ಮುಖಪುಟ /ಸುದ್ದಿ ಸಮಾಚಾರ   
 

ಲಾಲ್‌ಬಾಗ್‌ನಲ್ಲಿ  26ರವರೆಗೆ ಫಲಪುಷ್ಪ ಪ್ರದರ್ಶನ
ಕೆಂಪುತೋಟದಿ ಮನಸೆಳೆಯುತ್ತಿದೆ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ

Flower Show, Lalbaghಬೆಂಗಳೂರು, ಜನವರಿ 17: ಈ ಹೊತ್ತು ಬೆಂಗಳೂರಿನಲ್ಲಿ ದುಂಬಿಗಳ ಝೇಂಕಾರ ಕೇಳಿಬರುತ್ತಿದೆ. ಪುಷ್ಪಗಳ ಪರಿಮಳ ಘಮಘಮಿಸುತ್ತಿದೆ. ಲಾಲ್‌ಬಾಗ್ ಗಾಜಿನಮನೆಯಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ ಎಂದು ಸಾರಿ ಸಾರಿ ಹೇಳುತ್ತಿದೆ.

ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ ಲಾಲ್‌ಬಾಗ್ ಗಾಜಿನ ಮನೆ ಹಾಗೂ ಡಾ. ಎಂ.ಎಚ್. ಮರಿಗೌಡ ಸ್ಮಾರಕ ಭವನವನ್ನು ಪ್ರವಾಸಿತಾಣವಾಗಿ ಮಾರ್ಪಡಿಸಿದೆ.

ಮೈಸೂರು ಉದ್ಯಾನ ಕಲಾ ಸಂಘ ಪ್ರತಿವರ್ಷದಂತೆ ಈ ವರ್ಷ ಕೂಡ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ವ್ಯವಸ್ಥೆಗೊಳಿಸಿದ್ದು, ಈ ಪ್ರದರ್ಶನದಲ್ಲಿ 225ಕ್ಕೂ ಹೆಚ್ಚು ಪ್ರಬೇಧದ ವಿವಿಧ ಬಗೆಯ ಹಣ್ಣು, ತರಕಾರಿ, ಅಲಂಕಾರಿಕ ಗಿಡಗಳು ವಿನೂತನ ವಿನ್ಯಾಸಗಳಿಂದ ಕಂಗೊಳಿಸಲಿವೆ.

ಕೆಂಪು ಬಿಳಿ ಗುಲಾಬಿಯಿಂದ ನಿರ್ಮಿಸಿರುವ ಗೋಲ, ಶಂಖದಲ್ಲಿ ಪಲ್ಲವಿಸಿರುವ ಬಗೆಬಗೆಯ ಪುಷ್ಪಗಳು, ಗಿರಿಧಾಮದಲ್ಲಿ ಮಾತ್ರವೇ ಅರಳಿ ಪರಿಮಳ ಸೂಸುವ ವನಸುಮಗಳು ಎಲ್ಲರ ಮನಸೆಳೆಯುತ್ತಿವೆ. ಚಳಿಗಾಲದಲ್ಲಷ್ಟೇ ಅರಳುವ ಅಪರೂಪದ ಪುಷ್ಪಗಳೂ ಜನಾಕರ್ಷಣೆಯ ಕೇಂದ್ರಬಿಂದುವಾಗಿವೆ.

ವಿವಿಧ ಸಂಸ್ಥೆಗಳು, ಸಂಘಗಳು, ಪ್ರದರ್ಶನ -ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿವೆ. ಇಕೆಬಾನ, ತರಕಾರಿ ಕೆತ್ತನೆ, ಫಲಗಳ ಜೋಡಣೆ, ರಂಗವಲ್ಲಿಸ್ಪರ್ಧೆಯೇ ಮೊದಲಾದ ವಿವಿಧ ಸ್ಪರ್ಧೆಗಳು ನಡೆಯಲಿವೆ. ಒಂದು ವಾರಗಳ ಕಾಲ ಈ ಪುಷ್ಪ ಪ್ರದರ್ಶನ ಜರುಗಲಿದೆ.

24ರಂದು ಶಾಲಾ ಮಕ್ಕಳಿಗೆ ಬೆಳಗ್ಗೆ ಉಚಿತ ಪ್ರವೇಶ ಎಂದು ತೋಟಗಾರಿಕೆ ಇಲಾಖೆ ಪ್ರಕಟಿಸಿದೆ. 240 ಎಕರೆ ಪ್ರದೇಶದಲ್ಲಿ , ಸಾವಿರಾರು ಬಗೆಯ ಹೂಗಿಡ, ಮರ, ಬಳ್ಳಿಗಳಿಂದ ಕೂಡಿ ಸಮೃದ್ಧವಾದ ಸುಂದರ ಲಾಲ್‌ಬಾಗ್ ಉದ್ಯಾನದಲ್ಲಿ ತಂಡಿ ಸಡಕ್, ಪುಷ್ಪ ಗಡಿಯಾರ, ಗಾಜಿನ ಮನೆ, ಕೆಂಪೇಗೌಡರ ಗೋಪುರವನ್ನೂ ನೋಡಬಹುದು.

ಮುಖಪುಟ /ಸುದ್ದಿ ಸಮಾಚಾರ