ಮುಖಪುಟ /ಸುದ್ದಿ ಸಮಾಚಾರ 

ಬಿಕ್ಕಿ ಬಿಕ್ಕಿ ಅತ್ತ ಸಚಿವ ಸಹೋದ್ಯೋಗಿಗಳು

ಬೆಂಗಳೂರು, ಫೆ. ೧೪: ಇಂದು ಬಿಜೆಪಿ ಪಾಳಯಕ್ಕೆ ಭರಸಿಡಿಲು ಬಡಿದಿತ್ತು. ಮಧ್ಯಾಹ್ನದ ಹೊತ್ತಿಗೆ ಆಘಾತಕಾರಿ ಸುದ್ದಿಯೊಂದು ರಾಜ್ಯದ ಬಿಜೆಪಿ ಸಚಿವರು, ಶಾಸಕರಿಗೆ ಆಘಾತ ಉಂಟು ಮಾಡಿತ್ತು. ಸಜ್ಜನ ರಾಜಕಾರಣಿ, ಆತ್ಮೀಯರಲ್ಲಿ ಆತ್ಮೀಯರಾದ ಡಾ.ವಿ.ಎಸ್. ಆಚಾರ್ಯ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.

ನಗರದ ಸರ್ಕಾರಿ ವಿಜ್ಞಾನ ಕಾಲೇಜು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಂದು ಗಂಟೆ ತಡವಾಗಿ ಆಗಮಿಸಿದ ಆಚಾರ್ಯರು ಸಮಾರಂಭದಲ್ಲೇ ಕುಸಿದುಬಿದ್ದರು, ಅವರನ್ನು ಕೂಡಲೇ ಮಲ್ಲಿಗೆ ಆಸ್ಪತ್ರೆಗೆ ಸೇರಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಅವರು ನಿಧನಹೊಂದಿದ್ದಾರೆ ಎಂದು ವೈದ್ಯರು ತಿಳಿಸಿದರು.

ಈ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಸಚಿವರು, ಶಾಸಕರು, ಬಿಜೆಪಿ ಕಾರ್ಯಕರ್ತರು ಮಲ್ಲಿಗೆ ಆಸ್ಪತ್ರೆಗೆ ಧಾವಿಸಿದರು. ತಮಗೆ ಮಾರ್ಗದರ್ಶಕರಾಗಿದ್ದ ಸುಸಂಸ್ಕೃತ ರಾಜಕಾರಣಿಯ ಮೃತದೇಹ ಕಂಡು ಹಲವು ಸಚಿವರು ಬಿಕ್ಕಿ ಬಿಕ್ಕಿ ಅತ್ತರು.

ಮುಖ್ಯಮಂತ್ರಿ ಸದಾನಂದಗೌಡ ಅವರು ಕೂಡ ಸಾವಿನ ನೋವು ತಾಳಲಾರದೆ ಗಳಗಳನೆ ಅತ್ತೇ ಬಿಟ್ಟರು, ಮಾಜಿ ಸಚಿವ ರಾಮಚಂದ್ರಗೌಡ ಬಿಕ್ಕಿ ಬಿಕ್ಕಿ ಅತ್ತರು. ಹಲವರಿಗೆ ಈ ಆಘಾತಕಾರಿ ಸುದ್ದಿಯನ್ನು ಮೃತದೇಹ ನೋಡಿದರೂ ನಂಬಲಾಗದಂತಾಗಿತ್ತು. 

ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸುರೇಶ್‌ಕುಮಾರ್, ಮುರುಗೇಶ್ ನಿರಾಣಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಧನಂಜಯ ಕುಮಾರ್ ಕಣ್ಣಂಚಿನಲ್ಲಿ ನೀರ ಹನಿಗಳು ಹರಿದವು.   

ಮುಖಪುಟ /ಸುದ್ದಿ ಸಮಾಚಾರ