ಮುಖಪುಟ /ಸುದ್ದಿ ಸಮಾಚಾರ 

 ಮಲ್ಪೆ ಬೀಚ್ ಕಾಮಕೇಳಿ ಸಮರ್ಥಿಸಿಕೊಂಡ ಸದಾ
ಸಚಿವರ ಈ ದುರ್ವರ್ತನೆಯನ್ನೂ ಸಮರ್ಥಿಸುತ್ತಾರಾ
?

ಟಿ.ಎಂ.ಸತೀಶ್

ಬೆಂಗಳೂರು, ಫೆ. ೭:- ಬಿಜೆಪಿ ಸಚಿವರಿಬ್ಬರ ನಿಜ ಬಣ್ಣ ಈಗ ಬಯಲಾಗಿದೆ. ಪವಿತ್ರವಾದ ಸದನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಸಹಕಾರ ಸಚಿವ ಲಕ್ಷ್ಮಣ ಸವದಿ ಕಾಮಕೇಳಿಯ ದೃಶ್ಯಗಳನ್ನು ವೀಕ್ಷಿಸಿ ಸಿಕ್ಕಿಬಿದ್ದಿದ್ದಾರೆ. ಜನರೆಲ್ಲಾ ಛೀ ಥೂ ಎಂದು ಉಗಿಯುತ್ತಿದ್ದಾರೆ. ಶಿಸ್ತಿನ ಪಕ್ಷ ಎಂದು ಹೆಸರಾಗಿದ್ದ ಬಿಜೆಪಿ ತಲೆತಗ್ಗಿಸುವಂತಾಗಿದೆ.

ಈ ಇಬ್ಬರು ಸಚಿವರು ಇಂಥ ಅಶ್ಲೀಲ ದೃಶ್ಯವನ್ನು ಅದೂ ಸದನದಲ್ಲಿ ವೀಕ್ಷಿಸುತ್ತಿರುವ ದೃಶ್ಯಗಳು ದೇಶಾದ್ಯಂತ ಪ್ರಸಾರವಾಗಿರುವ ಹಿನ್ನೆಲೆಯಲ್ಲಿ ಸಂಸ್ಕೃತಿಗೆ ಹೆಸರಾಗಿದ್ದ ರಾಜ್ಯದ ಜನತೆ ಕೂಡ ಇಂಥ ನಾಯಕರನ್ನು ನಾವು ಆರಿಸಿ ಕಳುಹಿಸಿದೆವಲ್ಲ ಎಂದು ತಲೆತಗ್ಗಿಸುವಂತಾಗಿದೆ.

ಇದು ಅಶ್ಲೀಲ ದೃಶ್ಯವಲ್ಲ, ವಿದೇಶದಲ್ಲಿ ನಡೆದ ಅತ್ಯಾಚಾರ ಕೊಲೆಯ ಘಟನೆ ಎಂದು ಸಚಿವರು ಸಮಜಾಯಿಷಿ ಕೊಟ್ಟಿರಬಹುದು, ಆದರೆ, ಸದನದಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಹೀಗಿದ್ದೂ ಜವಾಬ್ದಾರಿಯುತ ಸಚಿವರು ಹೀಗೆ ಬೇಜವಾಬ್ದಾರಿಯಿಂದ ವರ್ತಿಸಿದ್ದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಕೆಲವೇ ತಿಂಗಳುಗಳ ಹಿಂದೆ ತುಮಕೂರಿನಲ್ಲಿ ಸರ್ಕಾರಿ ಸಭೆಯೊಂದರಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದ ಅಧಿಕಾರಿಯೊಬ್ಬರಿಗೆ ಸಚಿವ ಸುರೇಶ್ ಕುಮಾರ್, ನಿಮಗೆ ಹೆಂಡತಿ ಮಕ್ಕಳಿಲ್ಲವೇ, ಅಕ್ಕ ತಂಗಿಯರಿಲ್ಲವೇ, ನಿಮಗೆ ನಾಚಿಕೆ ಆಗಬೇಕು ಎಂದು ಬೈದಿದ್ದರು. ಸಭೆ ನಡೆಯುವಾಗ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಆ ಅಧಿಕಾರಿ ಅಮಾನತು ಮಾಡಿದ್ದರು. ಈಗ ಈ ಇಬ್ಬರು ಸಚಿವರಿಗೆ ಏನು ಮಾಡುತ್ತಾರೆ.

ಸೌಮ್ಯ ಸ್ವಭಾವದ ಸದಾ ಹಸನ್ಮುಖಿಯಾದ ಮತ್ತು ಇತ್ತೀಚೆಗಷ್ಟೇ ಪ್ರವಾಸೋದ್ಯಮ ನೆಪದಲ್ಲಿ ಉಡುಪಿಯ ಮಲ್ಪೆಯಲ್ಲಿ ನಡೆದ ಅಶ್ಲೀಲತೆಯ ಉತ್ತುಂಗವನ್ನೂ ಸಮರ್ಥಿಸಿಕೊಂಡಿದ್ದ ಸದಾನಂದಗೌಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಹಾಗೂ ಅವರೊಂದಿಗೆ ಸಹಕಾರ ನೀಡಿದ ಸಹಕಾರ ಸಚಿವರಿಬ್ಬರ ರಾಜೀನಾಮೆ ಪಡೆಯುವ ಧೈರ್ಯ ತೋರುತ್ತಾರೆಯೇ ಅಥವಾ ಇದನ್ನೂ ಸಮರ್ಥಿಸಿಕೊಳ್ಳುತ್ತಾರೆಯೇ ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಸಭಾಧ್ಯಕ್ಷರು ತಮಗೆ ಈ ಬಗ್ಗೆ ಗೊತ್ತಿಲ್ಲ. ವಿಚಾರ ಏನೆಂದು ತಿಳಿದು ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿ ಸದ್ಯಕ್ಕೆ ಕೈತೊಳೆದುಕೊಂಡಿದ್ದಾರೆ. ಸಭೆಯನ್ನು ನಡೆಸುವ ಹೊಣೆಹೊತ್ತ ಸಭಾಧ್ಯಕ್ಷರು, ಸದನಕ್ಕೆ ಸಚಿವರು ಮಾಡಿರುವ ಅಗೌರವವನ್ನು ಗಂಭೀರವಾಗಿಯೇ ಪರಿಗಣಿಸಬೇಕು. ಅವರು ನಿಜಕ್ಕೂ ದಿಟ್ಟ ನಿರ್ಧಾರ ಕೈಗೊಳ್ಳುತ್ತಾರೆಯೇ ಈ ಪ್ರಶ್ನೆಯೂ ಜನರ ಮುಂದಿದೆ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೇಲ್ಮನೆ ಹಾಗೂ ಕೆಳಮನೆಗಳಿಗೆ ಅಪಾರವಾದ ಗೌರವ ಇದೆ. ಶಾಸನ ರಚಿಸುವ ಸಭೆಯಲ್ಲಿ ಬೇರೆಲ್ಲೊ ಮಹಿಳೆಯರ ಮೇಲೆ ಅತ್ಯಾಚಾರವಾದರೆ ಆ ಬಗ್ಗೆ ಚರ್ಚೆ ನಡೆಯುತ್ತದೆ. ಅದನ್ನು ತಡೆಯಲು ಶಾಸನ ರಚನೆಯಾಗುತ್ತದೆ. ಆದರೆ ಇಂಥ ಪವಿತ್ರ ಸ್ಥಳದಲ್ಲೇ ಅಶ್ಲೀಲ ವಿಡಿಯೋ ವೀಕ್ಷಿಸುವ ಸಚಿವರಿಗೆ ಒಂದು ನ್ಯಾಯ, ಶ್ರೀಸಾಮಾನ್ಯರಿಗೆ ಒಂದು ನ್ಯಾಯವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ  ಶಿಸ್ತು, ಹಿಂಧುತ್ವ, ಸಂಸ್ಕೃತಿಯ ಪಾಠ ಮಾಡುವ ಹಾಗೂ ಸರ್ಕಾರದ ಕಿವಿಯನ್ನು ಆಗಾಗ್ಗೆ ಹಿಂಡುವ ಆರ್.ಎಸ್.ಎಸ್. ಏನು ಹೇಳುತ್ತದೆ.

ರಾಜ್ಯದಲ್ಲಿ ಸಚಿವರಾಗಿದ್ದ ಹಾಲಪ್ಪ ಅವರು ತಮ್ಮ ಗೆಳೆಯನ ಪತ್ನಿ ಚಂದ್ರಾವತಿ ಅವರ ಮೇಲೆ ಅತ್ಯಾಚಾರ ಮಾಡಿದರೆಂಬ ಪ್ರಕರಣ, ರೇಣುಕಾಚಾರ್ಯ - ಜಯಲಕ್ಷ್ಮೀ ಮುತ್ತಿನ ಪ್ರಕರಣದ ಬಳಿಕ ಈ ಪ್ರಕರಣ ಸುದ್ದಿ ಮಾಡಿದೆ. ಒಟ್ಟಿನಲ್ಲಿ ಶಿಸ್ತಿಗೆ ಹೆಸರಾದ, ರಾಮಮಂತ್ರ ಜಪಿಸುವ ಬಿಜೆಪಿಯಲ್ಲಿ ರಾವಣ, ದುಶ್ಶಾಸನರು ಇದ್ದಾರೆ ಎಂದು ಜನ ಆಡಿಕೊಳ್ಳುವಂತಾಗಿದೆ. ಬಿಜೆಪಿ ಸರ್ಕಾರ ತನ್ನ ಗೌರವ ಕಾಪಾಡಿಕೊಳ್ಳಲು ನಾಳೆ ಸದನ ಆರಂಭವಾಗುವುದರೊಳಗೆ ಈ ಇಬ್ಬರು ಸಚಿವರ ರಾಜೀನಾಮೆ ಪಡೆದು ಸದನ ಪ್ರವೇಶಿಸುತ್ತಿದೆಯೇ ಅಥವಾ ಇಬ್ಬರು ಸಚಿವರ ರಕ್ಷಣೆಗೆ ಮುಂದಾಗಿ ಉಭಯ ಸದನಗಳಲ್ಲಿ ಮುಜುಗರಕ್ಕೆ ಒಳಗಾಗುತ್ತದೆಯೇ ಎಂಬುದು ಈಗ ಎಲ್ಲರ ಮುಂದಿರುವ ಯಕ್ಷಪ್ರಶ್ನೆ

ಮುಖಪುಟ /ಸುದ್ದಿ ಸಮಾಚಾರ