ಮುಖಪುಟ /ಸುದ್ದಿ ಸಮಾಚಾರ   

ವೈಕುಂಠ ಏಕಾದಶಿ: ವಿಷ್ಣು ದೇವಾಲಯಗಳಲ್ಲಿ ಭಕ್ತರ ಮಹಾಪೂರ

ವೆಂಕಟೇಶ್ವರ, ವೈಕುಂಠ ಏಕಾದಶಿ, Lord Venkateshwara, ekadashiಬೆಂಗಳೂರು, ಜ.7: ಇಂದು ವೈಕುಂಠ ಏಕಾದಶಿ, ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಏಕಾದಶಿ ಆಚರಣೆ ನಡೆದಿದೆ. ವಿಷ್ಣುಭಕ್ತರಿಗೆ ವೈಕುಂಠ ಏಕಾದಶಿ ಅತ್ಯಂತ ಪವಿತ್ರವಾದ ದಿನ. ಹೀಗಾಗೇ ಎಲ್ಲ ನಾರಾಯಣ ದೇವಾಲಯಗಳ ಮುಂದೆ ಭಕ್ತರ ಸಾಲು ಸಾಮಾನ್ಯ ದೃಶ್ಯವಾಗಿದೆ.

ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬಂದರೆ, ಉತ್ತರೋತ್ತರ ಅಭಿವೃದ್ಧಿಯಾಗುವುದಲ್ಲದೆ, ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಎಂಬುದು ಹಿರಿಯರ ನಂಬಿಕೆ.

ಮಾರ್ಗಶಿರ ಶುಕ್ಲ ಏಕಾದಶಿ ವೈಕುಂಠ ಏಕಾದಶಿ ಎಂದೇ ಖ್ಯಾತವಾಗಿದೆ. ಅಂದು ನಾಡಿನಾದ್ಯಂತ ಸಂಭ್ರಮ, ಸಡಗರ. ಮಾಗಿಯ ಚಳಿಯನ್ನೂ ಲೆಕ್ಕಿಸದೆ, ಭಕ್ತಕೋಟಿ, ಗಢಗಢ ನಡುಗುವ ಚಳಿಯಲ್ಲಿ ನಸುಕಿನಲ್ಲೇ ಎದ್ದು ಸ್ನಾನ ಮಾಡಿ, ಮಡಿವಸ್ತ್ರ ತೊಟ್ಟು, ವೆಂಕಟರಮಣಸ್ವಾಮಿಯ ದರ್ಶನ ಮಾಡಿ, ಕೃತಾರ್ಥರಾಗುವ ಸಲುವಾಗಿ ದೇವಾಲಯಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ.

ಹೈಟೆಕ್ ಸಿಟಿ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ರುವ ಎಲ್ಲ ವೈಷ್ಣವ ದೇವಾಲಯಗಳಲ್ಲೂ ಅಂದು ವಿಶೇಷ ದರ್ಶನ ಏರ್ಪಡಿಸಲಾಗುತ್ತದೆ. ವೈಕುಂಠ ಏಕಾದಶಿಯ ಅಂಗವಾಗಿ ಈಗಾಗಲೇ ನಗರದಲ್ಲಿರುವ ಬಹುತೇಕ ಎಲ್ಲ ಶ್ರೀರಾಮ, ಶ್ರೀಮನ್ನಾರಾಯಣ, ವೆಂಕಟೇಶ್ವರ, ಕೃಷ್ಣ ದೇವಾಲಯಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗಿದೆ. ವೈಕುಂಠ ಏಕಾದಶಿ ಸಮಿತಿಗಳು ಆಯಾ ದೇವಾಲಯದ ವಿಶೇಷ ಸೇವಾಕರ್ತರಿಗೆ, ಗಣ್ಯರಿಗೆ ಹಾಗೂ ಸದಸ್ಯರಿಗಾಗಿ ವಿಶೇಷ ದರ್ಶನದ ಪಾಸ್‌ಗಳನ್ನೂ ನೀಡಿವೆ.

ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸದೇವರ ದರ್ಶನ ಮಾಡಿ, ದೇವಾಲಯದಲ್ಲಿ ಇರುವ ಶ್ರೀನಿವಾಸ ಉತ್ಸವ ಮೂರ್ತಿಯ ತೊಟ್ಟಿಲಿ ಗೆ (ಜೋಕಾಲಿ)ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಎಂಬುದು ಭಕ್ತಕೋಟಿಯ ನಂಬಿಕೆ.

ಏಕಾದಶಿ ಪ್ರಯುಕ್ತ ಎಲ್ಲ ದೇವಾಲಯಗಳೂ ಹೂವಿನ ಅಲಂಕಾರ. ಸ್ವಾಗತ ಕಮಾನು ಮತ್ತು ವಿದ್ಯುತ್‌ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಮುಖಪುಟ /ಸುದ್ದಿ ಸಮಾಚಾರ