ಮುಖಪುಟ /ಸುದ್ದಿ ಸಮಾಚಾರ   
 

ವಿಧಾನ ಪರಿಷತ್ ಉಪಸಭಾಪತಿಗಳಾಗಿ ಪುಟ್ಟಣ್ಣ ಆಯ್ಕೆ 

ಬೆಳಗಾವಿ ಜ.೨೧ (ಕ. ವಾರ್ತೆ): ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರು ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿಗಳಾಗಿ ಇಂದು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಕಾಂಡಕನಹಳ್ಳಿಯಲ್ಲಿ ೨೨-೪-೧೯೬೬ ರಂದು ಜನಿಸಿದರು. ಪುಟ್ಟಣ್ಣ ಅವರು ಸ್ನಾತಕೋತ್ತರ ಪದವೀಧರರಾಗಿದ್ದು, ವ್ಯವಸಾಯ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಎರಡನೇ ಬಾರಿಗೆ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆ ಆಗಿರುವ ಜೆ.ಡಿ.ಎಸ್. ಪಕ್ಷದ ಶ್ರೀ ಪುಟ್ಟಣ್ಣ ಅವರು ವಿದ್ಯಾರ್ಥಿ ಜೀವನದಿಂದಲೇ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.  ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಈ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲಿಂಗ್ ಸದಸ್ಯರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.  ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ೨೦೦೨ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದ ಶ್ರೀ ಪುಟ್ಟಣ್ಣ ಅವರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಹಾಗೂ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನಾಮ ನಿರ್ದೇಶನ ಸೆನೆಟ್ ಸದಸ್ಯರಾಗಿ, ಬೆಂಗಳೂರು ವಿಶ್ವ ವಿದ್ಯಾಲಯದ ಅಕಾಡೆಮಿಕ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.  ೨೦೦೮ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಶ್ರೀ ಪುಟ್ಟಣ್ಣ ಅವರು ವಿಧಾನ ಪರಿಷತ್ ಸದಸ್ಯರಾಗಿ ೨ನೇ ಬಾರಿಗೆ ಆಯ್ಕೆ ಆಗಿದ್ದಾರೆ.    ಅಮೇರಿಕದ ಹೋಸ್ಟನ್ ನಗರದಲ್ಲಿ ಮಾರ್ಚ್ ೨೦೦೦ದಲ್ಲಿ ನಡೆದ ಸಹಸ್ರಮಾನ ವಿಶ್ವ ಕನ್ನಡ ಸಮ್ಮೇಳನದಲ್ಲಿಯೂ ಸಹ ಶ್ರೀ ಪುಟ್ಟಣ್ಣ ಅವರು ಭಾಗವಹಿಸಿದ್ದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ಸದನದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಡಾ: ಬಿ.ಎಸ್. ಯಡಿಯೂರಪ್ಪ ಅವರು ಶ್ರೀ ಪುಟ್ಟಣ್ಣ ಅವರನ್ನು ಅಭಿನಂದಿಸಿ ಪಕ್ಷ ಬೇಧ ಮರೆತು ಅವಿರೋಧವಾಗಿ ಆಯ್ಕೆ ಮಾಡುವ ಈ ಸತ್‌ಸಂಪ್ರದಾಯ ಉಭಯ ಸದನಗಳಲ್ಲಿ ಬೆಳೆದು ಬರಬೇಕೆಂದರು.  ಪರಿಷತ್ತಿನ ಸಭಾನಾಯಕರಾದ ಗೃಹ ಸಚಿವ ಡಾ: ವಿ.ಎಸ್. ಆಚಾರ್ಯ ಹಾಗೂ ವಿರೋಧ ಪಕ್ಷದ ನಾಯಕ ಶ್ರೀ ಉಗ್ರಪ್ಪ ಅವರು ನೂತನ ಸಭಾಪತಿಗಳನ್ನು ಅಭಿನಂದಿಸಿ ಮಾತನಾಡಿದರು.

 ಮುಖಪುಟ /ಸುದ್ದಿ ಸಮಾಚಾರ