ಮುಖಪುಟ /ಸುದ್ದಿ ಸಮಾಚಾರ 

ಪ್ರೊ.ಸಿಎನ್ ಆರ್ ರಾವ್, ಸಚಿನ್ ಅವರಿಗೆ ಭಾರತರತ್ನ ಪ್ರದಾನ

ಸಿಎನ್.ಆರ್.ರಾವ್ ಗೆ ಭಾರತರತ್ನ ಪ್ರದಾನ, ಕನ್ನಡರತ್ನ,ನವದೆಹಲಿ, ಫೆ 4- ಕರ್ನಾಟಕದ ಹೆಸರಾಂತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗಿಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶದ ಸರ್ವೋನ್ನತ ನಾಗರಿಕ ಪ್ರಶಸ್ತಿ ಭಾರತರತ್ನ ಪ್ರದಾನ ಮಾಡಿದರು.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿ.ಎನ್.ಆರ್. ರಾವ್ ಎಂದೇ ವಿಶ್ವಪ್ರಸಿದ್ದರಾಗಿರುವ, ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ ರಾಸಾಯನಿಕ ವಿಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಅಸಾಧಾರಣ ಸಾಧನೆಗೆ ಈ ಗೌರವ ನೀಡಲಾಗಿದೆ.

ಹನುಮಂತ ನಾಗೇಶ್‌ ರಾವ್‌ ಮತ್ತು ನಾಗಮ್ಮ ದಂಪತಿಯ ಮಗನಾದ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್‌ ಅವರು, ಹುಟ್ಟಿದ್ದು 1934ರ ಜೂನ್‌ 30ರಂದು ಬೆಂಗಳೂರಿನಲ್ಲಿ. 1951ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ ಪಡೆದ ಅವರು, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1958ರಲ್ಲಿ 'ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲಿ ಪಿ.ಎಚ್‌.ಡಿ. ಪಡೆದ ಸಿಎನ್ ಆರ್ ರಾವ್, 1959ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್)ನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ 1963ರಲ್ಲಿ ಕಾನ್ಪುರದ ಐಐಟಿಗೆ ಸೇರಿದರು.

ರಾವ್ ಅವರು ಪ್ರಸ್ತುತ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ ಸ್ಟಡೀಸ್ ಅಂಡ್ ರಿಸರ್ಚ್ ನಲ್ಲಿ  ಪ್ರೊಫೆಸರ್ ಹಾಗೂ ಗೌರವಾಧ್ಯಕ್ಷರಾಗಿದ್ದಾರೆ. ಇವರು 'ರಸಾಯನ ಶಾಸ್ತ್ರದ ಸಾಲಿಡ್ ಸ್ಟೇಟ್ ಮತ್ತು ಮೇಟಿರಿಯಲ್ ವಿಭಾಗದ ಸಂಶೋಧನೆಗೆ ವಿಶ್ವದಾದ್ಯಂತ ಹೆಸರುಗಳಿಸಿದ್ದಾರೆ. ಪ್ರಧಾನಮಂತ್ರಿಯವರ ವೈಜ್ಞಾನಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. 1400 ಸಂಶೋಧನಾ ಪ್ರಬಂಧ ಹಾಗೂ 45ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಮೂಲ ವಿಜ್ಞಾನ ಅಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪ್ರತಿಪಾದಿಸುವ ಅವರು, ನಾಡಿನ ಹೆಮ್ಮೆಯ ವಿಜ್ಞಾನಿಯಷ್ಟೇ ಅಲ್ಲ ಕನ್ನಡಿಗರ ಕಣ್ಮಣಿ.  

ಸಚಿನ್ ತೆಂಡೂಲ್ಕರ್ ಗೆ ಭಾರತರತ್ನ ಪ್ರದಾನಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಭಾರತರತ್ನ  ಗೌರವಕ್ಕೆ ಪಾತ್ರರಾದ ಪ್ರಥಮ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾದರು.  

ಪ್ರಶಸ್ತಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್, ಭಾರತದಲ್ಲಿ ಹುಟ್ಟಿದ್ದಕ್ಕೆ ತಾವು ಹೆಮ್ಮೆ ಪಡುವುದಾಗಿ ಹೇಳಿದರು.  ಭಾರತರತ್ನ ಗೌರವವನ್ನು ತಮ್ಮ ತಾಯಿಗೆ ಸಮರ್ಪಿಸುವುದಾಗಿ ತಿಳಿಸಿದರು.

ಸರ್ ಬ್ರಾಡ್ ಮನ್ ಬಳಿಕ ವಿಶ್ವದ ಸರ್ವಶ್ರೇಷ್ಠ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾದ ಸಚಿನ್ ಕ್ರಿಕೆಟ್ ಜಗತ್ತಿನಲ್ಲಿ ನೂರಾರು ದಾಖಲೆ ಸೃಷ್ಟಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಹಾಗೂ ಶತಕ ಗಳಿಸಿದ ಕೀರ್ತಿಗೆ ಪಾತ್ರರಾಗಿರುವ ಸಚಿನ್, ಅತಿ ಹೆಚ್ಚುಟೆಸ್ಟ್ ಪಂದ್ಯ ಆಡಿದ ಆಟಗಾರರೂ ಆಗಿದ್ದಾರೆ.

ಅತಿ ಹೆಚ್ಚು ಏಕದಿನ ಕ್ರಿಕೆಟ್ ಪಂದ್ಯ ಆಡಿರುವ ಅವರು, ಈ ಪ್ರಕಾರದ ಕ್ರಿಕೆಟ್ ನಲ್ಲೂ ಅತಿಹೆಚ್ಚು ರನ್ ಹಾಗೂ ಶತಕ ಮಾಡಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಒನ್ ಡೇ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ ಮೊದಲಿಗರಾದ ಸಚಿನ್, ವಿಶ್ವ ಕ್ರಿಕೆಟ್ ನ ಎಲ್ಲ ಪ್ರಕಾರದಲ್ಲಿ ಅತಿ ಹೆಚ್ಚು ರನ್ ಮಾಡಿರುವ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 50 ಶತಕ ಬಾರಿಸಿದ ಏಕೈಕ ಆಟಗಾರ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕಗಳ ಶತಕ ಮಾಡಿದ ಗೌರವಕ್ಕೂ ಪಾತ್ರರಾಗಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ