ಮುಖಪುಟ /ಸುದ್ದಿ ಸಮಾಚಾರ 

ಸಜ್ಜನ ರಾಜಕಾರಣಿ ಆಚಾರ್ಯ ವಿಧಿವಶ

Dr. V.S. Acharyaಬೆಂಗಳೂರು, ಫೆ. ೧೪: ಸರಳ ಸಜ್ಜನ ರಾಜಕಾರಣಿ, ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಬೆಂಗಳೂರಿನಲ್ಲಿಂದು ನಿಧನಹೊಂದಿದರು. ಅವರಿಗೆ ೭೩ ವರ್ಷ ವಯಸ್ಸಾಗಿತ್ತು.

ಇಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಹೃದಯಾಘಾತಕ್ಕೆ ಈಡಾಗಿ ಕುಸಿದು ಬಿದ್ದರು, ತತ್‌ಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಫಲಕಾರಿಯಾಗಲಿಲ್ಲ.

ಆಚಾರ್ಯ  ತಮ್ಮ ಪತ್ನಿ ಶಾಂತಾ, ಓರ್ವ ಪುತ್ರಿ ಹಾಗೂ ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ.

ಪಶ್ಚಿಮ ಕರಾವಳಿಯ ಬ್ರಾಹ್ಮಣ ಕುಟುಂಬದಲ್ಲಿ ೧೯೩೯ರಲ್ಲಿ ಜನಿಸಿದ ಡಾ.ವಿ.ಎಸ್. ಆಚಾರ್ಯ ಸಜ್ಜನಿಕೆಗೆ ಹೆಸರಾದ ಧೀಮಂತ ರಾಜಕಾರಣಿ. ಮಣಿಪಾಲದ ಕಸ್ತೂರ ಬಾ ಮೆಡಿಕಲ್ ಕಾಲೇಜಿನಿಂದ ವೈದ್ಯಪದವಿ ಪಡೆದು ೧೯೬೫ರಿಂದ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದ ಆಚಾರ್ಯ ಸಾರ್ವಜನಿಕ ಜೀವನಕ್ಕೆ ಪದಾರ್ಪಣ ಮಾಡಿದ್ದು ಭಾರತೀಯ ಜನಸಂಘದ ಮೂಲಕ.

೧೯೬೮ರಲ್ಲಿ ಉಡುಪಿ ನಗರ ಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಚಾರ್ಯರಿಗೆ ಅತಿ ಕಿರಿಯ ವಯಸ್ಸಿನಲ್ಲೇ ನಗರಸಭೆ ಅಧ್ಯಕ್ಷಗಾದಿ ಏರುವ ಅವಕಾಶವನ್ನೂ ತಂದುಕೊಟ್ಟಿತು.

ಸಿಕ್ಕ ಮೊದಲ ಅವಕಾಶದಲ್ಲೇ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಆಚಾರ್ಯ ಅನುಷ್ಠಾನಕ್ಕೆ ತಂದ ಸ್ವರ್ಣ ಕುಡಿಯುವ ನೀರಿನ ಯೋಜನೆ, ಆಚಾರ್ಯರ ಜನಪ್ರಿಯತೆಯನ್ನು ನೂರ್ಮಡಿಗೊಳಿಸಿತು. ವೃತ್ತಿಯಲ್ಲಿ ವೈದ್ಯರಾಗಿದ್ದ ಆಚಾರ್ಯ ನಗರಸಭೆಗೂ ಕಾಯಕಲ್ಪ ಚಿಕಿತ್ಸೆ ನಡೆಸಿದರು. ನಗರಾಭಿವೃದ್ಧಿಗೆ ನಗರ ಯೋಜನಾ ಮಂಡಳಿ ರಚಿಸಿದರು, ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ತಂದರು. ಜನಪರವಾದ ಈ ಕಾರ್ಯಗಳು ರಾಜಕೀಯದಲ್ಲಿ ಆಚಾರ್ಯರ ಸ್ಥಾನವನ್ನು ಗಟ್ಟಿಗೊಳಿಸಿದವು.

ತಲೆಯ ಮೇಲೆ ಮಲ ಹೊರುವ ಅನಿಷ್ಠ ಪದ್ಧತಿಯನ್ನು ಇಡಿ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ರದ್ದು ಮಾಡಿದ  ನಗರ ಸಭೆ ಎಂಬ ಹೆಗ್ಗಳಿಕೆ ಉಡುಪಿಗೆ ಸಲ್ಲುವಂತೆ ಮಾಡಿದ ಕೀರ್ತಿಯೂ ಆಚಾರ್ಯ ಅವರಿಗೇ ಸಲ್ಲುತ್ತದೆ. ಇದು ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನೂ ತಂದುಕೊಟ್ಟಿತು.

೮ ವರ್ಷಗಳ ಕಾಲ ನಗರ ಸಭೆ ಅಧ್ಯಕ್ಷರಾಗಿ, ೧೦ ವರ್ಷಗಳ ಕಾಲ ಭಾರತೀಯ ಜನಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ೨ ದಶಕಗಳ ಕಾಲ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ೨೦ ವರ್ಷಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಪಕ್ಷದ ಬಲವರ್ಧನೆಯಲ್ಲಿಯೂ ಆಚಾರ್ಯರ ಕೊಡುಗೆ ಅನುಪಮ.

ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ನಡೆದ ಚಳವಳಿಯಲ್ಲಿ ಭಾಗವಹಿಸಿ ೧೯ ತಿಂಗಳುಗಳ ಕಾಲ ಸೆರೆವಾಸವನ್ನೂ ಅನುಭವಿಸಿದ ಆಚಾರ್ಯ ೧೯೮೩ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಶಾಸಕರಾದವರು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಮೇಲ್ಪಂಕ್ತಿ ಹಾಕಿಕೊಡುವ ರೀತಿಯಲ್ಲಿ ಆಚಾರ್ಯ ಕಾರ್ಯ ನಿರ್ವಹಿಸಿದರು.

ಸಾರ್ವಜನಿಕರಿಗೆ ಅನುಕೂಲವಾಗುವಂತಹ ಹಲವು ಶಾಸನ ತಿದ್ದುಪಡಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಜ್ಯದಲ್ಲಿ ಪೌರಾಡಳಿತ ನಿರ್ದೇಶನಾಲಯ, ಭೂ ನ್ಯಾಯ ಮಂಡಳಿಗಳ ಮೇಲೆ ಅಪಲೇಟ್ ಟ್ರಿಬ್ಯೂನಲ್ ರಚನೆ, ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ಡೀಸೆಲ್ ಮೇಲಿನ ತೆರಿಗೆ ರಿಯಾಯಿತಿ, ಮಾರಾಟ ತೆರಿಗೆ ಸರಳೀಕರಣ, ತಮ್ಮ ಸ್ವಕ್ಷೇತ್ರದಲ್ಲಿ ನಾಲ್ಕು ಸೇತುವೆಗಳ ನಿರ್ಮಾಣ ಆಚಾರ್ಯರ ಪ್ರಯತ್ನದ ಫಲವಾಗಿ ಕೈಗೂಡಿದವು.

೧೯೯೬ರಲ್ಲಿ ವಿಧಾನಪರಿಷತ್ ಸದಸ್ಯರಾದ ಆಚಾರ್ಯ ಅವರು ಈಗಲೂ ವಿಧಾನಪರಿಷತ್ ಸದಸ್ಯರಾಗಿ ಮುಂದುವರಿದಿದ್ದರು.

ವೃತ್ತಿಯಲ್ಲಿ ವೈದ್ಯರಾದ ಆಚಾರ್ಯ ಅವರು, ೨೦೦೬ರಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದರು.  ಪ್ರತಿವರ್ಷ  ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಸಂದರ್ಭದಲ್ಲಿ ಉದ್ಭವಿಸುತ್ತಿದ್ದ ಶಿಕ್ಷಣ ಮಂಡಳಿ ಹಾಗೂ ಸರ್ಕಾರದ ನಡುವಿನ ಜಟಾಪಟಿಗೆ ಕಾರಣವಾಗಿ, ಹಲವು ವರ್ಷಗಳಿಂದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ತಲೆನೋವಾಗಿದ್ದ ಸಿಇಟಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಆಚಾರ್ಯರ ಪಾತ್ರವನ್ನೂ ಮರೆಯುವಂತಿಲ್ಲ.

ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಆಚಾರ್ಯ, ಆರಂಭದಲ್ಲಿಯೇ ಆತಂಕ ಎದುರಿಸಿದರು, ರೈತರ ರಸಗೊಬ್ಬರ ಚಳವಳಿ, ಹಾವೇರಿಯಲ್ಲಿ ಪೊಲೀಸ್ ಗೋಲಿಬಾರ್‌ನಂಥ ಪರಿಸ್ಥಿತಿಯನ್ನು ಕಂಡ ಆಚಾರ್ಯರಿಗೆ ಮತ್ತೊಂದು ಸವಾಲಾಗಿದ್ದು, ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ.

ಜೊತೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿ. ಪ್ರತಿಪಕ್ಷಗಳಿಂದ ವ್ಯಾಪಕ ಪ್ರತಿಭಟನೆ. ಕೇಂದ್ರ ತಂಡದಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಾಮರ್ಶೆ. ಇಂಥ ಹಲವು ಕ್ಲಿಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದ ಆಚಾರ್ಯ ನಂತರ ಉನ್ನತ ಶಿಕ್ಷಣ ಮತ್ತು ಮುಜರಾಯಿ ಖಾತೆ ವಹಿಸಿಕೊಂಡರು. 

ಸದಾನಂದಗೌಡರ ಸರ್ಕಾರದಲ್ಲೂ ಅವರು ಈ ಎರಡು ಹುದ್ದೆಗಳ ಜವಾಬ್ದಾರಿಯನ್ನೇ ಹೊತ್ತಿದ್ದರು.

ಮುಖಪುಟ /ಸುದ್ದಿ ಸಮಾಚಾರ