಯಾದವರಿಗೆ ಅತ್ಯಂತ ಸಹಾನುಭೂತಿಯಿಂದ ನಿಶ್ಚಯವಾಗಿ ಸಹಾಯ ಮಾಡುತ್ತೇವೆ ಎಂದು ಡಾ: ಅಜಯ್‌ಕುಮಾರ್ ಸಿಂಹ ಅವರು ತಿಳಿಸಿದರು. 

ಅವರು  ರಾಜ್ಯದ  ನೂತನ ಡಿಜಿ ಮತ್ತು ಐಜಿಪಿ ಆಗಿ  ಅಧಿಕಾರ ಸ್ವೀಕರಿಸಿದನಂತರ ಪತ್ರಿಕಾಗೋಷ್ಠಿಯನ್ನು  ಉದ್ದೇಶಿಸಿ ಮಾತನಾಡುತ್ತಿದ್ದರು.   ಜನ-ಪರ ಪೊಲೀಸ್ ಆಗಲು ಶ್ರಮಿಸುತ್ತೇವೆ ಜನತೆಯೊಂದಿಗೆ ಹೆಚ್ಚು ಸಂಬಂಧ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಸಹೋದ್ಯೋಗಿಗಳ ಜೊತೆಗೆ ಚರ್ಚಿಸಿ ಕೆಲವು ಹೊಸ ಕಾರ್ಯಕ್ರಮಗಳ ಮೂಲಕ ಇದನ್ನು ಸಾಧಿಸುತ್ತೇವೆ ಎಂದು ತಿಳಿಸಿದರು.

ಪೊಲೀಸ್ ಕಾರ್ಯಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ, ಶಾಂತಿ ಮತ್ತು ಸುವ್ಯವ್ಯಸ್ಥೆಯನ್ನು ಕಾಪಾಡುವುದು, ಅಪರಾಧ ತಡೆ ಮತ್ತು ಪತ್ತೆಹಚ್ಚಲು ಪರಿಣಾಮಕಾರಿ ಹಾಗೂ ಹೊಸ ರೀತಿಯ ಕ್ರಮಗಳು, ಭಯೋತ್ಪಾದನೆಯನ್ನು ಹೇಗೆ ತಡೆಗಟ್ಟಬಹುದು, ತನಿಖೆಯಲ್ಲಿ ವೈಜ್ಞಾನಿಕ ಉಪಕರಣ ಬಳಕೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರ ಕಲ್ಯಾಣ ಕ್ರಮಗಳು ಎಂಬ ವಿಷಯಗಳ ಬಗ್ಗೆ  ಅಧ್ಯಯನ ನಡೆಸಿ ಸಲಹೆ ಸೂಚನೆಗಳನ್ನು ನೀಡಲು ಅಧಿಕಾರಿಗಳ ತಂಡಗಳನ್ನು ರಚಿಸಲಾಗುವುದೆಂದು ನುಡಿದರು.

ಪೊಲೀಸ್ ಕೆಲಸಕ್ಕೆ ಸಂಬಂಧಿಸಿದಂತೆ ಪಿ.ಸಿ. ಹೆಚ್.ಸಿ., ಪಿ.ಸಿ.ಐ. ಮತ್ತು ಎ.ಎಸ್.ಐ ಗಳಿಗೆ ಪ್ರತಿ ಜಿಲ್ಲೆಗಳಲ್ಲಿ ಹಾಗೂ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ, ಪ್ರತಿ ಘಟಕದಲ್ಲೂ  ಉತ್ತಮವಾದ  ಮೂರು ಪ್ರಬಂಧಗಳಿಗೆ ಬಹುಮಾನ ನೀಡಲಾಗುವುದು.  ಜೊತೆಗೆ ಪ್ರತಿ ವರ್ಷ ಉತ್ತಮ ಪತ್ತೆಕಾರ್ಯ, ಅಪರಾಧಕ್ಕೆ ಸಂಬಂಧಿಸಿದ ಮಾಲು ವಶಪಡಿಸಿಕೊಳ್ಳುವಿಕೆಯಲ್ಲಿ ಉತ್ತಮ ಕೆಲಸ ಮತ್ತು ವಶಪಡಿಸಿಕೊಳ್ಳಲಾದ ಮಾಲುಗಳನ್ನು ಫಿರ್ಯಾದುದಾರರಿಗೆ ಹಿಂತಿರುಗುವಿಕೆ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ  ವಾರ್ಷಿಕ ಕ್ರೀಡಾಕೂಟದ ಸಮಯದಲ್ಲಿ ಬಹುಮಾನ ನೀಡಲಾಗುವುದು. ಹೊಸ ರೀತಿಯ (Innovative) ಹಾಗೂ ಯಶಸ್ವಿ ಕ್ರಮಗಳು/ ಕಾರ್ಯಯೋಜನೆಗಳಿಗೂ ಪ್ರತಿ ವರ್ಷ ಬಹುಮಾನಗಳು ನೀಡಲಾಗುವುದು ಎಂದು ಡಿಜಿ ಮತ್ತು ಐಜಿಪಿ ಅವರು ಹೇಳಿದರು.  

ಅಧಿಕಾರಯುತ ರೀತಿ ಯಿಂದ ಜಬಾಬ್ದಾರಿಯುತ ನೀತಿಗೆ ನಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸುತ್ತೇವೆ ಎಂದ ಅವರು ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಜನತೆಗೆ ಮಾಹಿತಿಯನ್ನು ಒದಗಿಸಲು ಜಿಲ್ಲೆ, ವಲಯ ಮತ್ತು ನಗರ ಪೊಲೀಸ ಆಯುಕ್ತರ ಮಟ್ಟದಲ್ಲಿ ಅಪರಾಧ, ಕಾನೂನು ಸುವ್ಯವ್ಯಸ್ಥೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ನಿಯಮಿತವಾಗಿ ಪತ್ರಿಕಾ ಸಂದರ್ಶನವನ್ನು ನಡೆಸಲಾಗುವುದು, ವಶಪಡಿಸಿಕೊಂಡ ಮಾಲುಗಳನ್ನು ಆದಷ್ಟು ಶೀಘ್ರವಾಗಿ ಫಿರ್ಯಾದುದಾರರಿಗೆ ಹಿಂತಿರುಗಿಸುವ ಸಲುವಾಗಿ ತ್ರೈಮಾಸಿಕ ಪ್ರಾಪರ್‍ಟಿ ಪೆರೇಡ್ ಅನ್ನು ಇಲಾಖೆಯ ಎಲ್ಲಾ ಜಿಲ್ಲಾ ಘಟಕಗಳಲ್ಲಿ ಹಾಗೂ ಪೊಲೀಸ್ ಆಯುಕ್ತರ ಕಛೇರಿಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದ  ಡಿಜಿ ಮತ್ತು ಐಜಿಪಿಯಾಗಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಆರ್. ಶ್ರೀಕುಮಾರ್ ಅವರು ಕರ್ನಾಟಕ ಜನತೆಗೆ ಕೃತಜ್ಞತೆ ಅರ್ಪಿಸಿ  ತಮ್ಮ ಅಧಿಕಾರಾವಧಿಯಲ್ಲಿ ಪೊಲೀಸ್ ಇಲಾಖೆ  ಆಧುನೀಕರಣಗೊಳಿಸುವತ್ತ ಕ್ರಮ ಕೈಗೊಳ್ಳಲಾಗಿದೆ.  ಕೆಲವು ಅಪೂರ್ಣವಾಗಿರುವ ಕ್ರಮಗಳನ್ನು ನೂತನ ಡಿಜಿ ಮತ್ತು ಐ.ಜಿಪಿ ಅವರು ಪೂರ್ಣಗೊಳಿಸುವರೆಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು. 

 ಮುಖಪುಟ /ಸುದ್ದಿ ಸಮಾಚಾರ