ಮುಖಪುಟ /ಸುದ್ದಿ ಸಮಾಚಾರ 

ವಿಶ್ವಕಪ್ ಕ್ರಿಕೆಟ್ ನಲ್ಲಿ ಗೇಲ್ ಕಮಾಲ್

ದ್ವಿಶತಕ ದಾಖಲಿಸಿದ ಜಮೈಕಾ ಎಡಗೈ ಆಟಗಾರ

cris Ghaleಬೆಂಗಳೂರು, ಫೆ.24:  ಕ್ರಿಕೆಟ್ ರಂಗದ ದೈತ್ಯ ಪ್ರತಿಭೆ, ಟಿ -೨೦ಯಲ್ಲಿ ಜನ ಮೆಚ್ಚಿದ ಬ್ಯಾಟ್ಸ್‌ಮನ್ ವೆಸ್ಟ್ ಇಂಡೀಸ್‌ನ ಕ್ರಿಸ್‌ಗೇಲ್ ಆಟ ನೋಡಿದಾಗಲೆಲ್ಲಾ, ಏಕೆ ಈ ಮನುಷ್ಯ ಇನ್ನೂ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿಲ್ಲ ಎಂದು ಅಭಿಮಾನಿಗಳಿಗೆ ಅನಿಸುತ್ತಿತ್ತು. ಅದು ವಿಶ್ವಕಪ್ ಕ್ರಿಕೆಟ್‌ನಲ್ಲಿ ನನಸಾಗಿದೆ.
ಕ್ಯಾನ್‌ಬೆರಾದಲ್ಲಿ ಜಿಂಬಾಬ್ವೆ ವಿರುದ್ಧ ಫೆ.೨೪ರಂದು ನಡೆದ ಪಂದ್ಯದಲ್ಲಿ ರನ್ ಬರದಿಂದ ಹೊರಬಂದ ಗೇಲ್ ಅಬ್ಬರಿಸಿ ಬೊಬ್ಬಿರಿದು ರನ್ ಹೊಳೆಯನ್ನೇ ಹರಿಸಿದರು.
ಜಮೈಕಾದ ಎಡಗೈ ಆಟಗಾರ ಗೇಲ್ ತಾವು ಎದುರಿಸಿದ ೧೪೭ ಚೆಂಡುಗಳಲ್ಲಿ ೧೦ ಬೌಂಡರಿ ಹಾಗೂ ೧೬ ಸಿಕ್ಸರ್ ಸಿಡಿಸುವ ಮೂಲಕ ಬರೋಬರಿ ೨೧೫ರನ್ ಹೊಡೆದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್‌ನ ಅತಿ ಹೆಚ್ಚಿನ ವೈಯಕ್ತಿಕ ಮೊತ್ತವಾಗಿದೆ. ೧೯೯೬ರ ವಿಶ್ವಕಪ್‌ನಲ್ಲಿ ರಾವಲ್‌ಪಿಂಡಿಯಲ್ಲಿ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಗ್ಯಾರಿ ಕ್ರಿಸ್ಟೆನ್ ಸಿಡಿಸಿದ್ದ ಅಜೇಯ ೧೮೮ ರನ್ ಈವರೆಗಿನ ಅಧಿಕ ಮೊತ್ತವಾಗಿತ್ತು. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಗೇಲ್ ಹೊಡೆದ ೨೧೫ರನ್ ಮೂರನೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.
ಭಾರತದ ರೋಹಿತ್ ಶರ್ಮಾ, ೨೦೧೪ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗಳಿಸಿದ ೨೬೪ರನ್ ವಿಶ್ವದಾಖಲೆಯಾಗಿ ಉಳಿದಿದೆ. ಇನ್ನು ವಿಂಡೀಸ್ ವಿರುದ್ಧ ೨೦೧೧ರಲ್ಲಿ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ೨೧೯ರನ್ ಸಿಡಿಸಿರುವ ಭಾರತದ ವೀರೇಂದ್ರ ಸೆಹ್ವಾಗ್ ಎರಡನೇ ಸ್ಥಾನದಲ್ಲಿದ್ದಾರೆ.
ಗೇಲ್ ಅಬ್ಬರದ ಆಟದ ಫಲವಾಗಿ ವಿಂಡೀಸ್ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೊತ್ತ ೩೭೨ಕ್ಕೆ ೨ ಕಲೆ ಹಾಕಿದ ಗೌರವಕ್ಕೂ ಪಾತ್ರವಾಗಿದೆ. ೨೦೧೪ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ನ್ಯೂಜಿಲೆಂಡ್ ೪ ವಿಕೆಟ್ ನಷ್ಟಕ್ಕೆ ಗಳಿಸಿದ್ದ ೩೬೩ರನ್ ಈವರೆಗಿನ ಅತ್ಯಧಿಕ ತಂಡ ಮೊತ್ತವಾಗಿತ್ತು.
ಈ ಪಂದ್ಯದಲ್ಲಿ ಗೇಲ್ ೧೬ ಸಿಕ್ಸರ್ ಸಿಡಿಸಿ ಭಾರತದ ರೊಹಿತ್ ಶರ್ಮಾ ನಿರ್ಮಿಸಿದ್ದ ವಿಶ್ವ ದಾಖಲೆ ಸರಿಗಟ್ಟಿದ್ದಾರೆ. ಜೊತೆಗೆ ಸ್ಯಾಮ್ಯುಯೆಲ್ (ಅಜೇಯ ೧೩೩)ರೊಂದಿಗೆ ೩೭೨ ರನ್ ಜೊತೆಯಾಟ ಏಕದಿನ ಕ್ರಿಕೆಟ್‌ನಲ್ಲಿ ಯಾವುದೆ ವಿಕೆಟ್‌ನ ಅತಿ ಹೆಚ್ಚು ಮೊತ್ತದ ಜೊತೆಯಾಟದ ದಾಖಲೆ ಬರೆದಿದೆ.
ದಾಖಲೆಗಳು ಇರುವುದೇ ಮುರಿಯುವುದಕ್ಕೆ ಈ ವಿಶ್ವಕಪ್‌ನಲ್ಲಿ ಇನ್ನೂ ಎಷ್ಟು ದಾಖಲೆಗಳು ಮುರಿಯುತ್ತವೋ ಕಾದು ನೋಡಬೇಕು.

ಮುಖಪುಟ /ಸುದ್ದಿ ಸಮಾಚಾರ