ಮುಖಪುಟ /ಸುದ್ದಿ ಸಮಾಚಾರ   

ಬುದ್ಧನ ಅಹಿಂಸಾ ತತ್ವ ಗಾಂಧಿಗೆ ಪ್ರೇರಕವಾಗಿತ್ತು: ರಾಷ್ಟ್ರಪತಿ

ಗುಲಬರ್ಗಾ, ಜ.7: ಗೌತಮ ಬುದ್ಧನ ತತ್ವವನ್ನು ಅಳವಡಿಸಿಕೊಂಡ ಮೇಲೆ ಬುದ್ಧತ್ವ ಅಪಾರ ಪರಿಣಾಮ ಬೀರಿದೆ. ಸಾಮ್ರಾಟನಾಗಿದ್ದ ಬುದ್ಧ ಬೌದ್ಧಧರ್ಮವನ್ನು ಸ್ವೀಕರಿಸಿ ರಕ್ತಕ್ರಾಂತಿಯನ್ನು ತೊರೆದು ಅಹಿಂಸೆಯನ್ನು ರಾಜನೀತಿಯನ್ನಾಗಿ ಮಾಡಿದರು. ನಂತರ ಮಹಾತ್ವಾ ಗಾಂಧೀಜಿಯವರು ಅಹಿಂಸೆಯನ್ನು ಸ್ವಾತಂತ್ರ್ಯ ಸಂಗ್ರಾಮದ ಸಾಧನವಾಗಿ ಬಳಸಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದು ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಹೇಳಿದರು.

ವಿರೋಧ ಪಕ್ಷದ ನಾಯಕ ಹಾಗೂ ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪರಿಶ್ರಮದ ಫಲವಾಗಿ ಗುಲಬರ್ಗಾ ಹೊರವಲಯದ ಕುಸನೂರಿನ ಸಮೀಪ ನಿರ್ಮಿಸಿರುವ ಬುದ್ಧವಿಹಾರವನ್ನು ಬುಧವಾರ ಉದ್ಘಾಟಿಸಿ ರಾಷ್ಟ್ರಪತಿಗಳು ಮಾತನಾಡಿದರು.

ಸಂಘದ ಮಹತ್ವವನ್ನು ಬುದ್ಧ ಸಾರಿದನು. ಬೌದ್ಧಧರ್ಮದ ತ್ರಿರತ್ನಗಳಲ್ಲಿ ಸಂಘವು ಒಂದಾಗಿದೆ. ಸಂಘ ಎಂದರೆ ನಮ್ಮೊಡನಿರುವವರ ಕಲ್ಯಾಣ ಎಂದು. ಇಂದು ಮಾನವರೆಲ್ಲಾ ಎಂದೇ, ಇಡೀ ವಿಶ್ವವೇ ಒಂದು ಸಾಮಾನ್ಯ ಮನೆ ಎಂಬ ಭಾವದಿಂದ ನೋಡಬೇಕಾಗಿದೆ. ಎಲ್ಲಾ ಮನುಷ್ಯರನ್ನು ಭೂಗ್ರಹವನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.

ಬೌದ್ಧಧರ್ಮದ ಗಟ್ಟಿ ನೆಲೆ ಇರುವ ಶ್ರೀಮಂತ ಇತಿಹಾಸ ಇರುವ ಗುಲಬರ್ಗಾಕ್ಕೆ ಆಗಮಿಸಿರುವುದು ತಮಗೆ ಸಂತೋಷವಾಗಿದೆ. ಗುಲಬರ್ಗಾ ಜಿಲ್ಲೆಯ ಭೀಮಾ ನದಿಯ ತಟದಲ್ಲಿರುವ ಸನ್ನತಿಯು ಬೌದ್ಧಧರ್ಮದ ಪ್ರಖ್ಯಾತ ಧಾರ್ಮಿಕ ಹಾಗೂ ಕಲಿಕಾ ಕೇಂದ್ರವಾಗಿತ್ತು. ಪ್ರಾಚ್ಯವಸ್ತು ಸಂಗ್ರಹಾಲಯದ ಅಧಿಕಾರಿಗಳು ಬುದ್ಧನ ಪ್ರತಿಮೆ, ಬೌದ್ಧಧರ್ಮದ ಶಾಸನಗಳು, ಹಾಗೂ ಅಶೋಕ ಹಾಗೂ ಶಾತವಾಹನರ ಕಾಲದ ಕುರುಹುಗಳನ್ನು ಪತ್ತೆ ಹಚ್ಚಿದ್ದಾರೆ. ಇಂಥ ಐತಿಹಾಸಿಕ ಪ್ರಾಮುಖ್ಯತೆ ಇರುವ ಗುಲಬರ್ಗಾದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಿರುವ ಬುದ್ಧವಿಹಾರವನ್ನು ಲೋಕಾರ್ಪಣೆ ಮಾಡಲು ತಮಗೆ ಅತೀವ ಆನಂದವಾಗಿದೆ ಎಂದರು ಅವರು ತಿಳಿಸಿದರು.

ಬುದ್ಧನ ಸಂದೇಶವು ಪ್ರಸ್ತುತವಾಗಿದ್ದು, ಅದು ತುಂಬಾ ವ್ಯಾಪಕವಾಗಿ ಹರಡಿ, ಅಪಾರ ಸಂಖ್ಯೆಯ ಅನುಯಾಯಿಗಳನ್ನು ಆಕರ್ಷಿಸಿದೆ. ಸಾಮ್ರಾಟ ಅಶೋಕನ ಮಕ್ಕಳಾದ ಮಹಿಂದ್ರ ಮತ್ತು ಸಂಗಮಿತ್ರೆ ಅವರು ಗುಲಬರ್ಗಾ ಪ್ರಾಂತ್ಯದಿಂದ ಶ್ರೀಲಂಕಾಗೆ ಬೌದ್ಧಧರ್ಮವನ್ನು ಪ್ರಚಾರ ಮಾಡಲು ತೆರಳಿದರು ಎಂಬ ನಂಬಿಕೆ ಇದೆ. ವಿಶ್ವಾದ್ಯಂತ ಬೃಹತ್ ಸಂಖ್ಯೆ ಅನುಯಾಯಿಗಳಿದ್ದಾರೆ ಎಂದರು.

ತಾವು ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾಗ  ೬ನೇ ಶತಮಾನದಲ್ಲಿ ನಿರ್ಮಿಸಲಾದ ಟ್ರಾನ್ ಕ್ವೋಕ್ ಎಂದು ಕರೆಯಲ್ಪಡುವ ಹಳೆಯ ಪಗೋಡಾಗೆ ಭೇಟಿ ನೀಡಿದ್ದೆ, ಅಲ್ಲಿ ೧೯೫೮ರಲ್ಲಿ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಭಾರತದಿಂದ ತಂದಿದ್ದ ಬೋಧಿವೃಕ್ಷವನ್ನು ನೆಟ್ಟಿದ್ದಾರೆ ಎಂದು ಘನತೆವೆತ್ತ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲರು ಸ್ಮರಿಸಿಕೊಂಡರು.

ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಬುದ್ಧವಿಹಾರದ ಮೂಲಸೌಕರ್ಯ ಅಭಿವೃದ್ಧಿಗೆ ತಮ್ಮ ಸರ್ಕಾರ ೬-೭ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ತ್ವರಿತವಾಗಿ ಕಾಮಗಾರಿಯನ್ನು ಕೈಗೊಂಡಿದೆ. ಈ ಸ್ಥಳಕ್ಕೆ ವಿಶೇಷ ಮಹತ್ವವಿದ್ದು, ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕ ಇದಾಗಿದೆ. ಸನ್ನತಿಯಲ್ಲಿ ಬೌದ್ಧಧರ್ಮವು ಅರಳುತ್ತಿದೆ. ಈ ಕ್ಷೇತ್ರವನ್ನು ಐತಿಹಾಸಿಕ ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ಸರ್ಕಾರ ಅಭಿವೃದ್ಧಿಪಡಿಸಲಿದೆ ಎಂದು ಹೇಳಿದರು. ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ ಕುಳಿತಿರುವ ಬುದ್ಧನ ವಿಗ್ರಹವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಲಿದ್ದು, ಬುದ್ಧವಿಹಾರವು ಡಾ|| ಅಂಬೇಡ್ಕರ್ ಅವರ ನೆನಪು ತರುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ೧೯೫೬ರ ಅಕ್ಟೋಬರ್ ೧೪ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮದ ದೀಕ್ಷೆಯನ್ನು ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಸ್ವೀಕರಿಸುವ ಮೂಲಕ ಈ ರಾಷ್ಟ್ರದ ದಲಿತರ ಜೀವನದಲ್ಲಿ ಒಂದು ಶಾಂತಿಯುತ  ಕ್ರಾಂತಿಕಾರಕ ಪುಟವನ್ನು ತೆರೆದರು. ಇಂದು ಈ ಬೌದ್ಧ ವಿಹಾರದ ಉದ್ಘಾಟನೆ ಮೂಲಕ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಮ್ಮ ಸ್ವಾಭಿಮಾನ, ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವದ ಸಂಕೇತವಾಗಿ ಭಗವಾನ್ ಬುದ್ಧನ ಅನಂತ ಪ್ರೀತಿ, ಕರುಣೆ ಹಾಗೂ ಜ್ಞಾನದ ಬೆಳಕಿನತ್ತ ಒಂದು ದಿಟ್ಟ ಹೆಜ್ಜೆಯನ್ನು ಇಡುತ್ತಿದ್ದೇವೆ ಎಂದು ಹೇಳಿದರು.

ಸಮಾರಂಭದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ರಾಮೇಶ್ವರ ಠಾಕೂರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮಾತನಾಡಿದರು. ಸಚಿವರಾದ ಲಕ್ಷ್ಮಣ ಸವದಿ, ರೇವುನಾಯಕ್ ಬೆಳಮಗಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯ ಸಭಾ ಸದಸ್ಯ ಕೆ.ಬಿ.ಶಾಣಪ್ಪ ಮತ್ತಿತರು ಉಪಸ್ಥಿತರಿದ್ದರು. ಲೋಕಸಭಾ ಸದಸ್ಯ ಇಕ್ಬಾಲ್ ಅಹಮದ್ ಸರಡಗಿ ವಂದಿಸಿದರು.

ಮುಖಪುಟ /ಸುದ್ದಿ ಸಮಾಚಾರ