ಮುಖಪುಟ /ಸುದ್ದಿ ಸಮಾಚಾರ   
 

ಜನತೆಗೆ ಕೊಟ್ಟ ಭರವಸೆ ಈಡೇರಿಸಲು ಬದ್ಧ :ಮುಖ್ಯಮಂತ್ರಿ

B.S.Yedyurappa, Chief Minister of Karnatakaಬೆಳಗಾವಿ, ಜ ೨೧: (ಕ.ವಾರ್ತೆ): ರಾಜ್ಯದ ಜನತೆಗೆ ಕೊಟ್ಟ ಭರವಸೆ ಈಡೇರಿಸಬೇಕು. ಬಡವರಿಗೆ ಅನ್ನ, ಮನೆ, ಬಟ್ಟೆ ಹಾಗೂ ಉದ್ಯೋಗ ಕಲ್ಪಿಸಲು ತಾವು ಬದ್ಧರಾಗಿರುವುದಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಡಾ|| ಬಿ.ಎಸ್. ಯಡಿಯೂರಪ್ಪ ಅವರು ಇಂದಿಲ್ಲಿ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್, ವಿಕಲಚೇತನರಿಗೆ ಸಾಧನ ಸಲಕರಣೆ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ ಮತ್ತು ಮಕ್ಕಳ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದ ಅವರು ಬಡಜನತೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಜೀವನದಲ್ಲಿ ಸಾರ್ಥಕ ಕೆಲಸ ಮಾಡಿದ ಸಮಾಧಾನ, ಸಂತೃಪ್ತಿ ನನಗಿದ್ದು, ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳು ಆಗಬೇಕಾಗಿದ್ದು, ತಮ್ಮ ಸರಕಾರ ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆಯೆಂದು ಹೇಳಿದರು.

ಬಡ ಮನೆಯಲ್ಲಿ ಹೆಣ್ಣು ಮಗು ಜನಿಸಿದ ತಕ್ಷಣ ಅಪಮಾನಕ್ಕೆ ಒಳಗಾಗುವಂತಹ ಪರಿಸ್ಥಿತಿ ಒಂದು ಕಾಲಕ್ಕೆ ಇತ್ತು. ಈಗ ಜನತೆಯ ಆಶೋತ್ತರದಂತೆ ನಾನು ಮುಖ್ಯಮಂತ್ರಿಯಾಗಿದ್ದು, ದೇಶದಲ್ಲಿಯೇ ಅತ್ಯುತ್ತಮವಾಗಿರುವಂತಹ ಭಾಗ್ಯಲಕ್ಷ್ಮೀ ಯಂತಹ ಯೋಜನೆ ಜಾರಿಗೊಳಿಸಲಾಗಿದೆ. ಹೆಣ್ಣು ಮಗು ೧೮ ವಯೋಮಿತಿ ಆದ ತಕ್ಷಣ ೧ ಲಕ್ಷ ರೂಪಾಯಿ ದೊರೆಯುವಂತಹ ಪರಿಣಾಮಕಾರಿಯಾದ ಈ ಯೋಜನೆಯಾಗಿದ್ದು, ಮಗು ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿದ ನಂತರ ಶಿಕ್ಷಣಕ್ಕಾಗಿ ಸಾಲದ ಅವಶ್ಯಕತೆ ಕೋರಿದ್ದಲ್ಲಿ ಬಾಂಡ್ ಮೇಲೆ ಸಾಲ ಕೊಡುವಂತಹ, ಪಾಲಕರಿಗೂ ಇನ್ಸುರೆನ್ಸ್ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಹಿರಿಯ ನಾಗರಿಕರಿಗೆ ೪೦೦/- ರೂ.ಗಳ ಮಾಸಿಕ ಮಾಶಾಸನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ.

ಸರಕಾರ ಬಡಜನತೆಯ ಮನೆಬಾಗಿಲಿಗೆ ತಲುಪಬೇಕೆಂಬ ಉದ್ದೇಶದಿಂದ ಅಂಗವಿಕಲರಿಗೆ ೧೦೦೦/- ರೂ.ಗಳ ಮಾಶಾಸನ ಯೋಜನೆ ಜಾರಿಗೊಳಿಸಿದ್ದು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಶೇ. ೬ ರ ಬಡ್ಡಿ ಮೇಲೆ ಸಾಲ ನೀಡುವಂತಹ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಪೂರೈಕೆಗಾಗಿ ಸಾಲ ನೀಡುವಂತಹ ಪರಿಣಾಮಕಾರಿಯಾದ ಹತ್ತು ಹಲವು ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ. ಕರ್ನಾಟಕದ ಜನತೆ ಸ್ವಾಭಿಮಾನದಿಂದ ಬದುಕಬೇಕು. ಗೌರವದಿಂದ ಬಾಳಬೇಕೆಂಬುದು ತಮ್ಮ ಆಶೆ, ಪಾಲಕರು ಸಹ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಭವಿಷ್ಯತ್ತಿನ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀ. ಪಿ. ನರೇಂದ್ರಸ್ವಾಮಿ ಅವರು ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ವರ್ಗ ಶೋಷಿತ ವರ್ಗವಾಗಿದೆ. ಅವರ ಮೇಲಿನ ದೌರ್ಜನ್ಯ ತೊಡೆದು ಹಾಕಬೇಕೆಂಬ ಉದ್ದೇಶದಿಂದ ಭಾಗ್ಯಲಕ್ಷ್ಮೀ ಯಂತಹ ಯೋಜನೆ ಜಾರಿಗೊಳಿಸಿದೆ. ಅದರಂತೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳನ್ನು ಸಬಲೀಕರಣಗೊಳಿಸಲು ಸಾಲ ನೀಡುವ ಯೋಜನೆ ಸಹ ಜಾರಿಗೊಲಿಸಲಾಗಿದೆಯೆಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಲೋಕಸಭಾ ಸದಸ್ಯ ಶ್ರೀ. ಸುರೇಶ ಅಂಗಡಿ ಅವರು ಮಕ್ಕಳನ್ನು ಭಾರತದ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಸ್ವಾತಂತ್ರ್ಯ ವೀರರಂತೆ ತಮ್ಮ ಮಕ್ಕಳನ್ನು ರೂಪಿಸಿ ಅವರಲ್ಲಿ ರಾಷ್ಟ್ರಭಕ್ತಿ ಬೆಳೆಸಬೇಕು. ಬಡ, ಶ್ರೀಮಂತ ಮಹಿಳೆಯರಲ್ಲಿ ಸಮಾನತೆ ಬರಬೇಕು ಎಂಬ ಉದ್ದೇಶದಿಂದ ರಾಜ್ಯಸರಕಾರವು ಮಹಿಳೆಯರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು. 

 ಮುಖಪುಟ /ಸುದ್ದಿ ಸಮಾಚಾರ