ಮುಖಪುಟ /ಸುದ್ದಿ ಸಮಾಚಾರ 

ಸದನದಲ್ಲಿ ಸಚಿವರಿಂದ ಕಾಮಕೇಳಿದೃಶ್ಯ ವೀಕ್ಷಣೆ
 

porngate savadi cought in camaraಬೆಂಗಳೂರು, ಫೆ.೭: ಮಲ್ಪೆಯ ಸೇಂಟ್ ಮೇರಿ ದ್ವೀಪದಲ್ಲಿ ಪ್ರವಾಸೋದ್ಯಮ ನೆಪದಲ್ಲಿ ವಿದೇಶೀ ಪ್ರಜೆಗಳು ಸಾರ್ವಜನಿಕವಾಗಿ ರಾಸಲೀಲೆಯಲ್ಲಿ ತೊಡಗಿದ್ದರೆ, ಇತ್ತ ವಿಧಾನಸಭೆಯಲ್ಲಿ ಸಚಿವರಿಬ್ಬರು ತಮ್ಮ ಮೊಬೈಲ್‌ನಲ್ಲಿ  ಕಾಮಕೇಳಿಯ ದೃಶ್ಯಗಳನ್ನು ವೀಕ್ಷಿಸುತ್ತಿರುವುದು ಜಗಜ್ಜಾಹೀರಾಗಿದ್ದು, ಸರ್ಕಾರವೇ ತಲೆತಗ್ಗಿಸುವಂತಾಗಿದೆ.

ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ದೇಶದ್ರೋಹದಂಥ ಗಂಭೀರ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದರೆ, ಆಡಳಿತ ಪಕ್ಷದ ಸಚಿವರಾದ ಲಕ್ಷ್ಮಣ ಸವದಿ ಹಾಗೂ ಸಿ.ಸಿ. ಪಾಟೀಲ್ ನಂಗಾನಾಚ್ ದೃಶ್ಯಗಳನ್ನು ವೀಕ್ಷಿಸುತ್ತಾ ಆನಂದಿಸುತ್ತಿದ್ದ ದೃಶ್ಯಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದು ದೇಶಾದ್ಯಂತ ಪ್ರಸಾವಾಗಿ ನಾಡಿನ ಕೀರ್ತಿಯ ಮುಕುಟಕ್ಕೆ ಕಳಂಕ ತಂದಿದೆ. ಜತೆಗೆ ಈ ಇಬ್ಬರು ಸಚಿವರ ತಲೆದಂಡ ನಿಶ್ಚಿತವಾಗಿದೆ.

ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಸದನಗಳು ಪ್ರಜಾಪ್ರಭುತ್ವದ ದೇವಾಲಯಗಳಿದ್ದಂತೆ. ಆದರೆ, ಇಂಥ ಪವಿತ್ರ ಸ್ಥಳದಲ್ಲಿ ರಾಜ್ಯದ ಹಿತದ ಬಗ್ಗೆ ಚಿಂತಿಸಬೇಕಾದ, ತಮ್ಮನ್ನು ಶಾಸನ ಸಭೆಗೆ ಆರಿಸಿ ಕಳುಹಿಸಿದ ಜನರ ನೋವಿನ ಬಗ್ಗೆ ಕಾಳಜಿ ವಹಿಸಬೇಕಾದ ಸಚಿವರು ಕರ್ತವ್ಯ ಮರೆತು ಬೆತ್ತಲೆ ನೃತ್ಯ, ರತಿಕ್ರೀಡೆಯ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದ ಬಗ್ಗೆ ಸಾರ್ವತ್ರಿಕವಾಗಿ ಆಕ್ರೋಶ ವ್ಯಕ್ತವಾಗಿದೆ.

ಈ ದೃಶ್ಯಗಳು ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಜನ ಆಕ್ರೋಶಗೊಂಡು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರೆ, ಇಬ್ಬರು ಸಚಿವರ ಕ್ಷೇತ್ರಗಳಲ್ಲಿ ವಿದ್ಯುತ್ ಕಡಿತ ಮಾಡಿ, ಆ ಮಾಧ್ಯಮಗಳನ್ನು ವೀಕ್ಷಿಸದಂತೆ ಮಾಡುವ ತಂತ್ರವೂ ನಡೆದಿದೆ.

ಈ ಮಧ್ಯೆ ಸಚಿವರ ಇಂಥ ನೀಚ ವರ್ತನೆಯ ಬಗ್ಗೆ ಪ್ರತಿಪಕ್ಷಗಳ ನಾಯಕರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸದನ ನಡೆಯುತ್ತಿದ್ದಾಗ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ಲಕ್ಷ್ಮಣ ಸವದಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ