ಮುಖಪುಟ /ಸುದ್ದಿ ಸಮಾಚಾರ   

ಬೆಂಗಳೂರಿನಲ್ಲಿ ಎನ್‌ಎಸ್‌ಜಿ ಘಟಕ: ಸಿ.ಎಂ. ಒತ್ತಾಯ

ಬೆಂಗಳೂರು, ಜ. ೬ : ಮಾಹಿತಿ ತಂತ್ರಜ್ಞಾನದ ತವರಾದ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕಂಪನಿಗಳಿಗೆ ಭಯೋತ್ಪಾದಕರ ದಾಳಿ ಭೀತಿ ಇರುವ ಹಿನ್ನೆಲೆಯಲ್ಲಿ ಎನ್‌ಎಸ್‌ಜಿ ಘಟಕವೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು ಈಗ ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದು, ಮೂರು ವರ್ಷಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆ ನಡೆದ ದಾಳಿ ಹಾಗೂ ೨೦೦೮ರ ಜುಲೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಇದಕ್ಕೆ ಪುಷ್ಟಿ ನೀಡಿದೆ. ಇದಲ್ಲದೆ ಹಲವಾರು ಪ್ರತಿಷ್ಠಿತ ಐಟಿ ಬಿಟಿ ಕಂಪೆನಿಗಳು ಬೆಂಗಳೂರಿನಲ್ಲಿಯೇ ನೆಲೆಗೊಂಡಿರುವುದರಿಂದ ನಗರಕ್ಕೆ ಹೆಚ್ಚಿನ ಭದ್ರತೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರವು ಎನ್‌ಎಸ್‌ಜಿ ಘಟಕಗಳನ್ನು ಮುಂಬಯಿ, ಕೋಲ್ಕತಾ, ಚೆನ್ನೈ ಹಾಗೂ ಹೈದರಾಬಾದ್‌ಗಳಲ್ಲಿ ಸ್ಥಾಪಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಈ ಪಟ್ಟಿಯಲ್ಲಿ ಬೆಂಗಳೂರು ಇಲ್ಲದಿರುವುದು ದುರದೃಷ್ಟಕರ ಎಂದು ಅವರು ತಿಳಿಸಿದರು. ಆದ್ದರಿಂದ ಬೆಂಗಳೂರಿನ ಅನಿವಾರ್ಯತೆಯನ್ನು ಮನಗಂಡು ಎನ್‌ಎಸ್‌ಜಿ ಘಟಕವನ್ನು ನಗರದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಿಗೆ ಮನವಿ ಮಾಡಿದರು. 

ಮುಖಪುಟ /ಸುದ್ದಿ ಸಮಾಚಾರ