ಮುಖಪುಟ /ಸುದ್ದಿ ಸಮಾಚಾರ 

 ಸಿಸಿ ಪಾಟೀಲ್, ಸವದಿ, ಪಾಲೇಮಾರ್ ರಾಜೀನಾಮೆ

porngate savadi cought in camaraಬೆಂಗಳೂರು, ಫೆ.೮: ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿಬಿದ್ದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಹಾಗೂ ಇವರಿಗೆ ಆ ದೃಶ್ಯವುಳ್ಳ ಮೊಬೈಲ್ ನೀಡಿದ ಆರೋಪದ ಮೇಲೆ ಕೃಷ್ಣ ಜೆ ಪಾಲೇಮಾರ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಆರೋಪ ಹೊತ್ತು ರಾಜೀನಾಮೆ ಕೊಟ್ಟ ಬಿಜೆಪಿ ಸಚಿವರ ಪಟ್ಟಿಗೆ ಮತ್ತೆ ಮೂವರು ಸೇರ್ಪಡೆಯಾಗಿದ್ದಾರೆ.

ನಿನ್ನೆ ವಿಧಾನಸಭೆಯಲ್ಲಿ ಗಂಭೀರ ವಿಚಾರದ ಚರ್ಚೆ ಆಗುತ್ತಿದ್ದಾಗ, ಮೊಬೈಲ್‌ನಲ್ಲಿ  ವಿಡಿಯೋ ವೀಕ್ಷಿಸುತ್ತಿದ್ದ ಸಚಿವರ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಸರ್ವತ್ರ ಖಂಡನೆ ವ್ಯಕ್ತವಾಗಿತ್ತು. ರಾಷ್ಟ್ರೀಯ ವಾಹಿನಿಗಳಲ್ಲೂ ಇದು ಪ್ರಸಾರವಾದ ಕಾರಣ, ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮುಜುಗರಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ಕಳಂಕಿತ ಸಚಿವರ ರಾಜೀನಾಮೆ ಪಡೆಯಲಾಯಿತು.

ನಿನ್ನೆ ಚಿಕ್ಕಮಗಳೂರು ಜಿಲ್ಲೆಗೆ ಕಾರ್ಯಕ್ರಮಕ್ಕೆ ತೆರಳಿದ್ದ ಮುಖ್ಯಮಂತ್ರಿ ಮಧ್ಯರಾತ್ರಿ ರಾಜಧಾನಿಗೆ ಹಿಂತಿರುಗುತ್ತಿದ್ದಂತೆ, ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿ, ಬೆಳಗ್ಗೆ ೬ ಗಂಟೆಗೇ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಬಿಜೆಪಿ ಕಚೇರಿಗೆ ಆಗಮಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ಸಚಿವ ಸುರೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಬಸವರಾಜ ಬೊಮ್ಮಾಯಿ, ಆರ್.ಎಸ್.ಎಸ್. ಮುಖಂಡರೊಂಗಿಗೂ ಚರ್ಚಿಸಿ, ಮೂವರು ಸಚಿವರನ್ನು ಕರೆಸಿಕೊಂಡು ರಾಜೀನಾಮೆ ಪಡೆದರು.

ನಂತರ ಅಂಗೀಕಾರಕ್ಕಾಗಿ ರಾಜ್ಯಪಾಲರಿಗೆ ಈ ರಾಜೀನಾಮೆ ಪತ್ರಗಳನ್ನು ಫ್ಯಾಕ್ಸ್ ಮೂಲಕ ರವಾನಿಸಲಾಯಿತು. ರಾಜ್ಯಪಾಲರು ಸಹಕಾರ ಸಚಿವ ಲಕ್ಷ್ಮಣಸವದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ್ ಮತ್ತು ಬಂದರು ಸಚಿವ ಕೃಷ್ಣಪಾಲೆಮಾರ್ ತಮ್ಮ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕರಿಸಿದರು. 

ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ನಡೆದ ವರಿಷ್ಠರ ಸಭೆಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಪಕ್ಷ ಮುಜುಗರದಿಂದ ಪಾರಾಗಲು ಏನೆಲ್ಲಾ ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. 

ಈ ಮಧ್ಯೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಕೂಡ ಪಕ್ಷಕ್ಕೆ ಸ್ಪಷ್ಟ ಸೂಚನೆ ನೀಡಿ, ಸಚಿವರ ರಾಜೀನಾಮೆ ಪಡೆಯುವಂತೆ ಸೂಚಿಸಿದ್ದರು. ಆದರೆ ಈ ಯಾವ ಗುಟ್ಟು ಬಿಟ್ಟುಕೊಡದೆ ಸಚಿವರ ರಾಜೀನಾಮೆ ಪಡೆದ ಬಿಜೆಪಿ ನಂತರ ಆ ಸಚಿವರಿಂದಲೇ, ತಾವು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಕೊಟ್ಟಿರುವುದಾಗಿ ಹೇಳಿಸಿತು.

ಮುಖಪುಟ /ಸುದ್ದಿ ಸಮಾಚಾರ