ಮುಖಪುಟ /ಸುದ್ದಿ ಸಮಾಚಾರ   

ಶಾಸ್ತ್ರೀಯ ಸ್ಥಾನಮಾನದ ಸೌಲಭ್ಯ ಒದಗಿಸಲು ಪ್ರಧಾನಿಗೆ ಮನವಿ

ಬೆಂಗಳೂರು, ಜ. ೬ : ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕನ್ನಡ ಭಾಷೆಯ ಅಭ್ಯುದಯಕ್ಕಾಗಿ ನೀಡಬೇಕಾದ ಸೌಲಭ್ಯಗಳನ್ನು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.

ಅಕ್ಟೋಬರ್ ೩೧, ೨೦೦೮ರಂದು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಕುರಿತು ಅಧಿಸೂಚನೆ ಹೊರಡಿಸಿರುವುದನ್ನು ಹೊರತುಪಡಿಸಿದರೆ ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಯಾವುದೇ ಅನುಕೂಲಗಳೂ ಕನ್ನಡ ಭಾಷೆಗೆ ಲಭಿಸಿಲ್ಲ. ವಾಸ್ತವವಾಗಿ ಶಾಸ್ತ್ರೀಯ ಭಾಷೆಯ ಶ್ರೇಷ್ಠ ವಿದ್ವಾಂಸರಿಗೆ ಎರಡು ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿ ನೀಡುವುದು, ಕನ್ನಡ ಭಾಷಾ ಅಧ್ಯಯನ ಕೇಂದ್ರ ಸ್ಥಾಪನೆ ಹಾಗೂ ಯುಜಿಸಿಯಿಂದ ಕೆಲವು ವಿಶ್ವವಿದ್ಯಾಲಯಗಳಲ್ಲಾದರೂ ಕನ್ನಡ ವಿದ್ವಾಂಸರನ್ನೊಳಗೊಂಡ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ ಕೋರುವುದೂ  ಸೇರಿದಂತೆ ಯಾವುದೇ ಕ್ರಮಗಳನ್ನೂ ಸಂಸ್ಕೃತಿ ಸಚಿವಾಲಯ ಈ ವರೆಗೆ ಕೈಗೊಂಡಿಲ್ಲ ಎಂದು ಗಮನ ಸೆಳೆದಿರುವ ಮುಖ್ಯಮಂತ್ರಿ ಈ ಎಲ್ಲಾ ವಿಷಯಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಪ್ರಧಾನಿಯವರನ್ನು ಕೋರಿದ್ದಾರೆ.

ಈ ಬಗ್ಗೆ ಸಂಸ್ಕೃತಿ ಸಚಿವೆ ಶ್ರೀಮತಿ ಅಂಬಿಕಾ ಸೋನಿ ಅವರಿಗೂ ಮುಖ್ಯಮಂತ್ರಿಯವರು ಮನವಿ ಸಲ್ಲಿಸಿದ್ದಾರೆ. 

ಮುಖಪುಟ /ಸುದ್ದಿ ಸಮಾಚಾರ