ಮುಖಪುಟ /ಸುದ್ದಿ ಸಮಾಚಾರ 

ಸ್ವಯಂ ಪ್ರೇರಿತ ರಾಜೀನಾಮೆ

Lakshmanasavadiಬೆಂಗಳೂರು, ಫೆ.೮: ನಾನು ಏನೂ ತಪ್ಪು ಮಾಡಿಲ್ಲ ಎಂದು ಮತ್ತೆ ತಮ್ಮನ್ನು ತಾವು ಸಮರ್ಥಿಸಿಕೊಂಡಿರುವ ಲಕ್ಷ್ಮಣ ಸವದಿ, ಪಕ್ಷಕ್ಕೆ ಮುಜುಗರ ಆಗಬಾರದು, ಸರ್ಕಾರಕ್ಕೆ ಮುಖಭಂಗ ಆಗಬಾರದು ಎಂಬ ಕಾರಣದಿಂದ ನಾವು ಮೂರೂ ಜನ ಮಂತ್ರಿಗಳು ರಾಜೀನಾಮೆ ಕೊಡುತ್ತಿದ್ದೇವೆ ಎಂದು ಪ್ರಕಟಿಸಿದರು.

ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ರಾಜೀನಾಮೆಯನ್ನು ಪಕ್ಷ, ಮುಖ್ಯಮಂತ್ರಿ, ಸ್ವೀಕಾರ ಮಾಡಬೇಕು. ಆದರೆ ಸತ್ಯಾಸತ್ಯತೆಯ ತನಿಖೆ ಆಗಬೇಕು. ಈ ಬಗ್ಗೆ ಸಭಾಧ್ಯಕ್ಷರಿಗೆ ಮನವಿ ಮಾಡುವುದಾಗಿ ಹೇಳಿದರು.

ರಾಜ್ಯದ ಜನತೆಗೆ ಹಾಗೂ ಸರ್ಕಾರಕ್ಕೆ ಮುಖಭಂಗ ಮಾಡಲು ಸಿದ್ಧರಿಲ್ಲ. ಹೀಗಾಗಿ ಸ್ವಯಂಪ್ರೇರಿತರಾಗಿ ರಾಜೀನಾಮೆ ಕೊಟ್ಟಿದ್ದೇವೆ. ಸ್ಪೀಕರ್‌ಗೆ ತನಿಖೆ ಆಗಬೇಕು ಎಂದು ವಿನಂತಿಸಲಿದ್ದು, ತಾವು ತನಿಖೆಯಲ್ಲಿ  ನಿರಪರಾಧಿಯಾಗಿ ಹೊರಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

palemarಕೃಷ್ಣ ಪಾಲೇಮಾರ್ ಮಾತನಾಡಿ, ನಾನು ಸದನದಲ್ಲಿ ವಿಡಿಯೋ ನೋಡುತ್ತಿರಲಿಲ್ಲ. ನನ್ನ ಮೊಬೈಲ್ ಯಾರಿಗೂ ಕೊಟ್ಟಿಲ್ಲ. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ನನಗೆ ಅಂಥ ಚಿತ್ರ ನೋಡೋ ಹವ್ಯಾಸವೂ ಇಲ್ಲ ಆದರೂ ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ಕೊಟ್ಟಿದ್ದೇನೆ ಎಂದರು.

ಹೈಕಮಾಂಡ್ ತಮಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿರಲಿಲ್ಲ. ಬದಲಾಗಿ ರಾಜೀನಾಮೆ ನೀಡಬೇಡಿ ಎಂದೇ ಹೇಳಿತ್ತು. ಆದರೆ ನಮ್ಮ ವಿರುದ್ಧ ತನಿಖೆ ಆಗುವಾಗ ನಾವು ಸಚಿವರಾಗಿರುವುದು ಸರಿಯಲ್ಲ ಎಂದು ನಾವೇ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದರು.

ಅತಿರಂಜಿತ ವರದಿ: ಸಿ.ಸಿ.ಪಾಟೀಲ್ ಮಾತನಾಡಿ ನೈತಿಕತೆಯನ್ನು ಎತ್ತಿಹಿಡಿಯುವ ಬಿಜೆಪಿಯಿಂದ ನಾವು ಚುನಾಯಿತರಾಗಿದ್ದೇವೆ. ಸಚಿವರಾಗಿ ಕೆಲಸ ಮಾಡುವ ಅವಕಾಶವನ್ನು ಪಕ್ಷ ನಮಗೆ ನೀಡಿತ್ತು. ಆದರೆ ಮಾಧ್ಯಮಗಳಲ್ಲಿ  ಅತಿರಂಜಿತ ವರದಿಗಳು ಬಂದ ಹಿನ್ನೆಲೆಯಲ್ಲಿ ನಾವು ಸರ್ಕಾರಕ್ಕೆ ಮುಜುಗರ ಆಗಬಾರದು ಎಂದು ರಾಜೀನಾಮೆ ನೀಡುತ್ತಿದ್ದೇವೆ. ನಮ್ಮ ರಾಜೀನಾಮೆ ಅಂಗೀಕರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

 

ಮುಖಪುಟ /ಸುದ್ದಿ ಸಮಾಚಾರ