ಮುಖಪುಟ /ಸುದ್ದಿ ಸಮಾಚಾರ   

೪ ವರ್ಷದಲ್ಲಿ ರಾಜ್ಯ ಅಭಿವೃದ್ಧಿ: ಡಾ: ಬಿ.ಎಸ್. ಯಡಿಯೂರಪ್ಪ

Chief Minister of Karnataka, B.S.Yedeyurappaಮಂಡ್ಯ, ಜ. ೦೪: ಕಳೆದ ಅರವತ್ತು ವರ್ಷಗಳಲ್ಲಿ ನಡೆಯದ ಅಭಿವೃದ್ಧಿ ಕಾರ್ಯಗಳು ಕೇವಲ ಆರೇ ತಿಂಗಳಲ್ಲಿ ನಡೆಯಬೇಕೆಂಬ ನಿರೀಕ್ಷೆ ಬೇಡ. ನಾನು ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಯೆಡೆ ಗಮನ ಹರಿಸಿದ್ದು , ಉಳಿದ ನಾಲ್ಕುವರೆ ವರ್ಷಗಳಲ್ಲಿ ಎಲ್ಲರೂ ಒಪ್ಪುವ ಅಭಿವೃದ್ಧಿ ಪಥಕ್ಕೆ ರಾಜ್ಯವನ್ನು ಕೊಂಡೊಯ್ದೇ ತೀರುವೆ ಎಂದು ರಾಜ್ಯದ ಮುಖ್ಯಮಂತ್ರಿ ಡಾ: ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

ಅವರು ಜನವರಿ ೩ರಂದು ಶ್ರೀರಂಗಪಟ್ಟಣದಲ್ಲಿ ಶಾಶ್ವತಿ ಧಾರ್ಮಿಕ ಸಂಸ್ಥೆಯು ನಿರ್ಮಿಸಿರುವ ಸಂಸ್ಕೃತ ಭವನ, ನಿತ್ಯ ದಾಸೋಹ ಭವನ ಮಂಟಪ ಹಾಗೂ ಧ್ಯಾನ ಮಂದಿರಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಅನ್ನ ದಾಸೋಹವು ದೇಶದ ಅಭಿವೃದ್ಧಿಯ ಸಂಕೇತ. ಧ್ಯಾನ ಹಾಗೂ ಮೌನ ದು:ಖವನ್ನು ಮೀರಿ ಮಾನವನನ್ನು ಶಾಂತಿಯೆಡೆಗೆ ಕೊಂಡೊಯ್ಯುವ ಸಾಧನ. ಈ ಕಾರ್ಯದಲ್ಲಿ ತೊಡಗುವ ಯಾರೇ ಆದರೂ ಅಭಿನಂದನಾರ್ಹರು. ಇಡೀ ವಿಶ್ವ ಇಂದು ಶಾಂತಿ ಹಾಗೂ ಜ್ಞಾನಕ್ಕಾಗಿ ಭಾರತದೆಡೆ ನೋಡುತ್ತಿದೆ. ಜಗತ್ತಿನ ಯಾವುದೇ ಮುಂದುವರೆದ ರಾಷ್ಟ್ರಗಳಲ್ಲಿ ಅಭಿವೃದ್ಧಿಯ ಶಕ್ತಿಯಾಗಿ ಭಾರತೀಯರೇ ಇದ್ದಾರೆ ಎಂದು ಹೇಳಿ ಉದಾಹರಣೆ ಸಹಿತ ವಿವರಿಸಿದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಸಂಸ್ಕೃತವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತ್ಯೇಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಶೃಂಗೇರಿ ಕೊಪ್ಪದ ಶ್ರೀ ಬಾಲಗೋಪಾಲ ಜೋಯಿಸ್ ಉಪಸ್ಥಿತರಿದ್ದು , ಸಮಾರಂಭದ ಅಧ್ಯಕ್ಷತೆಯನ್ನು ಶ್ರೀರಂಗಪಟ್ಟಣದ ಶಾಸಕ ಶ್ರೀ ರಮೇಶ್‌ಬಾಬು ಬಂಡಿಸಿದ್ದೇಗೌಡ ವಹಿಸಿದ್ದರು. ದುರ್ದಂಡೇಶ್ವರ ಮಠಾಧ್ಯಕ್ಷ ಶ್ರೀ ತ್ರಿನೇತ್ರ ಮಹಾಂತ ಶಿವಯೋಗ ಸ್ವಾಮಿಗಳು ಸಾನಿಧ್ಯ ವಹಿಸಿದ್ದು , ಜಿಲ್ಲಾ ಉಸ್ತುವಾರಿ ಸಚಿವರಾದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ರಾಮಚಂದ್ರಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶ್ರೀ ಪಿ.ಎಂ. ನರೇಂದ್ರಸ್ವಾಮಿ, ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ತಗ್ಗಳ್ಳಿ ವೆಂಕಟೇಶ್, ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಶ್ರೀ ಜಿ.ಟಿ. ದೇವೇಗೌಡ, ಶಾಸಕ ಶ್ರೀ ಶಂಕರಲಿಂಗೇಗೌಡ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮುಖಪುಟ /ಸುದ್ದಿ ಸಮಾಚಾರ