ಮುಖಪುಟ /ಸುದ್ದಿ ಸಮಾಚಾರ   
 

ಬೆಳಗಾವಿ ಸುವರ್ಣ ಸೌಧ: ೨೩೦ ಕೋಟಿ ರೂ. ನೀಲನಕ್ಷೆ

ಬೆಳಗಾವಿ ಜ.೨೧ (ಕ. ವಾರ್ತೆ): ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಪ್ರಪ್ರಥಮ ಬಾರಿಗೆ ಬೆಳಗಾವಿಯಲ್ಲಿ ೨೦೦೬ರ ಸೆಪ್ಟೆಂಬರ್ ೨೫ ರಿಂದ ೨೯ರ ವರೆಗೆ ಅಧಿವೇಶನವನ್ನು ಆಯೋಜಿಸಿತ್ತು.  ಈ ಸಂದರ್ಭದಲ್ಲಿ ವಿಧಾನಮಂಡಳದ ಎರಡು ಸದನಗಳ ಅಧಿವೇಶನವನ್ನು ಪ್ರತಿವರ್ಷ ಬೆಳಗಾವಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.  ಅಧಿವೇಶನ ನಡೆಸಲು ಬೆಳಗಾವಿಯಲ್ಲಿ ಶಾಶ್ವತವಾದ ವಿಧಾನಸೌಧ ಮಾದರಿಯಲ್ಲಿ ಸುಸಜ್ಜಿತ ಸುವರ್ಣ ಸೌಧ ಕಟ್ಟಡ ನಿರ್ಮಿಸುವ ನಿರ್ಧಾರವನ್ನು ಸಹ ತೆಗೆದುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ವಿಧಾನಸಭಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳ ನೇತೃತ್ವದಲ್ಲಿ ೨೦೦೮ರಲ್ಲಿ ರಚಿಸಲಾಗಿದ್ದ ಸಮಿತಿಯು, ಬೆಳಗಾವಿ ಸಮೀಪದ ಹಲಗಾ-ಬಸ್ತವಾಡ ಬಳಿಯ ಸ್ಥಳವನ್ನು ಇದಕ್ಕಾಗಿ ಆಯ್ಕೆ ಮಾಡಿತು.  ಅದಕ್ಕನುಗುಣವಾಗಿ ಈಗ ಬೆಳಗಾವಿಯಿಂದ ಧಾರವಾಡಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ೪ಕ್ಕೆ ಹೊಂದಿಕೊಂಡಿರುವ ಹಲಗಾ-ಬಸ್ತವಾಡ ಗ್ರಾಮದ ೧೩೦ ಎಕರೆ ೧೨ ಗುಂಟೆ ಜಮೀನಿನಲ್ಲಿ ಸುವರ್ಣ ಸೌಧ ಕಟ್ಟಡ ತಲೆಯೆತ್ತಲಿದೆ.

ಈ ವೈಶಿಷ್ಟ್ಯಪೂರ್ಣ ಸುವರ್ಣ ಸೌಧ ಕಟ್ಟಡವನ್ನು ಅಂದಾಜು ೨೩೦ ಕೋಟಿ ರೂ.ಗಳಲ್ಲಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಶಾಸಕರ ಭವನವನ್ನು ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೇಷನ್ (ಪಿ.ಪಿ.ಪಿ) ಆಧಾರದ ಮೇಲೆ ಪ್ರತ್ಯೇಕವಾಗಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ.  ಈಗಾಗಲೇ ಶಾಸಕರ ಭವನ ಕಟ್ಟಡ ಹೊರತುಪಡಿಸಿ ಸೌಧ ನಿರ್ಮಾಣದ ೨೩೦ ಕೋಟಿ ರೂ.ಗಳ ಅಂದಾಜು ಪತ್ರಿಕೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.  ಪ್ರಸಕ್ತ ವರ್ಷಕ್ಕಾಗಿ ೫೦ ಕೋಟಿ ರೂ.ಗಳ ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ.  ಹಲಗಾ ಮತ್ತು ಬಸ್ತವಾಡ ಗ್ರಾಮಗಳ ೧೪೬ ರೈತರ ಮಾಲೀಕತ್ವದಲ್ಲಿರುವ ಖಾಸಗಿ ಜಮೀನುಗಳ ಭೂಸ್ವಾಧೀನಕ್ಕಾಗಿಯೂ ಸಹ ಹಣವನ್ನು ಕಾಯ್ದಿರಿಸಲಾಗಿದೆ.

  ಸುವರ್ಣ ಸೌಧ ದಲ್ಲಿ ಶಾಸಕಾಂಗ ಹಾಗೂ ಆಡಳಿತಾತ್ಮಕ ಕಟ್ಟಡವನ್ನು ೩೭,೯೬೫ ಚ.ಮೀ.ದಲ್ಲಿ ನಿರ್ಮಿಸಲಾಗುತ್ತಿದ್ದುಕಲ್ಲಿನ ಕಟ್ಟಡ ಹಾಗೂ ಶಿಲಾ ಶಿಖರದ ನೀಲ ನಕ್ಷೆ ಹೊಂದಿದೆ.  ಸಚಿವಾಲಯದ ಕಟ್ಟಡವನ್ನು ೪೫೦ ಚ.ಮೀ.ದಲ್ಲಿ ನಿರ್ಮಿಸಲಾಗುತ್ತಿದೆ.   ಇದಲ್ಲದೆ ಪೊಲೀಸ್ ಠಾಣೆ, ಶಾಪಿಂಗ್, ಮೆಡಿಕಲ್ ಯುನಿಟ್ ಇತರ ಸೌಲಭ್ಯಗಳಿಗಾಗಿ ಒಟ್ಟಾರೆ ೧೫೦೦೦ ಚ.ಮೀ. ಸ್ಥಳ ಕಾಯ್ದಿರಿಸಲಾಗಿದೆ.  ಈ ಸೌಧದಲ್ಲಿ ೬೦ ಅಗಲದ ರಸ್ತೆ, ನವೀನ ಮಾದರಿಯ ವಿದ್ಯುತ್ ದೀಪಗಳು, ಆವರಣ ಗೋಡೆ ಹಾಗೂ ಲ್ಯಾಂಡ್ ಸ್ಕೇಪಿಂಗ್ ಕಾಮಗಾರಿಗಳನ್ನು ಕೈಕೊಳ್ಳಲಾಗುವುದು.  ಸುವರ್ಣ ಸೌಧ ಕಟ್ಟಡ ಹಾಗೂ ಶಾಸಕರ ಭವನ ಕಟ್ಟಡವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ

 ಮುಖಪುಟ /ಸುದ್ದಿ ಸಮಾಚಾರ