ಮುಖಪುಟ /ಸುದ್ದಿ ಸಮಾಚಾರ   

ರಂಗಮಂದಿರಕ್ಕೆ ಎಸ್.ಎಂ.ಪಂಡಿತ್ ಹೆಸರು ಘೋಷಣೆ

ಗುಲಬರ್ಗಾ, ಜ.7:ಗುಲಬರ್ಗಾ ಜನತೆಯ ಬಹುದಿನ ನಿರೀಕ್ಷೆಯಾದ ಜಿಲ್ಲಾ ರಂಗಮಂದಿರವನ್ನು ಘನತೆವೆತ್ತ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಬುಧವಾರ ಲೋಕಾರ್ಪಣೆ ಮಾಡಿದರು. ರಂಗಮಂದಿರ ಉದ್ಘಾಟನೆಗೊಂಡ ಸಂಭ್ರಮದ ಗಳಿಗೆಯಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾ ರಂಗಮಂದಿರಕ್ಕೆ ಈ ಭಾಗದ ಅಂತರರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದ ದಿ. ಡಾ|| ಎಸ್.ಎಂ. ಪಂಡಿತ್ ಅವರ ಹೆಸರಿಟ್ಟಿರುವುದಾಗಿ ಘೋಷಿಸಿದರು. ಈ ಕುರಿತು ರಾಜ್ಯ ಸರ್ಕಾರ ಜನೆವರಿ ೬ ರಂದು ಅಧಿಕೃತ ಆದೇಶ ಹೊರಡಿಸಿದೆ ಎಂದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವನ್ನು ಹೊರತುಪಡಿಸಿ, ರಾಜ್ಯದಲ್ಲೇ ಅತ್ಯಾಧುನಿಕ ಹಾಗೂ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ಜಿಲ್ಲಾ ರಂಗಮಂದಿರಕ್ಕೆ ಡಾ|| ಪಂಡಿತ್ ಅವರು ಹೆಸರಿಡುವಂತೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರು, ಗುಲಬರ್ಗಾ ಜಿಲ್ಲೆಯ ಸಮಸ್ತ ಕಲಾವಿದರು, ಸಾಹಿತಿಗಳು, ನಾಗರಿಕರು, ಬುದ್ದಿ ಜೀವಿಗಳು, ಉದ್ದಿಮೆದಾರರು, ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಮಾಧ್ಯಮದವರು, ವಿಶ್ವಕರ್ಮ ಸಮುದಾಯದ ಬಾಂಧವರು ಮನವಿಮಾಡಿಕೊಂಡ ಹಿನ್ನಲೆಯಲ್ಲಿ ಈ  ಆದೇಶ ಹೊರಡಿಸಲಾಗಿದೆ.

ಡಾ|| ಪಂಡಿತ್ ಅವರ ಅಪೂರ್ವ ಕಲಾಕೃತಿಗಳನ್ನು ನೋಡಿ ಆನಂದಿಸಿದ ರಾಷ್ಟ್ರಪತಿಗಳು, ಕಲಾಕೃತಿಗಳು, ಮನೋಜ್ಞವಾಗಿವೆ. ಪಂಡಿತರ ಕಲೆ ಗುಲಬರ್ಗಾದ ಕಲಾವಿದರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ರಾಮೇಶ್ವರ ಠಾಕೂರ್, ಸಚಿವರಾದ ರೇವುನಾಯಕ್ ಬೆಳಮಗಿ, ಲಕ್ಷ್ಮಣ ಸವದಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

ಮುಖಪುಟ /ಸುದ್ದಿ ಸಮಾಚಾರ