ಮುಖಪುಟ /ಸುದ್ದಿ ಸಮಾಚಾರ   
      

ಹಂಪಿ ಸ್ಮಾರಕ ರಕ್ಷಣೆಗೆ ಕೋರ್ಟ್ ಸೂಚನೆ

High Court of Karnatakaಬೆಂಗಳೂರು, ಫೆ.೧೫: ನಿಮಗೆ ಉತ್ಸವ ನಡೆಸಲು ಹಣವಿದೆ. ನ್ಯಾಯಾಲಯಗಳಿಗೆ ಮೂಲಸೌಕರ್ಯ ನೀಡಲು ಹಣವಿಲ್ಲವೇ. ಹೀಗೆಂದು ಸರ್ಕಾರಕ್ಕೆ ಪ್ರಶ್ನಿಸಿದ್ದು ಬೇರೆ ಯಾರು ಅಲ್ಲ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ.

ಕೊಟ್ಟೂರು ಸ್ವಾಮಿ ಸೇವಾ ಕೇಂದ್ರ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷ ದೇವಾಲಯದ ಸುತ್ತಮುತ್ತಲ ಒತ್ತುವರಿ ತೆರವು ಕೈಗೊಳ್ಳಲು ವಿಫಲವಾಗಿರುವ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠ ಈ ಪ್ರಶ್ನೆ ಮುಂದಿಟ್ಟಿತು.

ವಿಶ್ವಪರಂಪರೆಯ ತಾಣವಾದ ಹಂಪಿ ದೇವಾಲಯದ ಮುಂಭಾಗದ ಇಕ್ಕೆಲಗಳಲ್ ಒತ್ತುವರಿಯಾಗಿರುವ ಭೂಮಿಯಲ್ಲಿ ತಲೆ ಎತ್ತಿರುವ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಹಾಗೂ ದೇವಾಲಯದ ಸಮಗ್ರ ಅಭಿವೃದ್ಧಿಗೆ  ಕ್ರಮ ಕೈಗೊಳ್ಳದಿರುವ ಬಗ್ಗೆ ರಾಜ್ಯ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಕೂಡಲೆ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ವರ್ಷ ಹಂಪಿ ಉತ್ಸವ ಆಚರಿಸಲು ಅವಕಾಶ ನೀಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿತು.

ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಹಾಗೂ ಎಸ್.ಎ. ಬೋಪಣ್ಣ ಅರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠದ ಈ ಪ್ರಶ್ನೆಗಳಿಗೆ ಉತ್ತರ ನೀಡಿದ  ಸರ್ಕಾರಿ ಅಭಿಯೋಜಕರು, ವಿಶ್ವಪಾರಂಪರಿಕ ತಾಣವಾದ ಹಂಪಿಗೆ ಮಹತ್ವವಿದೆ, ಇತಿಹಾಸವಿದೆ, ಐತಿಹ್ಯವಿದೆ. ಇಷ್ಟು ಸುಂದರವಾದ ತಾಣವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ೨೦೦೨ರಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲರು ಸಮಗ್ರ ಅಭಿವೃದ್ದಿ ಆಗದಿರುವ ಬಗ್ಗೆ ಮತ್ತು, ದೇವಾಲಯದ ಮುಂಭಾಗದ ಇಕ್ಕೆಲಗಳಲ್ಲಿ ಅವ್ಯಾಹತವಾಗಿ ನಡೆದಿರುವ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪಣೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ ೫೦೦ನೇ ವರ್ಷಾಚರಣೆಗೆ ೩೭ ಕೋಟಿ ರೂಪಾಯಿ ವೆಚ್ಚ ಮಾಡಿದ ಬಗ್ಗೆ ಸಹ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ಈ ವರ್ಷ ನಡೆಯಲಿರುವ ಹಂಪಿ ಉತ್ಸವಕ್ಕೆ ೧೦ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂಬ ಸರ್ಕಾರಿ ಪರ ವಕೀಲರ ಹೇಳಿಕೆಯಿಂದ ನಿಬ್ಬೆರಗಾಗಿ, ಕೇವಲ ಹಬ್ಬ, ಉತ್ಸವದ ಆಚರಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅಭಿವೃದ್ಧಿಗೆ ಯೋಜನೆ ಏಕೆ ರೂಪಿಸುತ್ತಿಲ್ಲ ಎಂದು ಪ್ರಶ್ನಿಸಿತು.

ಸರ್ಕಾರಕ್ಕೆ ನ್ಯಾಯಾಲಯಗಳಿಗೆ ಮೂಲಸೌಕರ್ಯ ಒದಗಿಸಲು ಹಣ ಇಲ್ಲ, ದೇವಾಲಯದ ಸುತ್ತ ಅತಿಕ್ರಮಣ ಆಗಿರುವ ಜಾಗ ತೆರವುಗೊಳಿಸಲು ಸಮಯವಿಲ್ಲ, ಹಣವಿಲ್ಲ ಆದರೆ, ಉತ್ಸವ ಮಾಡಲು ಮಾತ್ರ ನಿಮ್ಮಲ್ಲಿ ಯಥೇಚ್ಛ ಹಣವಿದೆ ಅಲ್ಲವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿತು.

ವಿಶ್ವ ಪರಂಪರೆಯ ಸ್ಮಾರಕವಾದ ಹಂಪಿಯ ದೇವಾಲಯದ ಸುತ್ತಲ ಪ್ರದೇಶದಲ್ಲಿರುವ ಅಂಗಡಿ ಮಾಲಿಕರಿಗೆ ಪುನರ್ವಸತಿ ಕಲ್ಪಿಸಲು ವಿರೂಪಾಕ್ಷ ಗುಡ್ಡದ ಬಳಿ ಭೂಮಿ ಕಾಯ್ದಿರಿಸಲಾಗಿದೆ. ಇಲ್ಲಿಗೆ ಎಲ್ಲರನ್ನೂ ಸ್ಥಳಾಂತರಿಸಲು ಹತ್ತೂವರೆ ಕೋಟಿ ರೂಪಾಯಿ ಸಾಕು, ಇದನ್ನು ಖರ್ಚು ಮಾಡಲು ಸರ್ಕಾರಕ್ಕೆ ಹಣ ಇಲ್ಲವೆ ಎಂದು ಪೀಠ ಪ್ರಶ್ನಿಸಿದಾಗ ಸರ್ಕಾರಿ ವಕೀಲರು ನಿರುತ್ತರರಾಗಿದ್ದರು.

ಮುಂದಿನ ಎರಡು ವಾರಗಳಲ್ಲಿ ಸರ್ಕಾರ ಈ ಸಂಬಂಧ ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ವಿವರ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಪೀಠ ಮುಂದೂಡಿತು. 

 ಮುಖಪುಟ /ಸುದ್ದಿ ಸಮಾಚಾರ