ಮುಖಪುಟ /ಸುದ್ದಿ ಸಮಾಚಾರ   

ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹಿಳೆಯರ ಶಿಕ್ಷಣದ ಪಾತ್ರ ಮಹತ್ತರ

ಗುಲಬರ್ಗಾ, ಜ.7:ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹಿಳೆಯರ ಶಿಕ್ಷಣ ಮಹತ್ತರ ಪಾತ್ರ ವಹಿಸಲಿದ್ದು, ಮಹಿಳೆಯರು ಉದ್ಯೋಗ ಪಡೆಯುವಂತಹ ಶಿಕ್ಷಣ ನೀಡಬೇಕು. ಇದು  ಮಹಿಳಾ ಸಶಕ್ತೀಕರಣಕ್ಕೆ ಸಹಾಯಕವಾಗಲಿದೆ ಎಂದು ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಹೇಳಿದರು.

ಅವರು ಬುಧವಾರ ಗುಲಬರ್ಗಾದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಹಾಗೂ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಸುವರ್ಣ ಮಹೋತ್ಸವದ ವರ್ಷಾಚರಣೆ ಸಮಾರಂಭವನ್ನು ಉದ್ಘಾಟಿಸಿ ಯುವ ಜನಾಂಗ ದೇಶದ ನಾಳಿನ ಶಿಲ್ಪಿಗಳಾಗಿದ್ದು, ಯುವ ಭಾರತ ಪ್ರಜಾಪ್ರಭುತ್ವ ಚಾರಿತ್ರ್ಯವನ್ನು ರೂಪಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಯುಗ ಪ್ರಾರಂಭವಾಗಿರುವುದು ಹೊಸ ಆಸೆ ಮೂಡಿಸಿದೆ ಎಂದರು.

ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ವಿವಿಧ ವೃತ್ತಿಪರ ತರಬೇತಿ ಪದ್ಧತಿ ಹಾಗೂ ಕೌಶಲ್ಯಾಭಿವೃದ್ಧಿ ಕೋರ್ಸುಗಳನ್ನು ಪ್ರಾರಂಭಿಸಲು ಶೈಕ್ಷಣಿಕ ಸಂಸ್ಥೆಗಳು ಮುಂದೆ ಬರಬೇಕು. ಇಂದಿನ ಪರಿಸ್ಥಿತಿಯಲ್ಲಿ ಕೃಷಿಯೊಂದನ್ನೇ ಅವಲಂಬಿಸುವುದು ಸರಿಯಲ್ಲ. ಪಶುಸಂಗೋಪನೆ, ತೋಟಗಾರಿಕೆಯಂತಹ ವಿವಿಧ ಕೃಷಿ ಪೂರಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಸಬೇಕು. ಇದರಿಂದ ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿರುವವರ ಆರ್ಥಿಕ ಸ್ವಾವಲಂಬನೆಗೆ ಸಹಾಯವಾಗುವುದು ಎಂದರು.

ವಿದ್ಯಾರ್ಥಿಗಳು ದೇಶದ ಬೆಳವಣಿಗೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಸಂದೇಶವನ್ನು ಪ್ರಚುರಪಡಿಸಬೇಕಲ್ಲದೆ ವಿವಿಧತೆಯಲ್ಲಿ ಏಕತೆಯನ್ನು ಹಾಗೂ ದೇಶದ ಸಮಗ್ರತೆಯನ್ನು ಕಾಪಾಡಬೇಕೆಂದರು. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯು ಗುಲಬರ್ಗಾ ಜಿಲ್ಲೆ ಹಾಗೂ ಹೈದ್ರಾಬಾದ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಗಣನೀಯ ಸಮಾಜ ಸೇವೆ ಸಲ್ಲಿಸುತ್ತಿರುವುದನ್ನು ರಾಷ್ಟ್ರಪತಿಗಳು ಮುಕ್ತ ಕಂಠದಿಂದ ಹೊಗಳಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯಿಂದ ನಿರ್ಮಿಸಲು ಉದ್ದೇಶಿಸಿದ ಅನಿವಾಸಿ ಭಾರತೀಯ ಮಹಿಳೆಯರ ವಸತಿ ನಿಲಯದ ಶಿಲಾನ್ಯಾಸ ನೆರವೇರಿಸಿದರು.

ರಾಜ್ಯಪಾಲ ರಾಮೇಶ್ವರ ಠಾಕೂರ  ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯು ಕಳೆದ ೫೦ ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆದು ಆರೋಗ್ಯ ಮತ್ತು ಶಿಕ್ಷಣ ಸೇವೆ ಮಾಡುತ್ತಿರುವುದನ್ನು ಕೋಂಡಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ವಿಧಾನಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ. ಪಾಟೀಲ, ಕಾರ್ಯದರ್ಶಿ ಶರದ ಎಂ. ರಾಂಪೂರೆ, ಸಹ ಕಾರ್ಯದರ್ಶಿ ಶಿವಾನಂದ ಎ. ಮಾನಕರ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ಎಸ್. ಭೀಮಳ್ಳಿ ಸ್ವಾಗತಿಸಿದರು. ಸಮಾರಂಭದ ಅಂಗವಾಗಿ ಡಿ. ಕೆ. ಶಿವಕುಮಾರ, ಅನೀಲ್ ಕೊಹಲಿ, ಭಕ್ಷಿ ಅವರನ್ನು ಸನ್ಮಾನಿಸಲಾಯಿತು.

ಮುಖಪುಟ /ಸುದ್ದಿ ಸಮಾಚಾರ