ಮುಖಪುಟ /ಸುದ್ದಿ ಸಮಾಚಾರ 

ಶಸ್ತ್ರ ಚಿಕಿತ್ಸೆ ವೇಳೆ ರೋಗಿ ಸಾವು: ಇದೆಂಥಾ ತನಿಖಾ ವರದಿ?

Vidya Prasad, died due to negligence of a Doctor, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ವಿದ್ಯಾ ಪ್ರಸಾದ್ಬೆಂಗಳೂರು : ಬೆಂಗಳೂರು ವೈದ್ಯಕೀಯ ವಿದ್ಯಾಲಯದ  ಸಹ ಪ್ರಾಧ್ಯಾಪಕ ಹಾಗೂ ಸರ್ಕಾರಿ ವೈದ್ಯ ಡಾ. ಪಿ.ಕೆ. ರಾಜು ಖಾಸಗಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ನಡೆಸಿ ಅವರ ಸಾವಿಗೆ ಕಾರಣರಾದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ೨೦೧೨ರಲ್ಲಿ ರಚಿಸಿದ್ದ ತನಿಖಾ ಸಮಿತಿ ಏಕಪಕ್ಷೀಯ ವರದಿ ಸಿದ್ಧಪಡಿಸಿ , ಸರ್ಕಾರಕ್ಕೂ ಸಲ್ಲಿಸದೆ ತಪ್ಪಿತಸ್ಥರ ರಕ್ಷಣೆಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ.

ತನಿಖಾ ಸಮಿತಿಯ ನೇತೃತ್ವ ವಹಿಸಿದ್ದ ಬೆಂಗಳೂರು ವೈದ್ಯಕೀಯ ವಿದ್ಯಾಲಯದ ಪ್ರಾಧ್ಯಾಪಕ ಮತ್ತು ಮೂಳೆಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್. ಮಂಜುನಾಥ್ ಅವರು ತಮ್ಮ ವಿಭಾಗದಲ್ಲೇ ಸಹ ಪ್ರಾಧ್ಯಾಪಕರಾಗಿರುವ ಡಾ.ಪಿ.ಕೆ. ರಾಜು ಅವರನ್ನು ರಕ್ಷಿಸಲು ಏಕಪಕ್ಷೀಯ ವರದಿ ನೀಡಿದ್ದಾರೆ ಎಂದು ಮೃತ ಮಹಿಳೆಯ ಪತಿ ಹಿರಿಯ  ವಕೀಲ ಎಚ್.ಎನ್.ಎಂ. ಪ್ರಸಾದ್ ಆರೋಪಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಕುರಿತು ತನಿಖೆ ನಡೆಸಲು ಸರ್ಕಾರ ರಚಿಸಿದ್ದ ಸಮಿತಿ , ದೂರುದಾರನಾದ ತಮ್ಮನ್ನು ಒಮ್ಮೆಯೂ ವಿಚಾರಣೆಗೆ ಕರೆಯಲಿಲ್ಲ. ತಮ್ಮ ಹೇಳಿಕೆಯನ್ನೂ ಪಡೆಯಲಿಲ್ಲ. ಕೇವಲ ತಮ್ಮ ಸಹೋದ್ಯೋಗಿ ಡಾ.ಪಿ.ಕೆ. ರಾಜು ಅವರ ಹೇಳಿಕೆಯನ್ನು ಮಾತ್ರವೇ ದಾಖಲಿಸಿಕೊಂಡು ಯಾವುದೇ ವೈದ್ಯಕೀಯ ನಿರ್ಲಕ್ಷ್ಯ ಕಂಡುಬರುವುದಿಲ್ಲ ಎಂದು ವರದಿ ನೀಡಿದೆ ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದಾಗಿದೆ ಎಂದು ದೂರಿದ್ದಾರೆ.

ತನಿಖಾ ಸಮಿತಿ ವರದಿಯನ್ನು ಬೆಂಗಳೂರು ವೈದ್ಯಕೀಯ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಡೀನ್ ಅವರಿಗೆ ನೀಡಿದೆ. ಆದರೆ ಅವರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಹೀಗಾದರೆ ತನಿಖಾ ಸಮಿತಿ ರಚಿಸಿ ಪ್ರಯೋಜನ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಮಿಗಿಲಾಗಿ ವರದಿಯಲ್ಲಿ ದಿನಾಂಕವನ್ನು ಸಹ ನಮೂದು ಮಾಡಿಲ್ಲ. ಯಾವ ದಿನಾಂಕದಂದು ವರದಿ ನೀಡಲಾಗಿದೆ ಎಂಬುದೂ ಇಲ್ಲ. ಸಮಿತಿ ಎಷ್ಟು ಜನರಿಗೆ ನೋಟಿಸ್ ನೀಡಿದೆ , ಯಾರ ಯಾರ ಹೇಳಿಕೆ ದಾಖಲಿಸಿದೆ , ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆಯೇ , ಕಡತಗಳನ್ನು ಪರಿಶೀಲಿಸಲಗಿದೆಯೇ ಎಂಬ ಯಾವುದೇ ಪ್ರಸ್ತಾಪವೂ ಇಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ಆದೇಶದಂತೆ ರಚಿತವಾದ ಸಮಿತಿ ಶಸ್ತ್ರಚಿಕಿತ್ಸೆಯ ಹಾಸಿಗೆಯಲ್ಲೇ ಮೃತಪಟ್ಟ ವಿದ್ಯಾ ಪ್ರಸಾದ್ ಅವರ ಅಸಹಜ ಸಾವಿನ ನೈಜ ಕಾರಣ ತಿಳಿಯಲು ಡಾ.ಪುಟ್ಟ ಕೆಂಪರಾಜು , ಡಾ. ವಿಶ್ವನಾಥ್ , ಡಾ. ರವಿಶಂಕರ್ (ಅರವಳಿಕೆ ತಜ್ಞ) ಮತ್ತು ಡಾ. ಸುರೇಶ್ (ನ್ಯೂರೋ ಸರ್ಜನ್) ಇವರಿಗೆ ಸಮಿತಿಯ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಆದರೆ , ಡಾ. ರವಿಶಂಕರ್ ಮತ್ತು ಡಾ. ಸುರೇಶ್ ಅವರು ಸಮಿತಿಯ ಮುಂದೆ ಹಾಜರಾಗಲು ನಿರಾಕರಿಸಿದ್ದಾರೆ ಎಂದು ಮೊದಲ ಪ್ಯಾರಾದಲ್ಲೇ ಉಲ್ಲೇಖಿಸಲಾಗಿದೆ. ಸಮಿತಿಯ ಮುಂದೆ ಹಾಜರಾಗದ ವೈದ್ಯರ ವಿರುದ್ಧ ಕೈಗೊಂಡ ಕ್ರಮ ಏನು ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆಯೇ ಎಂಬ ಯಾವುದೇ ಪ್ರಸ್ತಾಪ ಇಲ್ಲ. ಇನ್ನು ಡಾ. ವಿಶ್ವನಾಥ್ ಸಮಿತಿಯ ಮುಂದೆ ಹಾಜರಾಗಿದ್ದರೆ , ಅವರು ನೀಡಿರುವ ಹೇಳಿಕೆ ಏನು ಎಂಬ ಯಾವುದೇ ಪ್ರಸ್ತಾಪವೂ ಇಲ್ಲ.

ಡಾ. ಪಿ.ಕೆ. ರಾಜು ಅವರ ಆಡಳಿತಾತ್ಮಕ ಮತ್ತು ತಾಂತ್ರಿಕ ಲೋಪಗಳನ್ನಷ್ಟೇ ತಿಳಿಯಲು ತನಿಖೆ ನಡೆಸಲಾಗಿದೆ ಎಂದು ಬರೆದು ನೀಡಲಾಗಿರುವ ಸಮಿತಿ ವರದಿಯಲ್ಲಿ ಕೇವಲ ಡಾ.ಪಿ.ಕೆ. ರಾಜು ಹೇಳಿರುವ ಹೇಳಿಕೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಎಲ್ಲವೂ ಸರಿಯಾಗಿದೆ ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ಇದು ದೂರುದಾರನಾದ ತಮಗೆ ಮಾಡಿರುವ ಅನ್ಯಾಯ ಹಾಗೂ ವೈದ್ಯಕೀಯ ನಿರ್ಲಕ್ಷ್ಯದಿಂದ ರೋಗಿಯ ಸಾವಿಗೆ ಕಾರಣರಾದ ಬೇಜವಾಬ್ದಾರಿ ವೈದ್ಯರನ್ನು ರಕ್ಷಿಸಲೆಂದೇ ನೀಡಿರುವ ವರದಿ ಎಂದು ಪ್ರಸಾದ್ ಆರೋಪಿಸಿದ್ದಾರೆ.

ಈ ವರದಿಯಲ್ಲಿ  ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವ ಮೊದಲು ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ತಿಳಿದುಬಂದ ಕಾರಣ ಜೀವಕ್ಕೆ ಅಲ್ಪ ಅಪಾಯ ಇದೆ ಎಂದು ಡಾ. ಪಿ.ಕೆ. ರಾಜು ಅವರು ಮೌಖಿಕವಾಗಿ ರೋಗಿಯ ಬಂಧುಗಳಿಗೆ ತಿಳಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಇಂಥ ಯಾವುದೇ ಮಾಹಿತಿ ನಮಗೆ ನೀಡಲಾಗಿರಲಿಲ್ಲ. ಡಾ. ರಾಜು ನಮಗೆ ಈ ಬಗ್ಗೆ ಮಾಹಿತಿ ನೀಡಿದ್ದರೆ ಇಲ್ಲವೇ ಎಂದು ತಿಳಿಯಲೂ ಸಮಿತಿ ನಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ , ಈ ವರದಿ ಸಂಪೂರ್ಣ ಏಕಪಕ್ಷೀಯ ಹಾಗೂ ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನ ಎಂದು ದೂರಿದ್ದಾರೆ.

ಮಿಗಿಲಾಗಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಇಂಟರ್ ವೆನ್ಷನ್ ಸೌಲಭ್ಯ ಇರಲಿಲ್ಲ ಎಂಬುದನ್ನು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ವೈದ್ಯರಿಗೆ ಮೊದಲೇ ರೋಗಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಈ ಹಿನ್ನೆಲೆಯಲ್ಲಿ ಪ್ರಾಣಕ್ಕೆ ಅಲ್ಪ ಅಪಾಯ ಇದೆ ಎಂದು ಗೊತ್ತಿದ್ದ ಮೇಲೆ ಕಾರ್ಡಿಯಾಕ್ ಇಂಟರ್ ವೆನ್ಷನ್ ಸೌಲಭ್ಯ ಇಲ್ಲದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದು ಏಕೆ ? ಇದು ವೈದ್ಯಕೀಯ ನಿರ್ಲಕ್ಷ್ಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರೋಗಿಯ ಸಾವಿಗೆ ಪಲ್ಮನರಿ ಎಂಬಾಲಿಸಂ ಕಾರಣ ಎಂದು ಡೆತ್ ಸರ್ಟಿಫಿಕೇಟ್ ನಲ್ಲಿ ನಮೂದಿಸಲಾಗಿದೆ.  ಆದರೆ ಆಸ್ಪತ್ರೆಯ ದಾಖಲೆಯಲ್ಲಿ ಡ್ಯೂಟಿಯಲ್ಲಿದ್ದ ವೈದ್ಯರು ಪಲ್ಮನರಿ ಎಂಬಾಲಿಸಂ ಮತ್ತು ವ್ಯಾಸ್ಕುಲರಿ ಇಂಜುರಿಯಿಂದ ಸಾವಾಗಿರಬಹುದು ಹೀಗಾಗಿ ಸಾವಿನ ನೈಜ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸುವಂತೆ ಸಲಹೆ ಮಾಡಿದ್ದಾರೆ. ಆದರೆ ರೋಗಿಯ ಬಂಧುಗಳು ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಸಾವಿನ ನೈಜ ಕಾರಣ ತಿಳಿಯಲಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮರಣೋತ್ತರ ಪರೀಕ್ಷೆಯನ್ನು ಬಂಧುಗಳು ನಿರಾಕರಿಸಿದ ಬಗ್ಗೆ ಯಾವುದೇ ಲಿಖಿತ ದಾಖಲೆ ಇಲ್ಲ. ಈ ಬಗ್ಗೆ ರೋಗಿಯ ಯಾವುದೇ ಬಂಧುವನ್ನು ಸಮಿತಿ ಕರೆಸಿ ವಿಚಾರಣೆ ನಡೆಸಿಲ್ಲ. ಕೇವಲ ತಮ್ಮ ಸಹೋದ್ಯೋಗಿ ಡಾ.ಪಿ.ಕೆ. ರಾಜು ಹೇಳಿಕೆಯನ್ನಷ್ಟೇ ವೇದವಾಕ್ಯ ಎಂಬಂತೆ ಪರಿಗಣಿಸಿ , ಅವರಿಂದ ಯಾವುದೇ ತಪ್ಪಾಗಿಲ್ಲ ಎಂದು ಡಾ. ಮಂಜುನಾಥ್ ವರದಿ ನೀಡಿದ್ದಾರೆ. ಇದು ಸಂಪೂರ್ಣ ಪಕ್ಷಪಾತದಿಂದ  ಕೂಡಿದೆ ಎಂದು ಪ್ರಸಾದ್ ಆಕ್ಷೇಪಿಸಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ , ನಾನ್ ಪ್ರಾಕ್ಟೀಸಿಂಗ್ ಅಲೋಯನ್ಸ್ ಪಡೆಯದ ಡಾ.ಪಿ.ಕೆ. ರಾಜು  ಸರ್ಕಾರಿ ಕೆಲಸದ ಅವಧಿಯ ಬಳಿಕ ಬೇರೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬಹುದಾಗಿದೆ ಎಂದು ಉಲ್ಲೇಖಿಸಿರುವ ವರದಿಯಲ್ಲಿ ರೋಗಿ ಸಾವಿಗೀಡಾದ ದಿನ ಡಾ.ಪಿ.ಕೆ. ರಾಜು ಕರ್ತವ್ಯಕ್ಕೂ ಹಾಜರಾಗಿಲ್ಲ. ರಜೆಯನ್ನೂ ಹಾಕಿಲ್ಲ. ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದೆ. ಇದು ರಾಜು ಅವರು ಸರ್ಕಾರಿ ಕೆಲಸದ ಅವಧಿಯಲ್ಲಿ ಖಾಸಗಿ ಪ್ರಾಕ್ಟೀಸ್ ಮಾಡುತ್ತಾರೆ ಎಂಬುದನ್ನು ಮೇಲ್ನೋಟಕ್ಕೆ ಸಾಬೀತು ಪಡಿಸುತ್ತದೆ ಅಲ್ಲವೇ ಎಂದು ಪತ್ನಿಯನ್ನು ಕಳೆದುಕೊಂಡಿರುವ ವಕೀಲ ಪ್ರಸಾದ್ ಕಣ್ಣೀರು ಹಾಕುತ್ತಾರೆ.

ಸರ್ಕಾರ ತನಿಖಾ ಸಮಿತಿ ರಚಿಸಿ ೨ ವರ್ಷವೇ ಕಳೆದಿದೆ. ಈವರೆಗೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ನನ್ನನ್ನೂ ವಿಚಾರಣೆಗೆ ಕರೆಸಿಲ್ಲ. ಸಮಿತಿ ಮುಂದೆ ಹಾಜರಾಗಲು ನಿರಾಕರಿಸಿದ ವೈದ್ಯರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಈ ವಿಳಂಬದ ಹಿಂದೆ ದುರುದ್ದೇಶ ಇರುವುದು ಮೇಲ್ನೋಟಕ್ಕೇ ಸ್ಪಷ್ಟವಾಗಿ ಗೋಚರಿಸುತ್ತದೆ. ನಮ್ಮ ಭಾವ ಪತ್ರಕರ್ತ ಸತೀಶ್ ಅವರು ಆರ್.ಟಿ.ಐ.ನಲ್ಲಿ ಅರ್ಜಿ ಹಾಕಿದಾಗ ನನಗೆ ವರದಿಯ ಪ್ರತಿ ಲಭ್ಯವಾಯಿತು ಎಂದು ತಿಳಿಸಿದ್ದಾರೆ.

ಸರ್ಕಾರ ಬೆಂಗಳೂರು ವೈದ್ಯಕೀಯ ವಿದ್ಯಾಲಯಕ್ಕೆ ಸಂಬಂಧ ಇಲ್ಲದ ಬೇರೆ ತಜ್ಞ ವೈದ್ಯರಿಂದ ಹೊಸದಾಗಿ ತನಿಖೆ ನಡೆಸಬೇಕು. ಇಂಥ ಹಣದಾಸೆಯ ವೈದ್ಯರಿಂದ ಮತ್ತಷ್ಟು ರೋಗಿಗಳು ಶಸ್ತ್ರಚಿಕಿತ್ಸೆಯ ಹಾಸಿಗೆಯಲ್ಲಿ ಸಾವಿಗೀಡಾಗಿ ನನ್ನ ಮಕ್ಕಳಂತೆ ಇತರರು ಅನಾಥರಾಗಬಾರದು. ಹೀಗಾಗಿ ಸರ್ಕಾರ ಮತ್ತೊಮ್ಮೆ ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ವೈದ್ಯಕೀಯ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕರಾಗಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಡಾ. ಪುಟ್ಟ ಕೆಂಪರಾಜು ೨೦೧೦ರ ಫೆಬ್ರವರಿ ೧೧ರಂದು ಶೇಷಾದ್ರಿಪುರದ ಫೋರ್ಟಿಸ್ ಆಸ್ಪತ್ರೆಯಲ್ಲಿ ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದ ಹಾಗೂ ರೀಜೆನ್ಸಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾಗಿದ್ದ ವಿದ್ಯಾ ಪ್ರಸಾದ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಆಪರೇಷನ್ ಥಿಯೇಟರ್‌ನಲ್ಲಿ ರೋಗಿ ಮೃತಪಟ್ಟಿದ್ದರು.

ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ತನಿಖೆಗೆ ಆದೇಶ

ಮುಖಪುಟ /ಸುದ್ದಿ ಸಮಾಚಾರ