ಮುಖಪುಟ /ಸುದ್ದಿ ಸಮಾಚಾರ   
 

ಭಯೋತ್ಪಾದನೆ ವಿರುದ್ಧ ರಾಜ್ಯಾದ್ಯಂತ ಅಭಿಯಾನ: ಲಿಂಬಾವಳಿ

Aravinda Limbavaliಗುಲಬರ್ಗಾ, ಜ.೧೫(ಕ.ವಾ.): ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸಲು ಭಯೋತ್ಪಾದನೆ ಅಳಿಸಿ ದೇಶ ಉಳಿಸಿ-ಜಾಗೃತಿ ಅಭಿಯಾನವನ್ನು ರಾಜ್ಯಾದ್ಯಂತ ಪ್ರತ್ಯೇಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಗುಲಬರ್ಗಾದಲ್ಲಿ ಫೆಬ್ರವರಿ ೨ರಂದು ಜಿಲ್ಲೆಯ ಎಲ್ಲಾ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ಅಭಿಯಾನ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದರು.

ಭಯೋತ್ಪಾದನೆ ಅಳಿಸಿ ದೇಶ ಉಳಿಸಿ-ವಿದ್ಯಾರ್ಥಿ ಜಾಗೃತಿ ಅಭಿಯಾನದ ರಾಜ್ಯ ಸಮಿತಿಯ ಅಧ್ಯಕ್ಷರಾಗಿರುವ ಅವರು ಗುರುವಾರ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸಚಿವರು, ಬೀದರ್‌ನಲ್ಲಿ ಫೆಬ್ರವರಿ ೩, ರಾಯಚೂರಿನಲ್ಲಿ ಫೆಬ್ರವರಿ ೫ರಂದು ಬಳ್ಳಾರಿಯಲ್ಲಿ ಫೆಬ್ರವರಿ ೯ರಂದು ಹಾಗೂ ಕೊಪ್ಪಳದಲ್ಲಿ ಫೆಬ್ರವರಿ ೧೨ರಂದು ಜಾಗೃತಿ ಅಭಿಯಾನ ಆಚರಿಸಲು ಸಚಿವರು ದಿನಾಂಕ ನಿಗದಿಗೊಳಿಸಿದರು.

ಎಲ್ಲಾ ಧರ್ಮ, ಜಾತಿ ಬೇಧ ಭಾವಗಳನ್ನು ಮರೆತು ದೇಶ ಪ್ರೇಮದ ಭಾವನೆಯನ್ನು ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು. ಅಭಿಯಾನದ ಅಂಗವಾಗಿ ಕಾಲೇಜು ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ವಿಭಾಗ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಪ್ರಾದೇಶಿಕ ಆಯುಕ್ತರಾದ ರಜನೀಶ್ ಗೋಯಲ್, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಜಿ.ಮೂಲಿಮನಿ, ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಮುಖಪುಟ /ಸುದ್ದಿ ಸಮಾಚಾರ