ಮುಖಪುಟ /ಸುದ್ದಿ ಸಮಾಚಾರ   
      

ಪ್ರತಿವರ್ಷ ಪಠ್ಯಕ್ರಮ ಪರಿಷ್ಕರಣೆ - ಮೊಯ್ಲಿ ಪ್ರತಿಪಾದನೆ

VeerappaMoilyಬೆಂಗಳೂರು, ಫೆ. ೧೫: ಪ್ರತಿವರ್ಷವೂ ಪಠ್ಯಕ್ರಮವನ್ನು ಪರಿಷ್ಕರಣೆ ಮಾಡಬೇಕು, ಆ ಮೂಲಕ ಶಿಕ್ಷಣದಲ್ಲಿ ವರ್ಣಾಶ್ರಮ ನೀತಿಯನ್ನು ತೊಡೆದುಹಾಕಿ, ಎಲ್ಲ ಸಮುದಾಯ, ವರ್ಗದವರಿಗೂ ಜ್ಞಾನದ ಸಿಂಚನ ಮಾಡಬೇಕು ಎಂದು ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಪ್ರತಿಪಾದಿಸಿದ್ದಾರೆ.

ಇಂದು ನಗರದಲ್ಲಿ ನಡೆದ  ಪಾತ್ರರಾದ ಬೆಂಗಳೂರು ವಿಶ್ವವಿದ್ಯಾಲಯದ ೪೬ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಶಿಕ್ಷಣದ ವಾಣಿಜ್ಯೀಕರಣದ ವಿರುದ್ಧ ಹೋರಾಟ ನಡೆಯಲೇಬೇಕು, ಶಿಕ್ಷಣದಲ್ಲಿ ಗುಣಮಟ್ಟವನ್ನು ಸುಸ್ಥಿರವಾಗಿ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಬೆಂಗಳೂರಿನ ಪ್ರಸಿದ್ಧ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಅಭಿವೃದ್ಧಿಗೆ ೧೦೦ ಕೋಟಿ ರೂಪಾಯಿ ಅನುದಾನ ದೊರಕಿಸಿಕೊಡುವುದಾಗಿ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಭರವಸೆ ನೀಡಿದರು. ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜನ್ನು ಅತ್ಯುತ್ಕೃಷ್ಟ ದರ್ಜೆಯ ಅಧ್ಯಯನ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.

ಸ್ವತಃ ಕವಿಗಳೂ ಆದ ವೀರಪ್ಪ ಮೊಯ್ಲಿ ಅವರು ಕಾವ್ಯಮಯವಾಗಿ ಮಾತನಾಡಿ, ಭಾರತ ಭೂಮಿಯಲ್ಲಿ ಜ್ಞಾನಗಂಗೆಯನ್ನು ಹರಿಸಿ ಫಲವತ್ತತೆಯನ್ನು ಕಾಣಬೇಕೆಂದು ಆಶಿಸಿದರು. ಭಾರತಕ್ಕೆ ಇಂದು ಬೆಲೆ ಬಂದಿರುವುದೇ ನಮ್ಮಲ್ಲಿರುವ ಜ್ಞಾನಾಧಾರಿತ ಯೋಜನೆಗಳಿಂದ ಹಾಗೂ ಜ್ಞಾನವಂತರಿಂದ. ಭಾರತದ ಬುದ್ಧಿಗೆ ವಿದೇಶಗಳಲ್ಲಿ ಬಂಗಾರದ ಬೆಲೆ ಇದೆ ಎಂದು ಪ್ರತಿಪಾದಿಸಿದರು.

ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಹೇರಳವಾದ ಅವಕಾಶಗಳಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು, ಇದರಿಂದ ಅವರ ಉದ್ಧಾರವೂ ಆಗುತ್ತದೆ, ಭಾರತವೂ ಸದೃಢವಾಗುತ್ತದೆ ಎಂದು ಹೇಳಿದರು.

ಮುಂದಿನ ೩೦ ವರ್ಷಗಳ ಕಾಲ ಭಾರತ ಯುವಜನರ ರಾಷ್ಟ್ರವಾಗಿ ಮುಂದುವರಿಯಲಿದ್ದು, ಇದರ ಲಾಭವನ್ನು ರಾಷ್ಟ್ರ ಸಮರ್ಥವಾಗಿ ಬಳಸಿಕೊಂಡರೆ ವಿಶ್ವದ ಶಕ್ತಿಯಾಗಿ ಹೊರಹೊಮ್ಮಬಹುದು ಎಂದು ಅಭಿಪ್ರಾಯಪಟ್ಟರು.

ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ೨೦೨೦ರ ಹೊತ್ತಿಗೆ ೧೬ ದಶಲಕ್ಷಕ್ಕೆ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದೆ ಎದುರಾಗಲಿರುವ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಾಗಿದೆ ಎಂದು ಹೇಳಿದರು.

 ಮುಖಪುಟ /ಸುದ್ದಿ ಸಮಾಚಾರ