ಮುಖಪುಟ /ಸುದ್ದಿ ಸಮಾಚಾರ   
 

ರೈತರ, ರಾಜ್ಯದ ಅಭಿವೃದ್ಧಿಗೆ ಸರ್ಕಾರ ಬದ್ಧ
ಬೆಳಗಾವಿಯಲ್ಲಿ ಐತಿಹಾಸಿಕ ವಿಧಾನಮಂಡಲ ಅಧಿವೇಶನ

Joint Session, Belegaum, ಬೆಳಗಾವಿ ಐತಿಹಾಸಿಕ ವಿಧಾನಮಂಡಲ ಅಧಿವೇಶನಬೆಳಗಾವಿ, ಜ.16: ಭಯೋತ್ಪಾದನೆ ಹತ್ತಿಕ್ಕಲು ಅಗತ್ಯ ಕ್ರಮ, ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಉದ್ಭವಿಸಿರುವ ಹಿಂಜರಿತದಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗದಂತೆ ಮುನ್ನಚ್ಚರಿಕೆಯೊಂದಿಗೆ ರಾಜ್ಯವನ್ನು ಮುನ್ನಡೆಸುವುದರ ಜೊತೆಗೆ ರಾಜ್ಯದ ರೈತರ ಅಭಿವೃದ್ಧಿಗೂ ಸರ್ಕಾರ ಪಣ ತೊಟ್ಟಿರುವುದಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಹೇಳಿದರು.

ಬೆಳಗಾವಿಯಲ್ಲಿಂದು ಆರಂಭವಾದ ಐತಿಹಾಸಿಕ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, ಜಾಗತಿಕ ಆರ್ಥಿಕ ಹಿನ್ನಡೆಯಿಂದ ರಾಜ್ಯದ ತೆರಿಗೆ ಸಂಗ್ರಹಣೆಯಲ್ಲಿಯೂ ಕಡಿತವಾಗಿದೆ. ಆದಾಗ್ಯೂ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಮುಗ್ಗಟ್ಟು ಎದುರಾಗದಂತೆ ಕ್ರಮ ಕೈಗೊಂಡಿದೆ ಎಂದರು.

ಜಾಗತಿಕ ಆರ್ಥಿಕ ಹಿನ್ನಡೆಯಿಂದ ಜವಳಿ ಉದ್ಯಮ, ಮಾಹಿತಿ ತಂತ್ರಜ್ಞಾನ ಉದ್ಯಮ ಹಾಗೂ ಆಟೋಮೊಬೈಲ್ ಉದ್ಯಮದ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದ್ದು, ರಾಜ್ಯದ ಆದಾಯದಲ್ಲೂ ಕುಸಿತವಾಗಿದೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಸರ್ಕಾರ ಕ್ರಮ ಕೈಗೊಂಡಿದೆ ಎಂದ ಅವರು, ಕಳೆದ 200 ದಿನಗಳ ಸರ್ಕಾರದ ಸಾಧನೆಯನ್ನು ಪಟ್ಟಿ ಮಾಡಿದರು.

ರೈತನ ಅಭಿವೃದ್ಧಿಗೆ ನೀರಾವರಿ ಅತ್ಯಗತ್ಯವಾಗಿದ್ದು, ಈ ವರ್ಷ ನೀರಾವರಿಗೆ 1500 ಕೋಟಿ ರೂಪಾಯಿ ಖರ್ಚು ಮಾಡಿದ್ದು, 25 ಸಾವಿರ ಎಕರೆ ಹೆಚ್ಚುವರಿ ಭೂಮಿಗೆ ನೀರೊದಗಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುಮೋದನೆ ನೀಡಲಾಗಿದೆ. ರಾಜ್ಯದ ವಿದ್ಯುತ್ ಕ್ಷಾಮ ನೀಗಿಸಲೂ ಕ್ರಮ ಕೈಗೊಳ್ಳಲಾಗಿದೆ ಎಂದರು.

ನುಡಿದಂತೆ ನಡೆಯುತ್ತಿರುವ ಸರ್ಕಾರ ಪ್ರತಿ ನೂರು ದಿನಗಳಿಗೊಮ್ಮೆ ಸರ್ಕಾರದ ಸಾಧನೆಯ ವರದಿಯನ್ನು ಜನತೆಯ ಮುಂದಿಡುತ್ತಿದೆ ಎಂದೂ ಹೇಳಿದರು. ಇಡೀ ಭಾರತದಲ್ಲಿಯೇ ಕರ್ನಾಟಕವನ್ನು ಮುಂಚೋಣಿಯ ರಾಜ್ಯವನ್ನಾಗಿ ಮಾಡಲು ಸರ್ಕಾರ ಕಟಿಬದ್ಧವಾಗಿದೆ ಎಂದೂ ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ