ಮುಖಪುಟ /ಸುದ್ದಿ ಸಮಾಚಾರ   
 

ಸುಗಮ ಸಂಗೀತಗಾರ ರಾಜು ಅನಂತಸ್ವಾಮಿ ವಿಧಿವಶ

Raju Ananthaswamyಬೆಂಗಳೂರು, ಜ.17ಯುವ ಸುಗಮ ಸಂಗೀತಗಾರ, ಸಂಗೀತ ಸಂಯೋಜಕ ಹಾಗೂ ಕನ್ನಡ ಚಲನಚಿತ್ರ ನಟ ರಾಜು ಅನಂತಸ್ವಾಮಿ ಬೆಂಗಳೂರಿನಲ್ಲಿಂದು ನಿಧನ ಹೊಂದಿದರು.

ಅವರಿಗೆ 41 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ರಾಜು, ಚಿಕಿತ್ಸೆ ಫಲಕಾಣದೆ ಇಂದು ಮಧ್ಯಾಹ್ನ 12ಗಂಟೆ ಸುಮಾರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಈ ಹಿಂದೆ ಕಾಮಾಲೆ ರೋಗಕ್ಕೆ ತುತ್ತಾಗಿದ್ದ ಅವರು ಇತ್ತಿಚೆಗೆ ಕೆಲವು ತಿಂಗಳುಗಳಿಂದ ಬೆನ್ನುನೋವು ಮತ್ತು ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದರೆಂದು ಹತ್ತಿರದ ಬಂಧುಗಳು ಕನ್ನಡರತ್ನಕ್ಕೆ ತಿಳಿಸಿದರು.

ಖ್ಯಾತ ಸುಗಮ ಸಂಗೀತಗಾರ ಹಾಗೂ ಸಂಗೀತ ಸಂಯೋಜಕ ಮೈಸೂರು ಅನಂತಸ್ವಾಮಿ ಅವರ ಪುತ್ರರಾದ ರಾಜು ಅನಂತಸ್ವಾಮಿ, ಮಂಕು ತಿಮ್ಮನ ಕಗ್ಗ ಮತ್ತು ರತ್ನನ ಪದಗಳನ್ನು ಸುಶ್ರಾವ್ಯವಾಗಿ ಹಾಡಿ ಜನಪ್ರಿಯರಾಗಿದ್ದರು.

ದೇಶ ವಿದೇಶಗಳಲ್ಲಿ ನೂರಾರು ಸಂಗೀತ ಕಾರ್ಯಕ್ರಮ ನೀಡಿದ್ದ ರಾಜು ಅನಂತಸ್ವಾಮಿ, ಹತ್ತಾರು ಧ್ವನಿಸುರುಳಿಗಳನ್ನೂ ಹೊರತಂದಿದ್ದರು.

ಕನ್ನಡದ ಹಲವು ಚಲನಚಿತ್ರಗಳಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಜು, ಅತ್ಯುತ್ತಮ ಪೋಷಕ ಮತ್ತು ಹಾಸ್ಯನಟರೆಂದು ಗುರುತಿಸಿಕೊಂಡಿದ್ದರು.

ಶೋಕ : ರಾಜು ಅನಂತಸ್ವಾಮಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆ.ಪಿ.ಸಿ.ಸಿ. ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ