ಮುಖಪುಟ /ಸುದ್ದಿ ಸಮಾಚಾರ   
 

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಸಮಗ್ರ ಕಾರ್ಯಕ್ರಮ ಪಟ್ಟಿ...

Bhuvaneswariಬೆಂಗಳೂರು ಜನವರಿ ೧೯ (ಕ.ವಾರ್ತೆ): ಐತಿಹಾಸಿಕ ನಗರಿ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ  ಇದೇ ೨೦೦೯ ಜನವರಿ ೨೯, ೩೦, ೩೧ ಹಾಗೂ ಫೆಬ್ರವರಿ ೧ ರಂದು ನಡೆಯುವ ೭೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸರ್ವ ಸಿದ್ಧತೆಗಳೂ ಪೂರ್ಣಗೊಂಡಿವೆ. ಸಮ್ಮೇಳನದ ಸಂಪೂರ್ಣ ಕಾರ್ಯಕ್ರಮ ಪಟ್ಟಿ ಇಲ್ಲಿದೆ....

          ದಿನಾಂಕ ೨೯-೧-೨೦೦೯ ರಂದು ಬೆಳಗ್ಗೆ ೯-೩೦ ಕ್ಕೆ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಕರುಣಾಕರ ರೆಡ್ಡಿ ಅವರು ರಾಷ್ಟ್ರಧ್ವಜವನ್ನೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್.  ಪರಿಷತ್ತಿನ ಧ್ವಜವನ್ನು ಹಾರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.  

          ಅದೇ ದಿನ ಬೆಳಗ್ಗೆ ೧೦-೩೦ಕ್ಕೆ ಮಾನ್ಯ ಜವಳಿ, ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾದ ಶ್ರೀ ಗೂಳಿಹಟ್ಟಿ ಡಿ. ಶೇಖರ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ.  ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ನಗರ ಸಭೆ ಅಧ್ಯಕ್ಷರು, ಉಪಾಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

          ನಂತರ ಅದೇ ದಿನ, ೨೯-೧-೨೦೦೯ ರಂದು ಮಧ್ಯಾಹ್ನ ೩-೩೦ಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ  ಡಾ. ಬಿ.ಎಸ್.ಯಡಿಯೂರಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.   ಇದೇ ಸಂದರ್ಭದಲ್ಲಿ ಸಮ್ಮೇಳನದ ಸ್ಮರಣ ಸಂಚಿಕೆ ಚಿನ್ಮೂಲಾದ್ರಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎಚ್.ಕೃಷ್ಣಯ್ಯ ಅವರು; ಪರಿಷತ್ತಿನ ಪುಸ್ತಕಗಳನ್ನು ಹಿರಿಯ ಸಾಹಿತಿ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿ ಅವರು; ಸ್ವಾಗತ ಸಮಿತಿಯ ಪುಸ್ತಕಗಳನ್ನು ಶ್ರೀ ಡಿ.ಸುಧಾಕರ ಅವರು; ವಿಶೇಷ ಅಂಚೆ ಲಕೋಟೆಯನ್ನು ಕರ್ನಾಟಕ ವಲಯ ಪ್ರಧಾನ ಅಂಚೆ ಮಹಾ ನಿರೀಕ್ಷಕರಾದ ಶ್ರೀ ಎಂ.ಪಿ.ರಾಜನ್ ಅವರು; ಜಿಲ್ಲಾ ಮಾಹಿತಿ ಪುಸ್ತಕವನ್ನು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾದ ಶ್ರೀ ಎಚ್.ಹನುಮಂತಪ್ಪ ಅವರು; ವಿವಿಧ ಲೇಖಕರ ಕೃತಿಗಳನ್ನು ಡಾ. ಎ.ಎಚ್.ಶಿವಯೋಗಿಸ್ವಾಮಿ ಅವರು ಬಿಡುಗಡೆ ಮಾಡಲಿದ್ದಾರೆ.

  ಲೋಕಸಭಾ ಸದಸ್ಯರಾದ ಶ್ರೀ ಜಿ.ಎಂ.ಸಿದ್ದೇಶ್ ಅವರು ಕಲಾ ಪ್ರದರ್ಶನವನ್ನೂ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮುಖ್ಯಮಂತ್ರಿ ಚಂದ್ರು ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ; ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯ ಅವರು ಪುಸ್ತಕ ಮಳಿಗೆಗಳನ್ನೂ ಉದ್ಘಾಟಿಸಲಿದ್ದಾರೆ.  ಶಾಸಕರಾದ ಶ್ರೀ ಎಸ್.ಕೆ.ಬಸವರಾಜನ್, ಶ್ರೀ ತಿಪ್ಪೇಸ್ವಾಮಿ, ಶ್ರೀ ಎನ್.ವೈ.ಗೋಪಾಲಕೃಷ್ಣ, ಶ್ರೀ ಎಂ.ಚಂದ್ರಪ್ಪ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಜಯರಾಮರಾಜೇ ಅರಸ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀ ಎಲ್.ಭೈರಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

          ಮುಂದಿನ ಮೂರು ದಿನಗಳ ಕಾಲ ಕನ್ನಡ ನಾಡು, ನುಡಿ, ನೆಲ, ಜಲ, ಪ್ರಸಕ್ತ ವಿದ್ಯಾಮಾನಗಳನ್ನು ಕುರಿತು     ೧೪ ಸಾಹಿತ್ಯ ಗೋಷ್ಠಿಗಳು, ಎರಡು ಕವಿಗೋಷ್ಠಿಗಳು ನಡೆಯಲಿವೆ.  ಹಾಗೂ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ.  ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ೭ ವಿಚಾರ ಗೋಷ್ಠಿಗಳು ಹಾಗೂ ಸಮಾನಾಂತರ ವೇದಿಕೆಯಲ್ಲಿ ೭ ಗೋಷ್ಠಿಗಳು ನಡೆಯಲಿವೆ.  ಈ ಸಮ್ಮೇಳನದಲ್ಲಿ ವಿಶೇಷವಾಗಿ ಜಾಗತಿಕ ಸಮಸ್ಯೆ ಹಾಗೂ ಸವಾಲುಗಳನ್ನು ಕುರಿತು ಚರ್ಚಿಸಲಾಗುವುದು.

          ದಿನಾಂಕ ೩೦-೧-೨೦೦೯ ರಂದು ಬೆಳಗ್ಗೆ ೯ ಗಂಟೆಗೆ ಜಾಗತಿಕ ಸಮಸ್ಯೆಗಳನ್ನು ಕುರಿತ ಗೋಷ್ಠಿ ನಡೆಯಲಿದ್ದು, ಶ್ರೀ ಡಿ.ವಿ.ರಾಜಶೇಖರ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  ಶ್ರೀ ಡಿ.ಎಸ್.ಚೌಗಲೆ, ಶ್ರೀ ಟಿ.ಆರ್.ಚಂದ್ರಶೇಖರ, ಶ್ರೀ ದಿನೇಶ್ ಅಮೀನ್‌ಮಟ್ಟು ಅವರುಗಳು ಪ್ರಬಂಧಗಳನ್ನು ಮಂಡಿಸಲಿದ್ದು, ಶ್ರೀ ವಿಶ್ವೇಶ್ವರ ಭಟ್ಟ ಅವರು ಆಶಯ ಭಾಷಣ ಮಾಡಲಿದ್ದರೆ. 

          ಅದೇ ದಿನ ಬೆಳಗ್ಗೆ ೧೧ ಗಂಟೆಗೆ ಶ್ರೀ ಕೋ.ಚೆನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಾಡು-ನುಡಿ ಕುರಿತ ಗೋಷ್ಠಿ ನಡೆಯಲಿದ್ದು, ಪ್ರೊ. ಲಿಂಗದೇವರು ಹಳೇಮನೆ, ಶ್ರೀ ಬಿ.ವಿ.ಕಕ್ಕಿಲ್ಲಾಯ, ಶ್ರೀ ಪಿ.ಜಿ.ಆರ್.ಸಿಂದ್ಯಾ ಅವರುಗಳು ಪ್ರಬಂಧಗಳನ್ನು ಮಂಡಿಸಲಿದ್ದಾರೆ.  ಡಾ. ಮಳಲಿ ವಸಂತಕುಮಾರ್ ಅವರು ಆಶಯ ಭಾಷಣ ಮಾಡಲಿದ್ದರೆ.

          ಮಧ್ಯಾಹ್ನ ೨-೩೦ಕ್ಕೆ ನಾಡೋಜ ಎಲ್.ನಾರಾಯಣ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕೃಷಿ-ಬದುಕು ಕುರಿತ  ಗೋಷ್ಠಿಯನ್ನು ಏರ್ಪಡಿಸಲಾಗಿದ್ದು, ಶ್ರೀ ಕೆ.ಎಸ್.ಪುಟ್ಟಣ್ಣಯ್ಯ, ಶ್ರೀ ಬಾಳೇಕಾಯಿ ಶಿವನಂಜಯ್ಯ. ಶ್ರೀ ಶ್ರೀಪಡ್ರೆ ಅವರುಗಳನ್ನು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. 

          ಅಂದೇ ಸಂಜೆ ೪-೩೦ಕ್ಕೆ ಚಿತ್ರದುರ್ಗ ಜಿಲ್ಲೆಯ ಸಮಸ್ಯೆ-ಪರಿಹಾರ ಕುರಿತು ಗೋಷ್ಠಿ ನಡೆಯಲಿದ್ದು, ಶ್ರೀ ಶ್ರೀ ಪಂಡಿತಾರಾಧ್ಯ ಮಾಹಾಸ್ವಾಮಿಗಳವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  ಶ್ರೀ ಎಂ.ಜಯಣ್ಣ, ಡಾ. ಬಂಜಗೆರೆ ಜಯಪ್ರಕಾಶ, ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ ಹಾಗೂ ಶ್ರೀ ವಿಲಾಸ್ ಮೇಲಗಿರಿ ಅವರು ಪ್ರಬಂಧಗಳನ್ನು ಮಂಡಿಸಲಿದ್ದಾರೆ.  ಶ್ರೀ ಏಕಾಂತಯ್ಯ ಅವರು ಆಶಯ ಭಾಷಣ ಮಾಡಲಿದ್ದಾರೆ.

          ದಿನಾಂಕ ೩೧-೧-೨೦೦೯ ರಂದು ಶನಿವಾರ ಬೆಳಗ್ಗೆ ೯ ಗಂಟೆಗೆ ಹಮ್ಮಿಕೊಂಡಿರುವ ಮಾಧ್ಯಮಗಳು ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತ ಗೋಷ್ಠಿಯಲ್ಲಿ ಶ್ರೀ ಗಣೇಶ ಅಮೀನಗಡ, ಶ್ರೀ ಅಬ್ಬೂರು ರಾಜಶೇಖರ, ಶ್ರೀ ಎನ್.ಆರ್.ನಂಜುಂಡೇಗೌಡ, ಶ್ರೀ ಶ.ಮಂಜುನಾಥ ಅವರುಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದು, ಶ್ರೀ ರವೀಂದ್ರ ರೇಷ್ಮೆ ಅವರು ಇದರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  ಶ್ರೀ ಬಿ.ಎಸ್.ಉಜ್ಜನಪ್ಪ ಅವರು ಆಶಯ ಭಾಷಣ ಮಾಡಲಿದ್ದಾರೆ. 

          ಬೆಳಗ್ಗೆ ೧೧ ಗಂಟೆಗೆ ಡಾ. ಹಿ.ಶಿ.ರಾಮಚಂದ್ರೇಗೌಡ ಅವರ ಅಧ್ಯಕ್ಷತೆಯಲ್ಲಿ ಜನಪದ ಜೀವನ ಗೋಷ್ಠಿ ನಡೆಯಲಿದ್ದು, ಡಾ. ವೆಂಕಟೇಶ ಇಂದ್ವಾಡಿ, ಡಾ. ಕೆ.ಎಂ.ಮೇತ್ರಿ, ಶ್ರೀ ಹಂಸಲೇಖಾ ಅವರುಗಳು ಪ್ರಬಂಧಗಳನ್ನು ಮಂಡಿಸಲಿದ್ದಾರೆ.  ಡಾ. ಪಿ.ಕೆ.ಖಂಡೋಬಾ ಅವರು ಆಶಯ ಭಾಷಣ ಮಾಡಲಿದ್ದಾರೆ.

          ಮಧ್ಯಾಹ್ನ ೨-೩೦ಕ್ಕೆ ಡಾ. ಎಸ್.ಮಾಲತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಹಿಳಾ ಚಿಂತನೆ ಗೋಷ್ಠಿಯಲ್ಲಿ ಡಾ. ಶುಭಾ ದಾಸ್ ಮರವಂತೆ, ಶ್ರೀಮತಿ ಬಿ.ಟಿ.ಕುಮುದಾ ನಾಯಕ್, ಶ್ರೀ ಗುಡಿಹಳ್ಳಿ ನಾಗರಾಜ್ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದು, ಡಾ. ಕೆ.ಆರ್.ಸಂಧ್ಯಾ ರೆಡ್ಡಿ ಅವರು ಆಶಯ ಭಾಷಣ ಮಾಡಲಿದ್ದಾರೆ.

          ದಿನಾಂಕ ೩೧-೧-೨೦೦೯ ರಂದು ಸಂಜೆ ೪-೩೦ಕ್ಕೆ ಡಾ. ಸುಮತೀಂದ್ರ ನಾಡಿಗ ಅವರ ಅಧ್ಯಕ್ಷತೆಯಲ್ಲಿ ಹಾಗೂ ದಿನಾಂಕ ೧-೨-೨೦೦೯ ರಂದು ಬೆಳಗ್ಗೆ ೯ ಗಂಟೆಗೆ ಶ್ರೀ ಚಂದ್ರಶೇಖರ ತಾಳ್ಯ ಅವರ ಅಧ್ಯಕ್ಷತೆಯಲ್ಲಿ ಎರಡು ಕವಿಗೋಷ್ಠಿಗಳು ನಡೆಯಲಿದ್ದು, ಸುಮಾರು ೭೦ ಜನ ಕವಿಗಳು ತಮ್ಮ ಕವನಗಳನ್ನು ವಾಚಿಸಲಿದ್ದಾರೆ.

          ದಿನಾಂಕ ೧-೨-೨೦೦೯ ರಂದು ಬೆಳಗ್ಗೆ ೧೧ ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಏರ್ಪಡಿಸಿರುವ ಸಂವಾದದಲ್ಲಿ ಡಾ. ವೀರಣ್ಣ ದಂಡೆ, ಡಾ. ವೈ.ಸಿ.ಭಾನುಮತಿ, ಶ್ರೀ ರಂಜಾನ್ ದರ್ಗಾ, ಡಾ. ರಾಜೇಂದ್ರ ಎಸ್.ಗಡಾದ, ಶ್ರೀ ಚಂದ್ರಶೇಖರ ಆಲೂರು, ಶ್ರೀ ಜಿ.ವಿ.ಆನಂದಮೂರ್ತಿ, ಡಾ. ಎನ್.ಎಸ್.ತಾರಾನಾಥ, ಶ್ರೀ ಪಟೇಲ್ ಪಾಂಡು, ಡಾ. ವಜೀರ್‌ಬಾಶಾ ಮಹಮ್ಮದ್ ಬಾಗಾಯತ್, ಡಾ. ಬೈರಮಂಗಲ ರಾಮೇಗೌಡ, ಡಾ. ಶ್ರೀಪಾದಶೆಟ್ಟಿ, ಶ್ರೀಮತಿ ಸಾವಿತ್ರಿ ಮಜುಮದಾರ, ಶ್ರೀ ಷಣ್ಮುಖ ಚಿಕ್ಕಪ್ಪನಹಳ್ಳಿ, ಪ್ರೊ. ಸಿ.ಶಿವಲಿಂಗಪ್ಪ ಹಾಗೂ ಶ್ರೀ ಹರಿಚರಣ ತಿಲಕ್ ಅವರು ಭಾಗವಹಿಸಲಿದ್ದಾರೆ.  ಡಾ. ಸಿ.ಪಿ.ಸಿದ್ಧಾಶ್ರಮ ಅವರು ಈ ಗೋಷ್ಠಿಯ ನಿರ್ವಹಣೆ ಮಾಡಲಿದ್ದಾರೆ.             

 ಮುಖಪುಟ /ಸುದ್ದಿ ಸಮಾಚಾರ