ಮುಖಪುಟ /ಸುದ್ದಿ ಸಮಾಚಾರ 

ರೈಲ್ವೆ ಬಜೆಟ್: ರಾಜ್ಯದ ಜನರ ತುಟಿಗೆ ತುಪ್ಪ..

೧೯ ಹೊಸ ಮಾರ್ಗದ ಸಮೀಕ್ಷೆ, ಜೋಡಿ ಮಾರ್ಗ ಚಿಂತನೆ..

Mallikarjuna Karghe railway budgetಬೆಂಗಳೂರು, ಫೆ.೧೨: ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿ ತಮ್ಮ ಚೊಚ್ಚಲ ಆದರೆ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಕರ್ನಾಟಕಕ್ಕೆ ಮೇಲ್ನೋಟಕ್ಕೆ ಹಲವು ಕೊಡುಗೆಗಳನ್ನೂ ನೀಡಿದ್ದಾರೆ. ಇದು ಲೋಕಸಭಾ ಚುನಾವಣಾ ವರ್ಷವಾದ್ದರಿಂದ ಸಹಜವಾಗಿಯೇ ಪ್ರಯಾಣಿಕರಿಗೆ ಯಾವುದೇ ಹೊರೆ ಬಿದ್ದಿಲ್ಲ. ಪ್ರಯಾಣ ದರ ಏರಿಕೆ ಮಾಡಿಲ್ಲ.

ಇದರ ಜೊತೆಗೆ ೭೨ ಹೊಸ ರೈಲುಗಳ ಘೋಷಣೆ, ಹಲವು ಮಾರ್ಗಗಳಿಗೆ ಸಮೀಕ್ಷೆ ಹೀಗೆ ತುಟಿಗೆ ತುಪ್ಪ ಸವರುವ ಕಾರ್ಯವನ್ನು ಮಲ್ಲಿಕಾರ್ಜುನ ಖರ್ಗೆ ಚೆನ್ನಾಗಿಯೇ ಮಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ೧೯ ರೈಲ್ವೇ ಮಾರ್ಗ ನಿರ್ಮಾಣಕ್ಕಾಗಿ ಸರ್ವೇಕಾರ್ಯಕ್ಕೂ ೨೦೧೪-೧೫ರ ಸಾಲಿನ ಬಜೆಟ್‌ನಲ್ಲಿ ರೈಲ್ವೆ ಸಚಿವರು ಅವಕಾಶ ಕಲ್ಪಿಸಿದ್ದಾರೆ.

ಹಾಲಿ ಇರುವ ಐದು ರೈಲ್ವೆ ಲೈನ್‌ಗಳನ್ನು ಜೋಡಿ ಮಾರ್ಗವಾಗಿ ಪರಿವರ್ತಿಸಲು ಸರ್ವೇ ನಡೆಸಲಾಗುವುದು ಎಂದೂ ತಿಳಿಸಿದ್ದಾರೆ.

ಈಗ ಸರ್ವೆ ನಡೆಸಲುದ್ದೇಶಿಸಿರುವ ೧೯ ಹೊಸ ಮಾರ್ಗಗಳಿಗೆ ಹಲವು ದಶಕಗಳಿಂದಲೂ ಬೇಡಿಕೆ ಇದೆ. ಕೊನೆಗೂ ಸರ್ವೆಯಾದರೂ ನಡೆಯುತ್ತದೆ ಎಂದು ನೆಮ್ಮದಿ ಪಡಬೇಕಷ್ಟೇ. ಕಾರಣ, ಈ ಎಲ್ಲ ಮಾರ್ಗಗಳು ಕಾರ್ಯಗತವಾಗಲು ಹಲವು ದಶಕಗಳೇ ಬೇಕು. ನಮ್ಮ ಮಕ್ಕಳಕಾಲಕ್ಕೆ ಆದರೂ ಆಗಬಹುದು.

ಏಕೆಂದರೆ ಮೊದಲಿಗೆ ಸರ್ವೆ ಆಗಬೇಕು. ಅದರ ವರದಿಯನ್ನು ಇಲಾಖೆಗೆ ನೀಡಬೇಕು. ಇಲಾಖೆ ತಾಂತ್ರಿಕ ವಿಚಾರಗಳ ಬಗ್ಗೆ ಗಮನ ಹರಿಸಬೇಕು, ನಂತರ ಸಮಗ್ರ ವರದಿ ಸಿದ್ಧಪಡಿಸಿ ಅದನ್ನು ಸಚಿವಾಲಯಕ್ಕೆ ಸಲ್ಲಿಸಬೇಕು. ಬಳಿಕ ಅದಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಬೇಕು. ಪರಿಸರ ಇಲಾಖೆ ಒಪ್ಪಿಗೆ ಪಡೆಯಬೇಕು ತರುವಾಯ ಅದು ಬಜೆಟ್‌ನಲ್ಲಿ ಸೇರ್ಪಡೆ ಆಗಬೇಕು. ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕು, ಬಜೆಟ್‌ನಲ್ಲಿ ಹಣ ಮಂಜೂರಾಗಬೇಕು. ಮಂಜೂರಾದ ಹಣ ಬಿಡುಗಡೆ ಆಗಬೇಕು, ಬಿಡುಗಡೆ ಆದ ಹಣ ಸೋರಿಕೆ ಇಲ್ಲದೆ ಖರ್ಚಾಗಬೇಕು, ಹೊಸ ಮಾರ್ಗ ಆಗಿ ಆ ಹಳಿಗಳಲ್ಲಿ ರೈಲು ಓಡಬೇಕು ಇಷ್ಟು ಆಗುವ ಹೊತ್ತಿಗೆ ಕನಿಷ್ಠ ೧೫-೨೦ ವರ್ಷಗಳಾದರೂ ಬೇಕು.

ಸರ್ವೆ ನಡೆಯಲಿರುವ ೧೯ ಹೊಸ ಮಾರ್ಗಗಳು:  

ತಿಪಟೂರು ದುದ್ದ

ನಿಮಾಚ್-ಸಿಂಗೋಲಿ-ಕೋಟಾ

ದಾಹೋದ್-ಮೊಡಾಸ್

ಕರಾಡ್-ಕಡೆಗಾಂವ್-ಲೆನಾರೆ-ಖರ್‌ಸುಂಡಿ-ಅಟ್ಟಪಾಡಿ-ದಿಗಂಚಿ-ಮಹುಡ್-ಪಂಡರಾಪುರ

ಏಟ್ಟಾ-ಆಲಿಗಡ

ಕರ್ನಾಲ್-ಯಮುನಾನಗರ್ ವಯಾ ಅಸುಂಡಿ

ತಿರುವನಂತಪುರ-ನಾಗರಿ ಹೊಸಮಾರ್ಗವನ್ನು ಪಾಂಡಿಚೇರಿ ವರೆಗೆ ವಿಸ್ತರಣೆ

ಚಳ್ಳಕೆರೆ-ಹಿರಿಯೂರು-ಹುಳಿಯಾರ್-ಚಿಕ್ಕನಾಯಕನಹಳ್ಳಿ-ಕೆಬಿ ಕ್ರಾಸ್-ತುರುವೇಕೆರೆ-ಚನ್ನಪಟ್ಟಣ್ಣ

ಬೇತುಲ್-ಚಂದೂರ್ ಖಚಾರ್-ಅಮರಾವತಿ

ಚಾಕಿಯಾ-ದೇಸರಿಯಾ (ಕಾಥಿಯಾವಾಲಿಯಾ)

ಮೀರಜ್-ಕವತೇಮಹಾನ್‌ಕಲ್-ಜತ್-ಬಿಜಾಪುರ್

ಪೂನಾ-ಬಾರಾಮತಿ-ಸಾಸ್‌ವಾಡ್, ಜೇಜೂರಿ, ಮೋರೆಗಾಂವ್ ಮೂಲಕ

ಎಟ್ಟಾವ-ಜೌರಿಯಾ-ಬೋಗ್ನಿಪುರ-ಘಾಟಂಪೂರ್- ಜಹಾನಾಬಾದ್- ಬಕೇವಾರ್- ಬಿಂಡ್‌ಕಿರೋಡ್

ಹಾಲ್ದೌರ್-ರಾಮ್‌ಪುರ್

ಬೆಳಗಾವಿ-ಹುಬ್ಬಳ್ಳಿ, ಕಿತ್ತೂರು ಮೂಲಕವಾಗಿ

ಪೂನಾ-ಅಹ್ಮದ್‌ನಗರ್- ಕೆಗ್‌ದಾನ್‌ಕಸ್ತಿ ಮೂಲಕವಾಗಿ

ಬಳ್ಳಾರಿ-ಲಿಂಗಸೂನೂರು, ಸಿರಗುಪ್ಪ, ಸಿಂಧನೂರು ಮೂಲಕ

ಘಟಂದೂರು-ಶ್ರೀಗೊಂಡರಸ್ತೆ/ ದೌಂಡ್, ಕೈಜಿ, ಮಂಜರ ಸುಂಬಾ, ಪಟೋದಾ ಮತ್ತು ಜಮ್‌ಖೇಡ್

ಬೀರಾರಿ-ಮಹಾಟಗಿ-ಮಾರ್‌ವಾರೆ- ಮದನಪುರ್-ಧಮಾನಿ-ಸಾಗರ್ ಮೂಲಕವಾಗಿ

ಜೋಡಿ ಮಾರ್ಗಗಳು:

ಲಾತೂರ್ ರಸ್ತೆ ಕುರುಡುವಾಡಿ

ಪೂನಾ ಕೊಲ್ಲಾಪುರ

ಅಲಹಾಬಾದ್ - ಪ್ರತಾಪಘಡ

ಸೇಲಂ- ಓಮಲೂರು

ಪ್ರಭಾನಿ-ಪಾರ್ಲಿ

ಮುಖಪುಟ /ಸುದ್ದಿ ಸಮಾಚಾರ