ಮುಖಪುಟ /ಸುದ್ದಿ ಸಮಾಚಾರ   
      

೨೪ರಿಂದ ರಾಜ್ಯ ಬಜೆಟ್ ಅಧಿವೇಶನ

C.M.ಬೆಂಗಳೂರು, ಫೆ. 15 - ರಾಜ್ಯ ಬಜೆಟ್ ಅಧಿವೇಶನ ಫೆಬ್ರವರಿ ೨೪ರಿಂದ ಆರಂಭವಾಗಲಿದೆ. ಕರ್ನಾಟಕ ವಿಧಾನಸಭೆ ಹೊರಡಿಸಿರುವ ೧೩ನೇ ವಿಧಾನಸಭೆಯ ೯ನೇ ಅಧಿವೇಶನದ ಕಾರ್ಯಕ್ರಮ ಪಟ್ಟಿಯ ಪ್ರಕಾರ ಅಂದು ಮಧ್ಯಾಹ್ನ ೧೨ ಗಂಟೆಗೆ ಬಜೆಟ್ ಕಲಾಪ ಆರಂಭವಾಗಲಿದೆ.

೨೫ರಂದು ಸರ್ಕಾರಿ ಮತ್ತು ಖಾಸಗಿ ಕಲಾಪ ನಡೆಯಲಿದ್ದು, ೨೬ಮತ್ತು ೨೭ರಂದು ಕಲಾಪ ಇರುವುದಿಲ್ಲ. ೨೮ರಂದು ಸರ್ಕಾರಿ ಕಲಾಪ ನಡೆಯಲಿದ್ದರೆ, ಮಾರ್ಚ್ ೧ರಂದು ಸರ್ಕಾರಿ ಕಲಾಪ ಜರುಗುತ್ತದೆ. ಮಾರ್ಚ್ ೨ ಸಾರ್ವತ್ರಿಕ ರಜಾದಿನ.

ಉಳಿದಂತೆ ಮಾರ್ಚ್ ೩ರಿಂದ ೧೭ರವರೆಗೆ ಸರ್ಕಾರಿ ಮತ್ತು ಖಾಸಗಿ ಕಲಾಪಗಳು ನಡೆಯಲಿದ್ದು, ಈ ಅವಧಿಯಲ್ಲಿ ಮಾರ್ಚ್ ೬, ೧೨ ಹಾಗೂ ೧೩ರಂದು ಸಾರ್ವತ್ರಿಕ ರಜೆ ಇರುವ ಹಿನ್ನೆಲೆಯಲ್ಲಿ ಯಾವುದೇ ಕಲಾಪ ನಡೆಯುವುದಿಲ್ಲ ಎಂದು ಕಾರ್ಯದರ್ಶಿ ಎಸ್.ಬಿ. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಫೆ.25ರಂದು ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಂತಿಸಿದ್ದಾರೆ. ಆದರೆ, ಬಜೆಟ್ ಮಂಡನೆಗೆ ಪ್ರತಿಪಕ್ಷಗಳು ಅವಕಾಶ ನೀಡುತ್ತವೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಕಾರಣ ಚಳಿಗಾಲದ ಅಧಿವೇಶನದಲ್ಲಿ ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಸರ್ಕಾರದ ಭ್ರಷ್ಟಾಚಾರ ಹಗರಣಗಳ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿ ಪಡಿಸಿದ್ದವು.

 ಮುಖಪುಟ /ಸುದ್ದಿ ಸಮಾಚಾರ