ಮುಖಪುಟ /ಸುದ್ದಿ ಸಮಾಚಾರ 

ವಿಶ್ವಕಪ್ ನಲ್ಲಿ ಮೈ ಕೊಡವಿ ಎದ್ದ ಭಾರತ

ಪಾಕ್, ದ.ಆಫ್ರಿಕಾ ವಿರುದ್ಧ ಜಯಭೇರಿ ಬಾರಿಸಿದ ಧೋನಿ ಪಡೆ

Virat ಬೆಂಗಳೂರು, ಫೆ.24:  ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ಕಾಂಗರೂಗಳ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿ ಹಾಗೂ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಮತ್ತು ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧದ ತ್ರಿಕೋಣ ಕ್ರಿಕೆಟ್ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ ಈಗ ಮೈಕೊಡವಿ ಎದ್ದಿದೆ. ಹಾಲಿ ಚಾಂಪಿಯನ್ ಭಾರತ ತಂಡ ವಿಶ್ವ ಚಾಂಪಿಯನ್ನರಿಗೆ ತಕ್ಕಂತೆ ಆಡುತ್ತಿದ್ದು ಈ ಬಾರಿಯೂ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.
ಅಭ್ಯಾಸ ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಭಾರತ ಕ್ರಿಕೆಟ್ ತಂಡದ ಆಟಗಾರರ ಫೋಟೋ ಕೆಳಗೆ, ಗೊಬ್ಬರ ಹೊರಲು ನಿಮಗೆ ಜನ ಬೇಕೆ ನಮ್ಮನ್ನು ಸಂಪರ್ಕಿಸಿ ಎಂಬ ಶೀರ್ಷಿಕೆ ಹಾಕಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ಜನ ತಮ್ಮ ಸಿಟ್ಟು ಹೊರಹಾಕಿದ್ದರು. ಜನರಿಗೆ ಗುರುತು ಸಿಗದಂತೆ ಸೆಲ್ವಾರ್ ಕಮೀಸ್ ಹಾಕಿಕೊಂಡು, ಬಳೆ ತೊಟ್ಟು ಮುಖವನ್ನು ವೇಲ್‌ನಿಂದ ಮುಚ್ಚಿಕೊಂಡ ಧೋನಿ, ಕೋಹ್ಲಿ ಹೆಣ್ಣಿನ ವೇಷದಲ್ಲಿ ತರಕಾರಿ ತರಲು ಮಾರುಕಟ್ಟೆಗೆ ಹೋದ ಜೋಕ್‌ಗಳು ಹರಿದಾಡಿದ್ದವು. ಈ ಬಾರಿ ಟೀಂ ಇಂಡಿಯಾ ಲೀಗ್ ಪಂದ್ಯದ ಹಂತವನ್ನೂ ದಾಟದೆ ಟೂರ್ನಿಯಿಂದ ಹೊರಬೀಳುತ್ತದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು.
ಪಂದ್ಯಾವಳಿಯ ಮೊದಲ ಪಂದ್ಯವೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಇದ್ದ ಹಿನ್ನೆಲೆಯಲ್ಲಿ ಪಂದ್ಯಾವಳಿ ಸೋತರೂ ಪರವಾಗಿಲ್ಲ. ಇದೊಂದು ಪಂದ್ಯ ಗೆದ್ದರೆ ಸಾಕಪ್ಪ, ನಮಗೆ ವಿಶ್ವಕಪ್ ಗೆದ್ದಷ್ಟೇ ಸಂತೋಷವಾಗುತ್ತದೆ ಎಂದು ಹೇಳಿದವರ ಸಂಖ್ಯೆಗೂ ಕಡಿಮೆ ಇಲ್ಲ.
ಧೋನಿ ನೇತೃತ್ವದ ಪಡೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ೭ ವಿಕೆಟ್ ನಷ್ಟಕ್ಕೆ ೩೦೦ರನ್ ಪೇರಿಸಿ, ಕಡು ವೈರಿ ಪಾಕಿಸ್ತಾನವನ್ನು ಕೇವಲ ೨೨೪ರನ್‌ಗೆ ಆಲೌಟ್ ಮಾಡಿ ೭೬ ರನ್‌ಗಳ ಭರ್ಜರಿ ಜಯ ಪಡೆಯುತ್ತಿದ್ದಂತೆ ಭಾರತ ತಂಡದ ಬಗ್ಗೆ ಮತ್ತೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸ ಉಕ್ಕಿ ಬಂದಿದೆ. ಈವರೆಗೆ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಒಂದೂ ಪಂದ್ಯ ಗೆಲ್ಲದ ಪಾಕಿಸ್ತಾನ ಮತ್ತೊಮ್ಮೆ ಮುಗ್ಗರಿಸಿ, ಇತಿಹಾಸ ಮರುಕಳಿಸುವಂತೆ ಮಾಡಿದೆ.
ಇನ್ನು ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಸೋತಿದ್ದ ಭಾರತ ತನ್ನ ಎರಡನೇ ಪಂದ್ಯದಲ್ಲಿ ಸೌತಿ ವಿರುದ್ಧ ೧೩೦ ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿ, ಇತಿಹಾಸದ ಪುನರಾವರ್ತನೆಗೆ ಕಡಿವಾಣ ಹಾಕಿ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಾಳದಲ್ಲಿ ಮನೆ ಮಾಡುವಲ್ಲಿ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ವಿಶ್ವಕಪ್‌ಗೂ ಮುನ್ನ ನಡೆದ ಪಂದ್ಯಗಳಲ್ಲಿ ೩೦೦ರ ಗಡಿಯ ಸನಿಹಕ್ಕೂ ಬಾರದಿದ್ದ ಧೋನಿ ಪಡೆ ಈಗ ವಿಶ್ವಕಪ್‌ನಲ್ಲಿ ಆಡಿರುವ ಎರಡೂ ಪಂದ್ಯದಲ್ಲಿ ೩೦೦ ಅಥವಾ ಅದಕ್ಕಿಂತ ಹೆಚ್ಚು ರನ್ ಮಾಡಿದೆ. ಭಾರತದ ಬೌಲಿಂಗ್ ಕೂಡ ಸುಧಾರಿಸಿದ್ದು, ಕರಾರುವಾಕ್ ಬೌಲಿಂಗ್ ಪಂದ್ಯ ಗೆಲ್ಲಿಸುವಲ್ಲಿ ಯಶಸ್ವಿಯಾಗಿದೆ. ಇದೇ ಪ್ರವೃತ್ತಿಯನ್ನು ಟೀಂ ಇಂಡಿಯಾ ಕಾಯ್ದುಕೊಂಡರೆ ವಿಶ್ವಕಪ್ ಕನ್ನಡಿಯೊಳಗಿನ ಗಂಟು ಖಂಡಿತಾ ಆಗಲಾರದು.
ಇನ್ನು ಫೆ.೨೮ರಂದು ಯು.ಎ.ಇ. ವಿರುದ್ಧ, ಮಾರ್ಚ್ ೬ರಂದು ವೆಸ್ಟ್ ಇಂಡೀಸ್ ವಿರುದ್ಧ, ಮಾರ್ಚ್ ೧೦ರಂದು ಐರ್ಲೆಂಡ್ ವಿರುದ್ಧ ಮತ್ತು ಮಾ.೧೪ರಂದು ಜಿಂಬಾಬ್ವೆ ವಿರುದ್ಧ ನಡೆಯಲಿರುವ ಪಂದ್ಯಗಳಲ್ಲೂ ಭಾರತವೇ ಫೇವರಿಟ್ ಆಗಿದ್ದು, ಈ ನಾಲ್ಕು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದರೂ ನಾಕೌಟ್ ಹಂತಕ್ಕೆ ಪ್ರವೇಶಿಸಲಿದೆ.
ಮಿಂಚಿದ ಕೋಹ್ಲಿ ಹಾಗೂ ಶಿಖರ್ ಧವನ್
ಕ್ರಿಕೆಟ್‌ನಲ್ಲಿ ಲಯ ಕಳೆದುಕೊಂಡಿದ್ದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಮೊದಲ ಎರಡು ಪಂದ್ಯದಲ್ಲಿ ಮತ್ತೆ ಲಯ ಕಂಡುಕೊಂಡಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಕೋಹ್ಲಿ ಶತಕ ದಾಖಲಿಸಿದರೆ, ಸೌತಿ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಎರಡೂ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ ೩೦೦ರ ಗಡಿ ದಾಟಿದ ಹಿನ್ನೆಲೆಯಲ್ಲಿ ಒತ್ತಡದಿಂದ ಹೊರಬಂದ ಭಾರತೀಯ ಬೌಲರ್‌ಗಳೂ ಲಯ ಕಂಡುಕೊಂಡಿದ್ದಾರೆ. ಆಸ್ವಿನ್, ಶಮಿ, ಉಮೇಶ್ ಯಾದವ್ ಹಾಗೂ ಮೋಹಿತ್ ಶರ್ಮಾ ಬೌಲಿಂಗ್ ವಿಭಾಗದಲ್ಲಿ ಮಿಂಚುತ್ತಿದ್ದಾರೆ. ಒಟ್ಟಿನಲ್ಲಿ ಆದದ್ದೆಲ್ಲಾ ಒಳಿತೇ ಆಯಿತು ಎನ್ನುವ ಸ್ಥಿತಿ ಭಾರತದ್ದಾಗಿದೆ. ಈ ಬಾರಿಯೂ ಭಾರತ ವಿಶ್ವಕಪ್ ಕಿರೀಟ ಉಳಿಸಿಕೊಳ್ಳಲಿ ಎಂಬುದು ಎಲ್ಲ ಕ್ರಿಕೆಟ್ ಅಭಿಮಾನಿಗಳ ಹಾರೈಕೆ.

ಮುಖಪುಟ /ಸುದ್ದಿ ಸಮಾಚಾರ