ಮುಖಪುಟ /ಸುದ್ದಿ ಸಮಾಚಾರ 

ಆಚಾರ್ಯ ನಿಧನಕ್ಕೆ ಸಿ.ಎಂ.ಕಂಬನಿ

Dr. V.S. Acharyaಬೆಂಗಳೂರು, ಫೆ.೧೪: ನನ್ನ ಸಚಿವ ಸಂಪುಟದ ಹಿರಿಯ ಸದಸ್ಯರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ:ವಿ.ಎಸ್.ಆಚಾರ್ಯರವರ ಹಠಾತ್ ನಿಧನ ನನಗೆ ಅತೀವ ದುಃಖವನ್ನು ಉಂಟುಮಾಡಿದೆ. ಇದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸದಾನಂದಗೌಡ ಕಂಬನಿ ಮಿಡಿದಿದ್ದಾರೆ.

ಜನಸಂಘದ ದಿನಗಳಿಂದಲೂ ಬಿ.ಜೆ.ಪಿ.ಯೊಡನೆ ಒಡನಾಟ ಹೊಂದಿದ್ದ ಡಾ:ಆಚಾರ್ಯ ಅವರು ವೈಯಕ್ತಿಕವಾಗಿ ನನಗೆ ಗುರು, ಹಿತೈಷಿ ಹಾಗೂ ಮಾರ್ಗದರ್ಶಕರಾಗಿದ್ದರು, ನಾನು ಮುಖ್ಯಮಂತ್ರಿಯಾದ ನಂತರವೂ ಡಾ:ಆಚಾರ್ಯ ಅವರ ಮೌಲಿಕ ಮಾರ್ಗದರ್ಶನ ನನಗೆ ದೊರಕಿತ್ತು. ಅವರ ಅಪಾರ ಆಡಳಿತ ಅನುಭವ, ಸೌಮ್ಯ ಸ್ವಭಾವ ನನಗೆ ಪ್ರೇರಕ ಶಕ್ತಿಯಾಗಿತ್ತು. ಅವರ ನಿಧನ ತೀರಾ ಅನಿರೀಕ್ಷಿತ ಮತ್ತು ಆಘಾತಕಾರಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. 

ಅತಿ ಕಿರಿಯ ವಯಸ್ಸಿನಲ್ಲಿ ಉಡುಪಿಯ ಪುರಸಭೆ ಅಧ್ಯಕ್ಷರಾಗಿ ಆಚಾರ್ಯ ಅವರು ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳು ಇಂದಿಗೂ ಸ್ಮರಣೀಯ. ಇಡೀ ದೇಶದಲ್ಲೇ ಮೊಟ್ಟ ಮೊದಲನೇ ಬಾರಿಗೆ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ರದ್ದುಮಾಡಿದ ಹೆಗ್ಗಳಿಕೆ ಅವರದು.  ೧೯೭೫ರಿಂದ ೧೯೭೭ರ ತುರ್ತು ಪರಿಸ್ಥಿತಿ ಅವಧಿಯಲ್ಲಿ ೧೯ ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು.  ೧೯೮೩ರಲ್ಲಿ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ಬಿ.ಜೆ.ಪಿ. ಶಾಸಕಾಂಗ ಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲಾಗದು.

೧೯೯೬, ೨೦೦೨ ಮತ್ತು ೨೦೦೬ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ, ೨೦೦೬ರಿಂದ ೨೦೦೭ರವರೆಗೆ ವೈದ್ಯಕೀಯ ಶಿಕ್ಷಣ ಸಚಿವರಾಗಿ ಒಂದೇ ವರ್ಷದಲ್ಲಿ ೬ ನೂತನ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಅವರದು. ೨೦೦೮ರ ನಂತರ ಗೃಹ ಖಾತೆ, ಉನ್ನತ ಶಿಕ್ಷಣ, ಮುಜರಾಯಿ, ಯೋಜನೆ, ಹೀಗೆ ಹಲವಾರು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅವರು ದಕ್ಷ ಆಡಳಿತಗಾರರೆಂದು ನಿರೂಪಿಸಿದ್ದರು.

ಡಾ: ಆಚಾರ್ಯರವರು ತಮ್ಮ ರಾಜಕೀಯ ಜೀವನದುದ್ದಕ್ಕೂ ದಕ್ಷತೆ, ಪ್ರಾಮಾಣಿಕತೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡು ಬಂದಂತಹ ಅತ್ಯಂತ ಧೀಮಂತ ನಾಯಕ. ಇಂತಹ ಒಬ್ಬ ಒಳ್ಳೆಯ ರಾಜಕಾರಣಿ ಹಾಗೂ ಉತ್ತಮ ಆಡಳಿತಗಾರರನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ನನಗೆ ಮತ್ತು ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ.

ಡಾ: ಆಚಾರ್ಯರವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸಿದ್ದಾರೆ.

 

ಮುಖಪುಟ /ಸುದ್ದಿ ಸಮಾಚಾರ