ಮುಖಪುಟ /ಸುದ್ದಿ ಸಮಾಚಾರ   

ಕಿಸೆ ಪಂಚಾಂಗ ಮುದ್ರಿಸಿ ಹಂಚುತ್ತಿರುವ ಕನ್ನಡಪ್ರೇಮಿ

Rasu dinadarshikeದಿನದರ್ಶಿಕೆ ಅರ್ಥಾತ್ ಕ್ಯಾಲೆಂಡರ್‌ಗಳು ನಾಗರಿಕ ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆಧುನಿಕ ಯುಗದಲ್ಲೂ ಕ್ಯಾಲೆಂಡರ್‌ಗಳು ಅನಿವಾರ್ಯ ಅಗತ್ಯಗಳಲ್ಲಿ ಒಂದಾಗಿವೆ. ಅಂತೆಯೇ ಅತ್ಯಾಧುನಿಕ ಮೊಬೈಲ್, ಆರ್ಗನೈಸರ್ಸ್, ಕಂಪ್ಯೂಟರ್ ಯುಗದಲ್ಲೂ ಪಾಕೆಟ್ ಕ್ಯಾಲೆಂಡರ್‌ಗಳು ಇನ್ನೂ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ.

ವರ್ಷಾರಂಭದಲ್ಲಿ ಡೈರಿ, ಕ್ಯಾಲೆಂಡರ್, ಪಾಕೆಟ್ ಕ್ಯಾಲೆಂಡರ್ ಉಡುಗೊರೆ ಕೊಡುವುದು ಸರ್ವೇ ಸಾಮಾನ್ಯ. ಚಿಕ್ಕ ಪುಟ್ಟ ಅಂಗಡಿಯವರು ಕೂಡ ಪಾಕೆಟ್ ಕ್ಯಾಲೆಂಡರ್ ಮಾಡಿಸಿ ತಮ್ಮ ಗ್ರಾಹಕರಿಗೆ ಉಡುಗೊರೆಯಾಗಿ ನೀಡಿ, ಅವರ ವಿಶ್ವಾಸ ಹೆಚ್ಚಿಸಿಕೊಳ್ಳುತ್ತಾರೆ. ಇದು ವ್ಯಾಪಾರದ ಗುಟ್ಟೂ ಹೌದು. ಆದರೆ, ಸರ್ಕಾರಿ ನೌಕರರೊಬ್ಬರು ಯಾವುದೇ ಫಲಾಪೇಕ್ಷೆ ಇಲ್ಲದೆ, ಕನ್ನಡ ನಾಡು, ನುಡಿ, ಜಲ, ಸಾಹಿತ್ಯ, ಸಂಗೀತಕ್ಕೆ ಸಂಬಂಸಿದ ಚಿತ್ರಗಳಿರುವ ಪಾಕೆಟ್ ಕ್ಯಾಲೆಂಡರ್ ಮುದ್ರಿಸಿ ಹಂಚುತ್ತಾರೆಂದರೆ ನೀವು ನಂಬುತ್ತೀರಾ. ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ ಹಿರಿಯ ತಂತ್ರಜ್ಞರಾಗಿರುವ ರಾ.ಸು.ವೆಂಕಟೇಶ್ ಕಳೆದ ೭ ವರ್ಷದಿಂದ ಸ್ವಂತ ಖರ್ಚಿನಲ್ಲಿ ಪುಟ್ಟ ಕಿಸೆ ಪಂಚಾಂಗ ಮುದ್ರಿಸಿ ಹಂಚುತ್ತಿರುವ ಕನ್ನಡಪ್ರೇಮಿ.

ಈ ಹಿಂದಿನ ೭ ವರ್ಷಗಳಲ್ಲಿ ಕವಿವರೇಣ್ಯರಾದ ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ, ಹರಿಹರ, ಮುದ್ದಣ, ಬಸವಣ್ಣ, ಶಿಶುನಾಳ ಷರೀಫ, ಅಲ್ಲಮಪ್ರಭು, ಅತ್ತಿಮಬ್ಬೆ, ಸರ್ವಜ್ಞ, ಕನಕದಾಸ, ಅತ್ತಿಮಬ್ಬೆ, ಪಂಜೆ ಮಂಗೇಶರಾಯರು, ಗೋವಿಂದಪೈ, ಬೇಂದ್ರೆ, ಕುವೆಂಪು, ಮಾಸ್ತಿ, ಶಿವರಾಮ ಕಾರಂತ್, ಕಾರ್ನಾಡ್  ಮೊದಲಾದ ಸಾಹಿತ್ಯ ಶ್ರೇಷ್ಠರ ಮುಖಪುಟವಿರುವ ಪಾಕೆಟ್ ಕ್ಯಾಲೆಂಡರ್ ಮಾಡಿಸಿ ಕನ್ನಡ ಪ್ರೇಮಿಗಳಿಗೆ ಉಚಿತವಾಗಿ ವಿತರಿಸಿರುವ ರಾ.ಸು. ಅವರುಕರುನಾಡ ಜಲಧಾರೆಗಳು, ಕನ್ನಡ ನಾಡಿನ ಕಾನನದಲ್ಲಿರುವ ವನ್ಯಜೀವಿನಗಳು, ಕರ್ನಾಟಕದ ಐತಿಹಾಸಿಕ ಸ್ಮಾರಕಗಳು ಹೀಗೆ ಪ್ರತಿವರ್ಷ ಒಂದೊಂದು ಶೀರ್ಷಿಕೆಯಡಿ ಕಿಸೆ ಪಂಚಾಂಗ ಹೊರತರುತ್ತಿದ್ದಾರೆ.

ಈ ಬಾರಿ ೨೦೦೯ನ್ನು ಅವರು ಕನ್ನಡ ನಾಡಿನ ಗಾನ ಗಂಧರ್ವರಿಗೆ ಮುಡಿಪಾಗಿಟ್ಟಿದ್ದಾರೆ. ಇದಕ್ಕೆ ಕಾರಣವೂ ಇದೆ. ಕನ್ನಡ ನಾಡಿನ ಸಂಗೀತ ಶ್ರೇಷ್ಠ ಪಂಡಿತ್ ಭೀಮಸೇನ್ ಜೋಶಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಸಂದಾಯವಾಗಿರುವ ಶುಭ ಸಂದರ್ಭದಲ್ಲಿ ಅವರು ಭೀಮಸೇನ ಜೋಷಿ ಅವರ ಚಿತ್ರವಿರುವ ಪಾಕೆಟ್ ಕ್ಯಾಲೆಂಡರ್ ತಂದಿದ್ದಾರೆ.

ಜೋಶಿ ಅವರ ಸುತ್ತಲೂ ವತೃಲಾಕಾರದಲ್ಲಿ ಪಿಟೀಲ್ ಚೌಡಯ್ಯ, ಗಂಗೂಬಾಯಿ ಹಾನಗಲ್, ಆರ್.ಕೆ.ಶ್ರೀಕಂಠನ್, ಪಂಚಾಕ್ಷರಿ ಗವಾಯಿ, ಜಯಚಾಮರಾಜೇಂದ್ರ ಒಡೆಯರ್, ಬಸವರಾಜ ರಾಜಗುರು ಅವರ ವರ್ಣ ಚಿತ್ರಗಳನ್ನು ಮುದ್ರಿಸಿದ್ದಾರೆ. ಪಂಚಾಂಗದ ಹಿಂಬದಿಯಲ್ಲಿ ಆರ್.ಕೆ. ಸೂರ್ಯನಾರಾಯಣ, ಮೈ.ವಿ.ರಾಮರತ್ನಂ, ಕದ್ರಿ ಗೋಪಾಲನಾಥ್, ಮಲ್ಲಿಕಾರ್ಜುನ ಮನ್ಸೂರ್, ಕುಮಾರ್ ಗಂಧರ್ವ, ದೊರೆಸ್ವಾಮಿ ಅಯ್ಯಂಗಾರ್ ಹಾಗೂ ವೀಣೆ ಶೇಷಣ್ಣನವರ ಚಿತ್ರಗಳನ್ನು ಮುದ್ರಿಸಿದ್ದಾರೆ.

ಈ ಕಿಸೆ ಪಂಚಾಂಗದಲ್ಲಿ  ಗೌರಿ ಪಂಚಾಂಗ, ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಕೇಂದ್ರ ಹಾಗೂ ರಾಜ್ಯ ಸರಕಾರದ ರಜಾ ದಿನಗಳ ಪಟ್ಟಿ, ಹನ್ನೆರಡೂ ತಿಂಗಳ ಕ್ಯಾಲೆಂಡರ್ ಎಲ್ಲವೂ ಇದೆ. ರಾಸು ಪ್ರತಿವರ್ಷ ಇಂಥ ವಿಶೇಷತೆಯ ಒಂದು ಸಾವಿರ ಪ್ರತಿ ಮುದ್ರಿಸಿ ತಮ್ಮೆಲ್ಲಾ ಕನ್ನಡ ಗೆಳೆಯರಿಗೆ ಹೊಸವರ್ಷದ ಶುಭಾಶಯಗಳೊಂದಿಗೆ ಉಚಿತವಾಗೇ ನೀಡುತ್ತಾ ಬಂದಿದ್ದಾರೆ.  

ಮುಖಪುಟ /ಸುದ್ದಿ ಸಮಾಚಾರ